ಉದ್ಯಮಿ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರಸಚಿವರಿಗೆ ಕೋಟಿ ಲಂಚ: ಸಿಬಿಐಅಧಿಕಾರಿ ಆರೋಪ

7

ಉದ್ಯಮಿ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರಸಚಿವರಿಗೆ ಕೋಟಿ ಲಂಚ: ಸಿಬಿಐಅಧಿಕಾರಿ ಆರೋಪ

Published:
Updated:

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿ ಮನೀಷ್‌ ಕುಮಾರ್‌ ಸಿನ್ಹಾ ಅವರು, ‘ಪ್ರಕರಣವೊಂದರಲ್ಲಿ ಉದ್ಯಮಿಯ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರದ ಸಚಿವರೊಬ್ಬರು ಕೆಲವು ಕೋಟಿ ಲಂಚ ಪಡೆದಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್ ಸನಾ ಅವರಿಗೆ ಸಿಬಿಐನಿಂದ ಸಮನ್ಸ್‌ ನೀಡದೆ, ತನಿಖೆಯಿಂದ ಪಾರಾಗಲು ನೆರವು ನೀಡಿ ಲಂಚ ಪಡೆದಿರುವ ಆರೋಪ ರಾಕೇಶ್‌ ಅಸ್ತಾನಾ ಅವರ ಮೇಲಿದೆ. ಮನೀಷ್‌ ಕುಮಾರ್‌ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಕೇಂದ್ರದ ಸಚಿವರೊಬ್ಬರು ಲಂಚ ಪಡೆದಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಸಿದ್ದಾರೆ.

‘ಕೇಂದ್ರ ಸಚಿವರು ಲಂಚ ಪಡೆದಿರುವ ದಾಖಲೆಗಳು ನನ್ನ ಬಳಿ ಇದ್ದು, ಅವು ಸುಪ್ರೀಂ ಕೋರ್ಟ್‌ಗೆ ಆಘಾತ ನೀಡಲಿವೆ. ಈ ಸಂಬಂಧ ಸದ್ಯ ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಸಮ್ಮುಖದಲ್ಲಿ ನಾಳೆಯೇ(ನವೆಂಬರ್‌ 20ರಂದು) ವಿಚಾರಣೆ ನಡೆಸಬೇಕು’ ಎಂದು ಕೋರಿದ್ದಾರೆ. ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ‘ಯಾವುದೂ ನಮ್ಮನ್ನು ಆಘಾತಗೊಳಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಾಂಸ ರಫ್ತು ಉದ್ಯಮಿ ಮೊಯಿನ್‌ ಖುರೇಶಿ ಅವರೊಂದಿಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಉದ್ಯಮಿ ಸತೀಶ್ ಸನಾ ಮೇಲಿದೆ.

ಈ ಪ್ರಕರಣ ಮಾತ್ರವಲ್ಲದೆ ದೇಶದ ಗಮನ ಸೆಳೆದಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣವನ್ನೂ ಮನೀಷ್‌ ಕುಮಾರ್‌ ಅವರೇ ನಿರ್ವಹಿಸುತ್ತಿದ್ದಾರೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾವಿರಾರು ಕೋಟಿ ಸಾಲ ಪಡೆದು ಮರುಪಾವತಿಸದೆ ವಿದೇಶಕ್ಕೆ ಪಲಾಯನ ಮಾಡಿದ ಆರೋಪ ಉದ್ಯಮಿ ನೀರವ್‌ ಮೋದಿ ಅವರ ಮೇಲಿದೆ.

ಕಳೆದ ತಿಂಗಳು ಕೇಂದ್ರೀಯ ತನಿಖಾ ಸಂಸ್ಥೆಯಲ್ಲಿ (ನಿರ್ದೇಶಕ ಅಲೋಕ್‌ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ನಡುವೆ) ಅಂತಃಕಲಹ ಉಂಟಾದ ಬಳಿಕ, ಅಕ್ಟೋಬರ್‌ 24ರಂದು ಮನೀಷ್‌ ಕುಮಾರ್‌ ಅವರನ್ನು ನಾಗಪುರಕ್ಕೆ ವರ್ಗಾವಣೆ ಮಾಡಲಾಗಿದೆ. ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

‘ವರ್ಗಾವಣೆಯು ದುರುದ್ದೇಶದಿಂದ ಕೂಡಿದ್ದು, ಕೆಲವು ಪ್ರಭಾವಿ ಅಧಿಕಾರಿಗಳ ವಿರುದ್ಧದ ಸಾಕ್ಷ್ಯಗಳನ್ನು ಬಹಿರಂಗಪಡಿಸದಂತೆ ತಡೆಯಲು ನನ್ನನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು.

ಅಸ್ತಾನಾ ಅವರು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ಅಕ್ಟೋಬರ್‌ 15ರಂದು ಎಫ್‌ಐಆರ್‌ ದಾಖಲಿಸಿದ್ದರು. ಅದಾದ ಬಳಿಕ ಅಸ್ತಾನಾ ಮತ್ತು ಅಲೋಕ್‌ ನಡುವಿನ ಶೀತಲ ಸಮರ ಬಯಲಿಗೆ ಬಂದಿತ್ತು.

ಸಂಬಂಧಪಟ್ಟ ಲೇಖನಗಳು

ಸಿಬಿಐ: ಕಚ್ಚಾಡುತ್ತಿದ್ದ ನಿರ್ದೇಶಕ–ವಿಶೇಷ ನಿರ್ದೇಶಕರಿಗೆ ಕಡ್ಡಾಯ ರಜೆ

ಅಧಿಕಾರಿಗಳ ಕಿತ್ತಾಟ: ಸಿಬಿಐ ಘನತೆಗೆ ಕುತ್ತು

ರಫೇಲ್ ದಾಖಲೆ ಕೇಳಿದ್ದು ಅಲೋಕ್ ವರ್ಮಾ ಮಾಡಿದ ತಪ್ಪೇ?

ಕಂಪನಿಯೊಂದರಲ್ಲಿ ₹1.14 ಕೋಟಿ ಹೂಡಿಕೆ ಮಾಡಿದ್ದ ಸಿಬಿಐ ಹಂಗಾಮಿ ನಿರ್ದೇಶಕರ ಪತ್ನಿ

ಲಾಲು ವಿರುದ್ಧ ರಾಕೇಶ್‌ ಅಸ್ತಾನಾ, ಪಿಎಂಒ, ಸುಶೀಲ್ ಮೋದಿ ಸಂಚು: ಅಲೋಕ್ ವರ್ಮಾ 

ಅಲೋಕ್‌ ವರ್ಮಾ ವಿರುದ್ಧದ ತನಿಖಾ ವರದಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !