ಬಿಜೆಪಿ ಜತೆಗಿನ ಮೈತ್ರಿ ಮುಚ್ಚಿಡಲು ಕಣ್ಣಾಮುಚ್ಚಾಲೆ

7
ಮಿಜೋರಾಂನ ಪಕ್ಷಗಳು ‘ಕಮಲ’ದಿಂದ ದೂರ ದೂರ

ಬಿಜೆಪಿ ಜತೆಗಿನ ಮೈತ್ರಿ ಮುಚ್ಚಿಡಲು ಕಣ್ಣಾಮುಚ್ಚಾಲೆ

Published:
Updated:

ಐಜ್ವಾಲ್‌: ಹತ್ತು ಲಕ್ಷದಷ್ಟು ಜನರಿರುವ ಸಣ್ಣ, ಗುಡ್ಡಗಾಡು ರಾಜ್ಯ ಮಿಜೋರಾಂ ರಾಜಕಾರಣದಲ್ಲಿ ಅಲ್ಲಿನ ರಸ್ತೆಗಳ ಹಾಗೆಯೇ ಹತ್ತಾರು ತಿರುವುಗಳಿವೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷ ಎಂಎನ್‌ಎಫ್‌ಗಳೆರಡೂ ‘ತಾವು ಬಿಜೆಪಿ ವಿರೋಧಿಗಳು’ ಎಂಬುದನ್ನು ಸಾಬೀತು ಮಾಡಲು ಇನ್ನಿಲ್ಲದ ಹೆಣಗಾಟ ನಡೆಸುತ್ತಿವೆ. ವಿಶೇಷ ಎಂದರೆ, ಈ ಎರಡೂ ಪ‍ಕ್ಷಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬಿಜೆಪಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡಿವೆ.

ನವೆಂಬರ್‌ 28ರಂದು ನಡೆಯುವ ಮತ ದಾನದಲ್ಲಿ ಬಿಜೆಪಿಗೆ ಬಂದಿರುವ ದಿಢೀರ್‌ ಮಹತ್ವವೂ ವಿಶೇಷವೇ ಆಗಿದೆ. ಯಾಕೆಂದರೆ, ಮಿಜೋರಾಂನ ಮೂರು ದಶಕಗಳ ಚುನಾವಣಾ ಇತಿಹಾಸ ನೋಡಿದರೆ ಈ ಪಕ್ಷ ಅಲ್ಲಿನ ವಿಧಾನ ಸಭೆ ಯಲ್ಲಿ ಈ ವರೆಗೆ ಒಂದು ಸ್ಥಾನವನ್ನೂ ಗೆದ್ದಿಲ್ಲ. ಆದರೆ, ಈಗ ಕಾಂಗ್ರೆಸ್‌ ಮತ್ತು ಮಿಜೋ ನ್ಯಾಷನಲ್‌ ಫ್ರಂಟ್‌ನ (ಎಂಎನ್‌ಎಫ್‌) ಚುನಾ ವಣಾ ಪ್ರಚಾರದ ಮುಖ್ಯ ಗುರಿ ಬಿಜೆಪಿಯೇ ಆಗಿದೆ. ಈ ಎರಡು ಪಕ್ಷಗಳು ಒಂದರ ನಂತರ ಒಂದರಂತೆ ಮಿಜೋರಾಂ ರಾಜ್ಯವನ್ನು ಆಳಿವೆ. 

ಪ್ರಚಾರದ ಬಿಸಿ ಏರುತ್ತಿದೆ. ‘ಕಾಂಗ್ರೆಸ್‌ ಪಕ್ಷವು ಬಿಜೆಪಿಯ ನಿಜವಾದ ಮಿತ್ರ’ ಎಂದು ಎಂಎನ್‌ಎಫ್‌ ಆರೋಪಿಸಿದರೆ, ‘ತಾನಲ್ಲ, ಎಂಎನ್‌ಎಫ್‌ ಪಕ್ಷವೇ ಬಿಜೆಪಿಯ ಮಿತ್ರ’ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದನ್ನು ಸಾಧಿಸುವುದಕ್ಕಾಗಿ ಹಳೆಯ ಫೋಟೊಗಳು, ದಾಖಲೆಗಳು, ಭೇಟಿಯ ವಿವರಗಳನ್ನು ಮತದಾರರ ಮುಂದೆ ಇಡಲಾಗುತ್ತಿದೆ. 

ಮಿಜೋರಾಂನಲ್ಲಿ ಕ್ರೈಸ್ತರು ಬಹುಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಬಿಜೆಪಿ ಕ್ರೈಸ್ತರ ವಿರೋಧಿ ಎಂದು ಬಿಂಬಿಸಲು ಎರಡೂ ಪಕ್ಷಗಳು ಶ್ರಮಿಸುತ್ತಿವೆ. ಈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಹರಿಸುತ್ತಿರುವ ಬೆವರು ಕಡಿಮೆ ಏನಲ್ಲ. ಮಿಜೋರಾಂನಲ್ಲಿ ಈ ಬಾರಿಯ ಕ್ರಿಸ್ಮಸ್‌ ಆಚರಣೆ ಬಿಜೆಪಿ ಆಡಳಿತದ ಅಡಿ ಯಲ್ಲಿ ನಡೆಯಲಿದೆ ಎಂದು ಆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಡಿಸೆಂಬರ್‌ 11ರಂದು ಮತ ಎಣಿಕೆ ನಡೆಯಲಿದೆ. ಹಾಗಾಗಿ, ಯಾವ ಪಕ್ಷದ ಸರ್ಕಾರದ ಅಡಿಯಲ್ಲಿ ಕ್ರಿಸ್ಮಸ್‌ ಆಚರಣೆ ನಡೆ ಯಲಿದೆ ಎಂಬುದು ಗೊತ್ತಾಗಲಿದೆ. 

‘ಕಾಂಗ್ರೆಸ್‌ಮುಕ್ತ ಈಶಾನ್ಯ’ ಎಂಬುದು ಬಿಜೆಪಿಯ ಧ್ಯೇಯ. ಅದನ್ನು ಸಾಧಿಸಲು ಮಿಜೋರಾಂ ಕೊನೆಯ ಮೆಟ್ಟಿಲು. ಯಾಕೆಂದರೆ, ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ಆಡಳಿತ ಮೈತ್ರಿಕೂಟದಲ್ಲಿ ಬಿಜೆಪಿಯೂ ಇದೆ. 

ಕಾಂಗ್ರೆಸ್‌ಗೂ ಮಿಜೋರಾಂನ ಗೆಲುವು ಅತ್ಯಗತ್ಯ. ಎರಡು ವರ್ಷಗಳ ಹಿಂದೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಈಶಾನ್ಯದಲ್ಲಿ ಒಂದಾದರೂ ರಾಜ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಎಲ್ಲ ಪ್ರಯತ್ನ ನಡೆಸುತ್ತಿದೆ. 

ಹೀಗಿದೆ ಚುನಾವಣಾ ಇತಿಹಾಸ

2003

ಕಾಂಗ್ರೆಸ್‌: 12

ಎಂಎನ್‌ಎಫ್‌: 21

ಇತರರು: 7

2008

ಕಾಂಗ್ರೆಸ್‌: 32

ಎಂಎನ್‌ಎಫ್‌: 3

ಇತರರು: 7

2013

ಕಾಂಗ್ರೆಸ್‌: 34

ಎಂಎನ್‌ಎಫ್‌: 5

ಇತರರು: 1

 

ಒಟ್ಟು ಕ್ಷೇತ್ರಗಳು: 40

7.68 ಲಕ್ಷ: ಒಟ್ಟು ಮತದಾರರು

3.93 ಲಕ್ಷ: ಮಹಿಳಾ ಮತದಾರರು

**
* ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿ ಎಂಎನ್‌ಎಫ್‌ ಇದೆ. ಆದರೆ, ಮಿಜೋರಾಂನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ

* ಅಮಿತ್‌ ಶಾ ಮತ್ತು ಎಂಎನ್‌ಎಫ್‌ ನಾಯಕ ಜೊರಾಮ್‌ಥಂಗಾ ಅವರು ಜತೆಗಿರುವ ಫೋಟೊಗಳು ಮತ್ತು ಈ ಎರಡು ಪಕ್ಷಗಳ ನಡುವಣ ಸಂಬಂಧದ ವಿವರಗಳಿರುವ 50 ಸಾವಿರ ಕರಪತ್ರಗಳನ್ನು ಕಾಂಗ್ರೆಸ್‌ ಹಂಚಿದೆ

* ಬಿಜೆಪಿ ಜತೆಗೆ ಯಾವುದೇ ಸಂಬಂಧ ಇಲ್ಲ ಎಂದು ಎಂಎನ್‌ಎಫ್‌ ಸಾಧಿಸುತ್ತಿದೆ. ಚಕ್ಮಾ ಜಿಲ್ಲೆಯ ಸ್ವಾಯತ್ತ ಮಂಡಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರ ಹಿಡಿದಿದೆ ಎಂಬುದನ್ನು ಎಂಎನ್‌ಎಫ್‌ ಜನರಿಗೆ ತಿಳಿಸುತ್ತಿದೆ

* ಸ್ವಾಯತ್ತ ಮಂಡಳಿಯಲ್ಲಿ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿರುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !