ಹಂತಕರಿಗೆ ಸಚಿವರ ಹೂಮಾಲೆ ಸತ್ಕಾರ!

7
ವಿಡಿಯೊ ವೈರಲ್‌: ಜಯಂತ್ ಸಿನ್ಹಾ ನಡೆಗೆ ಭಾರಿ ಟೀಕೆ

ಹಂತಕರಿಗೆ ಸಚಿವರ ಹೂಮಾಲೆ ಸತ್ಕಾರ!

Published:
Updated:
ಜಾಮೀನು ಪಡೆದು ಜೈಲಿನಿಂದ ಹೊರ ಬಂದವರಿಗೆ ಸಿಹಿ ತಿನ್ನಿಸಿದ ಸಚಿವ ಸಿನ್ಹಾ

ರಾಂಚಿ: ಕಳೆದ ವರ್ಷ ನಡೆದಿದ್ದ ಮಾಂಸ ಮಾರಾಟ ವರ್ತಕನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಹಂತಕರನ್ನು ಹೂಮಾಲೆ ಹಾಕಿ ಸತ್ಕರಿಸಿದ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ಫೋಟೊ ಮತ್ತು ವಿಡಿಯೊ ವೈರಲ್‌ ಆಗಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ದೋಷಿಗಳಿಗೆ ಸತ್ಕಾರ ಮಾಡಿರುವ ಸಚಿವರ ನಡೆಗೆ ಭಾರಿ ಆಕ್ರೋಶ ಮತ್ತು ಟೀಕೆಗೆ ಗುರಿಯಾಗಿದೆ.

‘ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದನ್ನು ಗೌರವಿಸುವ ಕೆಲಸ ಮಾಡಿದ್ದೇನೆ. ಹೈಕೋರ್ಟ್‌ ಅವರ ಜೀವಾವಧಿ ಶಿಕ್ಷೆ ರದ್ದು ಮಾಡಿದೆ ಜತೆಗೆ ಜಾಮೀನು ನೀಡಿದೆ. ಮನೆಗೆ ಬಂದ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಸಿನ್ಹಾ ಶನಿವಾರ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಜಾರ್ಖಂಡ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಶಂಕೆಯ ಮೇಲೆ ಅಲಿಮುದ್ದಿನ್‌ ಅನ್ಸಾರಿ ಎಂಬ ಮಾಂಸ ಮಾರಾಟ ವರ್ತಕನನ್ನು ಗೋರಕ್ಷಕರ ಗುಂಪೊಂದು ಹತ್ಯೆ ಮಾಡಿತ್ತು.

ಈ ಪ್ರಕರಣದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡ ಸೇರಿ 11 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದ್ದ ಸ್ಥಳೀಯ ನ್ಯಾಯಾಲಯ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್‌ ಜೀವಾವಧಿ ಶಿಕ್ಷೆ ರದ್ದು ಮಾಡಿತ್ತು.

ಇದೇ ಮಂಗಳವಾರ ಜಾಮೀನಿನ ಮೇಲೆ ಹೊರಬಂದ ಹಂತಕರು ಜೈಲಿನಿಂದ ನೇರವಾಗಿ ರಾಂಚಿಯ ಹೊರವಲಯದಲ್ಲಿರುವ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಅವರ ನಿವಾಸಕ್ಕೆ ತೆರಳಿದ್ದರು.

ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದ್ದ ಸಚಿವರು ಅವರೊಂದಿಗೆ ಫೋಟೊ ಕೂಡ ತೆಗೆಸಿಕೊಂಡಿದ್ದರು. ವಾರದ ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಫೋಟೊ ಮತ್ತು ವಿಡಿಯೊ ಭಾರಿ ಕೋಲಾಹಲ ಸೃಷ್ಟಿಸಿವೆ.

‘ಹಿಂಸಾಚಾರ ಮತ್ತು ದಾಳಿಗಳನ್ನು ಖಂಡಿಸುತ್ತೇನೆ. ತ್ವರಿತಗತಿಯ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯ ಬಗ್ಗೆ ನನಗೆ ಮೊದಲಿನಿಂದಲೂ ಸಹಮತವಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(ಜೈಲಿನಿಂದ ಬಂದವರೊಂದಿಗೆ ಜಯಂತ್ ಸಿನ್ಹಾ)

**

‘ಹಂತಕರ ಬೆಂಬಲಕ್ಕೆ ಹಾರ್ವರ್ಡ್‌ ಶಿಕ್ಷಿತ ಸಚಿವ’

‘ಇದು ಬಿಜೆಪಿಯ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ಮತಗಳಿಸಲು ಆ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ. ಇಂತವರು ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆ‘ ಎಂದು ಪ್ರಿಯಾಂಕಾ ಗಾಂಧಿ ಅವರು ಪ್ರಶ್ನಿಸಿದ್ದಾರೆ.

ಹಂತಕರ ಜತೆ ಸಚಿವರು ಇರುವ ಫೋಟೊವೊಂದನ್ನು ಫೇಸ್‌ಬುಕ್‌ ನಲ್ಲಿ ಪ್ರಕಟಿಸಿರುವ ಅವರು, ಇವರು ನಮ್ಮ ಪ್ರತಿನಿಧಿಗಳಾ ಎಂದು ಕೇಳಿದ್ದಾರೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಕಲಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸುಶಿಕ್ಷಿತ ಸಚಿವರೊಬ್ಬರು ಬಹಿರಂಗವಾಗಿ ಕೊಲೆಗಡುಕರ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡು ಎಂದು ವಿರೋಧ ಪಕ್ಷ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸುಖ್‌ದೇವ್‌ ಭಗತ್‌, ಡಾ. ಅಜಯ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಸಿನ್ಹಾ ಆರೋಪಿಗಳ ಬೆಂಬಲಕ್ಕೆ ನಿಂತಿರುವುದು ಇದು ಮೊದಲೇನಲ್ಲ. ಕೆಳ ಹಂತದ ನ್ಯಾಯಾಲಯ ಮಾರ್ಚ್‌ನಲ್ಲಿ 11 ಆರೋಪಿಗಳನ್ನು ದೋಷಿಗಳು ತೀರ್ಪು ನೀಡಿತ್ತು. ಆಗ ಸಿನ್ಹಾ,  ಪ್ರಕರಣದ ಮರು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !