ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ

ಭಾಗಮಂಡಲದಲ್ಲಿ ಭಾರಿ ಮಳೆ, ಬೆಳೆಗಾರರಲ್ಲಿ ಹರ್ಷ
Last Updated 9 ಜೂನ್ 2018, 11:15 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸಲು ಆರಂಭಿಸಿದೆ. ಗುರುವಾರ ತಡರಾತ್ರಿ ಯಿಂದ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿದ್ದು ಕಾಫಿ ನಾಡಿನ ರೈತರು ಹರ್ಷಗೊಂಡಿದ್ದಾರೆ.

ತಲಕಾವೇರಿ, ಭಾಗಮಂಡಲದಲ್ಲಿ ಸುರಿದ ಮಳೆಗೆ ತ್ರಿವೇಣಿ ಸಂಗಮವು ಭರ್ತಿಯಾಗಿದೆ. ಶುಕ್ರವಾರ ರಾತ್ರಿಯೂ ಮಳೆಯಾದರೆ ಸಂಗಮ ಮುಳುಗಡೆಯಾಗಲಿದೆ. ಇನ್ನೆರಡು ದಿನ ಮಳೆಯಾದರೆ, ಭಾಗ ಮಂಡಲ ಜಲಾವೃತಗೊಳ್ಳಲಿದೆ. ಜತೆಗೆ, ಕಾವೇರಿ ನದಿಯೂ ನಿಧಾನವಾಗಿ ಮೈದುಂಬಿ ಕೊಂಡು ಹರಿಯಲು ಆರಂಭಿಸಿದೆ.

ಮಡಿಕೇರಿ, ಅಪ್ಪಂಗಳ, ಗಾಳಿಬೀಡು, ಕಾಟಿಕೇರಿ, ತಾಳತ್ತಮನೆ ಯಲ್ಲಿ ಬಿಡುವು ನೀಡುತ್ತಾ ಜೋರು ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 64.40 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.32 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ ಮಡಿಕೇರಿ ತಾಲ್ಲೂಕಿನಲ್ಲಿ 108.80 ಮಿ.ಮೀ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 46.92 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 37.48 ಮಿ.ಮೀ ಮಳೆ ಸುರಿದಿದೆ.

ಹೋಬಳಿವಾರು ಮಳೆ: ಮಡಿಕೇರಿ ಕಸಬಾ 101.20, ನಾಪೋಕ್ಲು 85.20, ಸಂಪಾಜೆ 105.20, ಭಾಗಮಂಡಲ 143.60, ವಿರಾಜಪೇಟೆ ಕಸಬಾ 68.60, ಹುದಿಕೇರಿ 48, ಶ್ರೀಮಂಗಲ 42.80, ಪೊನ್ನಂಪೇಟೆ 48.60, ಅಮ್ಮತಿ 40.53, ಬಾಳೆಲೆ 33, ಸೋಮವಾರಪೇಟೆ ಕಸಬಾ 34.60, ಶನಿವಾರಸಂತೆ 24.30, ಶಾಂತಳ್ಳಿ 54.60, , ಕೊಡ್ಲಿಪೇಟೆ 35.40, ಕುಶಾಲನಗರ 25, ಸುಂಟಿಕೊಪ್ಪ 51 ಮಿ.ಮೀ. ಮಳೆಯಾಗಿದೆ.

ಸುಂಟಿಕೊಪ್ಪದಲ್ಲಿ 2 ಇಂಚು ಮಳೆ

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದ ಆರಂಭವಾದ ಮಳೆ ಶುಕ್ರವಾರ ಮುಂಜಾನೆಯವರೆಗೂ ಬಿರುಸಿನಿಂದ ಸುರಿದಿದ್ದು 2 ಇಂಚು ಮಳೆಯಾಗಿದೆ.

ಶುಕ್ರವಾರ ಬೆಳಗಿನಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ತುಂತುರು ಮಳೆಯ ನಡುವೆ ಆಗಾಗ್ಗೆ ರಭಸದ ಮಳೆ ಸುರಿಯಲಾರಂಭಿಸಿತು.

ಚಿಕ್ಲಿಹೊಳೆ, ಬಾಳೆಕಾಡು, ಹಾಲೇರಿ ಕೊಡಗರಹಳ್ಳಿ, ಕಂಬಿಬಾಣೆ, ಏಳನೇ ಹೊಸಕೋಟೆ, ಕೆದಕಲ್, ಮತ್ತಿಕಾಡು, ನಾಕೂರು, ಹೇರೂರು, ಮಳೂರು ಗ್ರಾಮಗಳಲ್ಲೂ ಉತ್ತಮವಾಗಿ ಮಳೆಯಾಗುತ್ತಿದೆ.

ಭಾರಿ ಶೀತಗಾಳಿ

ಶನಿವಾರಸಂತೆ: ಕೊಡ್ಲಿಪೇಟೆ, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಗಾಳಿ ಸಹಿತ ಉತ್ತಮ ಮಳೆ ಸುರಿಯಿತು. ಆಷಾಢ ಮಾಸದಲ್ಲಿ ಗಾಳಿ ಬೀಸುವಂತೆ  ಅನುಭವವಾಗುತ್ತಿದ್ದು, ಜನರು ಮನೆ ಬಿಟ್ಟು ಹೊರಬರಲು ಅಂಜುತ್ತಿದ್ದಾರೆ.

ರಭಸದ ಗಾಳಿಯೊಂದಿಗೆ ಜೋರಾಗಿ ಮಳೆ ಸುರಿದು ಕೆಲವು ಕ್ಷಣ ಬಿಡುವು ನೀಡಿ ಮತ್ತೆ ಸುರಿಯುತ್ತಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಅರ್ಧ ಇಂಚು ಮಳೆಯಾಗಿದೆ.

ಅಂಗಡಿಗಳಲ್ಲಿ ಛತ್ರಿ, ಸ್ವೆಟರ್‌, ಜರ್ಕಿನ್ ವ್ಯಾಪಾರ ಬಿರುಸಾಗಿ ನಡೆದಿದೆ. ಶುಕ್ರವಾರ ಮೃಗಶಿರ ಮಳೆ ಆರಂಭವಾಗಿದ್ದು ಉತ್ತಮವಾಗಿ ಸುರಿಯುವ ಭರವಸೆ ಮೂಡಿಸಿದೆ.

ವಿರಾಜಪೇಟೆ ವರದಿ

ತಾಲ್ಲೂಕಿನಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ರಭಸದಿಂದ ಸುರಿಯಿತು. ಬಳಿಕ  ಆಗಾಗ ಬಿಡುವು ನೀಡುತ್ತಾ ಸಾಧಾರಣ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT