ಮಿಜೋರಾಂ: ಬಿಜೆಪಿ ಅಭ್ಯರ್ಥಿಯನ್ನು ಹೊರಹಾಕಿದ ಚರ್ಚ್‌

7

ಮಿಜೋರಾಂ: ಬಿಜೆಪಿ ಅಭ್ಯರ್ಥಿಯನ್ನು ಹೊರಹಾಕಿದ ಚರ್ಚ್‌

Published:
Updated:

ಗುವಾಹಟಿ: ಇದೇ 28ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಐಜ್ವಾಲ್‌ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೆಸರಿಸಲಾದ ಕ್ರೈಸ್ತ ಧರ್ಮದ ಮಾಜಿ ಗುರು ಎಲ್‌. ಆರ್‌. ಕಾಲ್ನಿ ಅವರನ್ನು ಮಿಜೋರಾಂನ ಚರ್ಚೊಂದು ಹೊರಗೆ ಹಾಕಿದೆ. ಕ್ರೈಸ್ತರು ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿ ಇದು ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಜೀವನಪರ್ಯಂತ ಧರ್ಮಗುರುವಾಗಿ ಇರಬೇಕಾಗಿದ್ದವರು ರಾಜಕೀಯ ಪ್ರವೇಶಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಿಷನ್‌ ಆಫ್‌ ಕ್ರೈಸ್ಟ್‌ ಚರ್ಚ್‌ ಹೇಳಿದೆ. 

ಇನ್ನೊಬ್ಬ ಧರ್ಮಗುರು ಆರ್‌. ಲಾಲ್‌ತಂಗ್ಲಿಯಾನಾ ಅವರು ಇತ್ತೀಚೆಗೆ ಮಿಜೊ ನ್ಯಾಷನಲ್ ಫ್ರಂಟ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಜೊರಾಮ್‌ತಂಗಾ ನೇತೃತ್ವದ ಪ್ರಾದೇಶಿಕ ಪಕ್ಷ. ಲಾಲ್‌ತಂಗ್ಲಿಯಾನಾ ವಿರುದ್ಧ ಚರ್ಚ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಮಿಜೋರಾಂ ಸಮಾಜದಲ್ಲಿ ಚರ್ಚ್‌ನ ಮಾತಿಗೆ ಭಾರಿ ಬೆಲೆ ಇದೆ. 

‘ಲಾಲ್‌ತಂಗ್ಲಿಯಾನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಚರ್ಚ್‌ ನನ್ನ ವಿರುದ್ಧ ಯಾಕೆ ಇಂತಹ ಕಠಿಣ ಕ್ರಮ ಕೈಗೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಮಿಜೋರಾಂನ ಬಹಳಷ್ಟು ಜನರು ಬಿಜೆಪಿಯನ್ನು ಕ್ರೈಸ್ತವಿರೋಧಿ ಎಂದು ಪರಿಗಣಿಸುತ್ತಾರೆ. ಆದರೆ, ಇದು ತಪ್ಪುಗ್ರಹಿಕೆ. ನಾನು ರಾಜಕೀಯಕ್ಕೆ ಹೊಸಬನಾದರೂ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸ ಇದೆ’ ಎಂದು ಕಾಲ್ನಿ ಹೇಳಿದ್ದಾರೆ. ಚರ್ಚ್‌ನ ನಿರ್ಧಾರ ರಾಜಕೀಯ‍ಪ್ರೇರಿತ ಎಂದೂ ಅವರು ಆರೋಪಿಸಿದ್ದಾರೆ. 

40 ಸದಸ್ಯರ ಮಿಜೋರಾಂ ವಿಧಾನಸಭೆಯಲ್ಲಿ ಈಗ ಬಿಜೆಪಿ ಸದಸ್ಯರು ಇಲ್ಲ. ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ ಎಂಎನ್ಎಫ್‌ ಕೂಡ ಇದೆ. ಆದರೆ, ಎಂಎನ್‌ಎಫ್‌ ಮತ್ತು ಬಿಜೆಪಿ ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತಿವೆ. ಲಾಲ್‌ ತನ್‌ಹವ್ಲಾ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ. ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಲು ಅವರು ಬಯಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !