ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ನಾಶ ಮಾಡಿದವರಿಂದ ‘ಪೌರತ್ವ ಮಸೂದೆ’ ಬಗ್ಗೆ ತಪ್ಪು ಮಾಹಿತಿ: ನರೇಂದ್ರ ಮೋದಿ

Last Updated 9 ಫೆಬ್ರುವರಿ 2019, 12:25 IST
ಅಕ್ಷರ ಗಾತ್ರ

ಗುಹಾವಟಿ: ‘ಈ ದೇಶವನ್ನು ನಾಶ ಮಾಡಿದವರು ಹಾಗೂ 1985ರ ಅಸ್ಸಾಂ ಒಪ್ಪಂದ ಅನುಷ್ಠಾನಗೊಳಿಸಲು ಇಷ್ಟವಿಲ್ಲದವರು ‘ಪೌರತ್ವ ತಿದ್ದುಪಡಿ ಮಸೂದೆ’ಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಕಿಡಿಕಾರಿದರು.

ಅಸ್ಸಾಂನಲ್ಲಿ ಶನಿವಾರ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ, ಅಸ್ಸಾಂ ಸೇರಿ ದೇಶದೊಳಗೆ ಅಕ್ರಮವಾಗಿ ನುಸುಳುತ್ತಿರುವವರಿಗೆ ಸ್ಥಳಾವಕಾಶ ಇಲ್ಲದಂತಾಗುತ್ತದೆ’ ಎಂದು ಹೇಳಿದರು.

‘ದೆಹಲಿಯಲ್ಲಿ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತಿರುವವರು, ಸಂಸತ್ತಿನಲ್ಲಿನಮ್ಮೊಂದಿಗೆ ಜಗಳವಾಡುವವರು ಈ ಮಸೂದೆ ಬಗ್ಗೆ ತಪ್ಪುಮಾಹಿತಿ ಹಬ್ಬಿಸುತ್ತಿದ್ದಾರೆ. ಆದರೆ, ಈಶಾನ್ಯ ರಾಜ್ಯದವರ ಸಂಸ್ಕೃತಿ ಮತ್ತು ಸಂಪನ್ಮೂಲಗಳನ್ನು ಕಾಪಾಡಲು ಬಿಜೆಪಿ ಬದ್ಧವಾಗಿದೆ. ಕಳೆದ 35 ವರ್ಷಗಳಿಂದ ಅಸ್ಸಾಂ ಒಪ್ಪಂದ ಅನುಷ್ಠಾನಗೊಂಡಿಲ್ಲ. ಅದನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿಯೇ ತೀರುತ್ತೇವೆ’ ಎಂದರು.

‘ಗೃಹ ಸಚಿವಾಲಯದಿಂದ ಉನ್ನತ ಮಟ್ಟದ ಸಮಿತಿ ರಚಿಸಿ ಅಸ್ಸಾಂ ಒಪ್ಪಂದದ 6ನೇ ವಿಧಿಯನ್ನು (ಈಶಾನ್ಯ ರಾಜ್ಯಗಳ ನಾಗರಿಕರ ಹಕ್ಕುಗಳಿಗೆ ರಕ್ಷಣೆ ನೀಡುವುದು) ಶೀಘ್ರ ಜಾರಿಗೆ ತರಲಾಗುವುದು.ಮತಬ್ಯಾಂಕ್‌ ರಾಜಕೀಯದಿಂದ ಅಸ್ಸಾಂನ ಜನರಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ. ರಾಜಕೀಯ ಮಾಡುತ್ತಿರುವವರ ವಿರುದ್ಧ ನಾನು ಹೋರಾಡುತ್ತೇನೆ’ ಎಂದು ಭರವಸೆ ನೀಡಿದರು.

’ಯಾವುದೇ ನಿರ್ದಿಷ್ಟ ರಾಜ್ಯ ಅಥವಾ ಧರ್ಮವನ್ನು ಗುರಿಯಾಗಿಸಿಕೊಂಡು ಈ ಮಸೂದೆ ರೂಪಿಸಿಲ್ಲ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ರಚಿಸಲಾಗಿದೆ. ಒತ್ತಾಯ ಪೂರಕವಾಗಿ ಸ್ವಂತ ಊರು, ಮನೆಯನ್ನು ಬಿಟ್ಟು ಓಡಿಸಿದ ಜನರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಈ ‘ಪೌರತ್ವ (ತಿದ್ದುಪಡಿ) ಮಸೂದೆ’ ಲೋಕಸಭೆಯಲ್ಲಿ ಈಗಾಗಲೇ ಮಂಡನೆಯಾಗಿದ್ದು, ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿದೆ.

ಈ ಮಸೂದೆ ಜಾರಿ ಖಂಡಿಸಿ ಅಸ್ಸಾಂ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಶನಿವಾರವೂ ಅದು ಮುಂದುವರೆದಿದೆ. ಶುಕ್ರವಾರ ಪ್ರಧಾನಿಗೆ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದರು.

1985ರ ಅಸ್ಸಾಂ ಒಪ್ಪಂದದ ಅನುಸಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಜಾರಿಗೆ ಬಂದರೆ, ಅಸ್ಸಾಂ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದು ಈಶಾನ್ಯ ರಾಜ್ಯಗಳ ಜನರ ವಾದ. ಮೇಘಾಲಯ ಹಾಗೂ ಮಿಜೋರಾಂ ಸರ್ಕಾರಗಳು ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT