ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತ್ರುವಿಗೆ ನೆರವಾಗುವ ಏನನ್ನೂ ಮಾಡದಿರಿ: ಮೋದಿ

‘ಅತಿ ದೊಡ್ಡ’ ವಿಡಿಯೊ ಕಾನ್ಫರೆನ್ಸ್‌: ಬಿಜೆಪಿ ಮತಗಟ್ಟೆ ಕಾರ್ಯಕರ್ತರ ಜತೆ ಪ್ರಧಾನಿ ಸಂವಾದ
Last Updated 28 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯೋಧರ ನೈತಿಕ ಸ್ಥೈರ್ಯ ಕುಸಿಯುವಂತಹ ಕೆಲಸಗಳನ್ನು ಯಾರೂ ಮಾಡಬಾರದು ಅಥವಾ ಶತ್ರುಗಳು ದೇಶದತ್ತ ಬೆರಳು ತೋರುವಂತಹ ಅವಕಾಶ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಅವರ ಭದ್ರತಾ ನೀತಿಯು ‘ವಿಫಲವಾಗಿದೆ’ ಎಂಬುದಕ್ಕೆ ಒತ್ತು ನೀಡಲು ವಿರೋಧ ಪಕ್ಷಗಳು ಸಜ್ಜಾಗಿರುವ ಸಂದರ್ಭದಲ್ಲಿ ಪ್ರಧಾನಿ ಈ ಹೇಳಿಕೆ ಕೊಟ್ಟಿದ್ದಾರೆ.

ಬಿಜೆಪಿಯ ಮತಗಟ್ಟೆ ಮಟ್ಟದ ಕಾರ್ಯಕರ್ತರ ಜತೆಗಿನ ವಿಡಿಯೊ ಸಂವಾದದಲ್ಲಿ ಮೋದಿ ಮಾತನಾಡಿದರು. ನಮ್ಮ ಬೆಳವಣಿಗೆಯನ್ನು ತಡೆಯಲು ‘ಶತ್ರುಗಳು’ ಬಯಸಿದ್ದಾರೆ. ಹಾಗಾಗಿ ಭಯೋತ್ಪಾದನಾ ದಾಳಿಗಳ ಮೂಲಕ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

‘ಶತ್ರುವಿನ ಸಂಚುಗಳ ವಿರುದ್ಧ ದೇಶದ ಜನರು ಬಂಡೆಯಂತೆ ನಿಂತಿದ್ದಾರೆ. ದೇಶವು ಒಗ್ಗಟ್ಟಾಗಿದೆ ಮತ್ತು ಯೋಧರ ಬೆನ್ನಿಗಿದೆ. ನಮ್ಮ ಯೋಧರ ಸಾಮರ್ಥ್ಯದಲ್ಲಿ ನಮಗೆ ಪೂರ್ಣ ವಿಶ್ವಾಸ ಇದೆ. ಸೈನಿಕರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವುದು ಈಗಿನ ಬಹುದೊಡ್ಡ ಅಗತ್ಯವಾಗಿದೆ. ವೈರಿಯು ನಮ್ಮನ್ನು ಗುರಿ ಮಾಡಲು ಅವಕಾಶ ಕೊಡುವಂತಹ ಏನನ್ನೂ ನಾವು ಈಗ ಮಾಡಬಾರದು’ ಎಂದು ಅವರು ಪ್ರತಿಪಾದಿಸಿದರು.

‘ಭಾರತವು ಒಂದಾಗಿ ಜೀವಿಸಲಿದೆ, ಒಂದಾಗಿ ಬೆಳೆಯಲಿದೆ ಮತ್ತು ಒಂದಾಗಿ ಹೋರಾಡಿ ಗೆಲ್ಲಲಿದೆ... ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಅವಿಶ್ರಾಂತವಾಗಿ ದುಡಿಯಬೇಕಿದೆ. ದೇಶವನ್ನು ರಕ್ಷಿಸುತ್ತಿರುವವರಿಗೆ ದೇಶವು ಕೃತಜ್ಞವಾಗಿದೆ. ಅವರು ಇದ್ದಾರೆ ಎಂಬ ಕಾರಣದಿಂದಾಗಿಯೇ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ದೇಶವು ಏರಿದೆ’ ಎಂದು ಮೋದಿ ಹೇಳಿದರು.

ತಮ್ಮ ಪ‍್ರತಿಸ್ಪರ್ಧಿಗಳು ಯಾರು ಎಂಬುದನ್ನು ಮೋದಿ ಅವರು ಹೇಳಲಿಲ್ಲ. ಆದರೆ, ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯ ಬಳಿಕ ನಡೆದ ವಾಯುದಾಳಿಯನ್ನು ‘ರಾಜಕೀಯ’ ಗೊಳಿಸಲಾಗುತ್ತಿದೆ ಎಂಬ ಆರೋಪಗಳನ್ನು ಗುರಿಯಾಗಿಟ್ಟು ಮೋದಿ ಮಾತನಾಡಿದ್ದಾರೆ ಎನ್ನಲಾಗಿದೆ.

‘ಶತ್ರು’ವಿನ ಗುರಿ ಭಾರತವನ್ನು ಅಸ್ಥಿರಗೊಳಿಸುವುದು ಎಂದು ಹೇಳುವಾಗಲೂ ಅವರು ಯಾವುದೇ ದೇಶವನ್ನು ಹೆಸರಿಸಲಿಲ್ಲ.

‘ಪಾದಪೂಜೆ ಮತಕ್ಕಲ್ಲ’

ಅಲಹಾಬಾದ್‌ನಲ್ಲಿ ಇತ್ತೀಚೆಗೆ ಪೌರಕಾರ್ಮಿಕರ ಪಾದ‍ಪೂಜೆ ಮಾಡಿರುವುದರ ಹಿಂದೆ ರಾಜಕೀಯ ಲಾಭದ ಉದ್ದೇಶ ಇರಲಿಲ್ಲ, ಅದು ತಮ್ಮ ಸಂಸ್ಕಾರ ಎಂದು ಮೋದಿ ಹೇಳಿಕೊಂಡಿದ್ದಾರೆ. ಪುಣೆಯ ಬಿಜೆಪಿ ಕಾರ್ಪೊರೇಟರ್‌ ಒಬ್ಬರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

‌‘ಸ್ವಚ್ಛತೆಗೆ ಭಾರಿ ಶ್ಲಾಘನೆಗೆ ಒಳಗಾಗಿರುವ ಕುಂಭಮೇಳಕ್ಕೆ ಹೋಗಿದ್ದೆ. ನೈರ್ಮಲ್ಯ ಕಾರ್ಯಕರ್ತರ ಪ್ರಯತ್ನಗಳ ಬಗ್ಗೆ ಯೋಚಿಸುವಂತೆ ಇದು ನನ್ನನ್ನು ಪ್ರೇರೇಪಿಸಿತು. ಅವರ ಕಾಲು ತೊಳೆಯುವ ಮೂಲಕ ನನ್ನ ಕೃತಜ್ಞತೆ ಅರ್ಪಿಸಲು ನಿರ್ಧರಿಸಿದೆ’ ಎಂದು ಮೋದಿ ಹೇಳಿದರು.

ತಮ್ಮ ಬಗ್ಗೆ ಗೊತ್ತಿಲ್ಲದವರು ಮಾತ್ರ ಇದನ್ನು ರಾಜಕೀಯ ತಂತ್ರ ಎಂದು ಹೇಳುತ್ತಿದ್ದಾರೆ ಎಂದ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾದಾಗ ಗೃಹ ಪ್ರವೇಶ ನೆರವೇರಿಸಿದ ಬಗೆಯನ್ನು ನೆನಪಿಸಿಕೊಂಡರು.

‘ಅಧಿಕೃತ ನಿವಾಸದ ಗೃಹಪ್ರವೇಶ ಹೇಗಿರಬೇಕು ಎಂದು ಅಧಿಕಾರಿಗಳು ಕೇಳಿದರು. ಸರ್ಕಾರದ ನಾಲ್ಕನೇ ದರ್ಜೆಯ ನೌಕರರೊಬ್ಬರನ್ನು ಕರೆತರುವಂತೆ ಅಂದು ಬಹಳ ನೋವಿನಲ್ಲಿಯೇ ನಾನು ಹೇಳಿದ್ದೆ. ಅವರು ಒಬ್ಬ ದಲಿತ ವ್ಯಕ್ತಿಯನ್ನು ಕರೆತಂದರು. ಆ ವ್ಯಕ್ತಿಯ ಮಗಳ ಕೈಯಲ್ಲಿ ಕಲಶ ಕೊಟ್ಟು ಗೃಹ ಪ್ರವೇಶ ಮಾಡಿಕೊಂಡಿದ್ದೆ’ ಎಂದು ಮೋದಿ ಹೇಳಿದರು.

‘ಪುನರಾಯ್ಕೆಯೇ ಮೋದಿ ಆದ್ಯತೆ’

ನರೇಂದ್ರ ಮೋದಿ ಅವರ ಆದ್ಯತೆಗಳು ತಪ್ಪಾಗಿವೆ. ಪುನರಾಯ್ಕೆ ಆಗಬಹುದೇ ಎಂಬ ಬಗ್ಗೆ ಅವರು ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

ಸಶಸ್ತ್ರ ಪಡೆಯ ಯೋಧರ ದಿಟ್ಟತನವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳ ಮೇಲಿನ ದಾಳಿಯಿಂದಾಗಿ ಬಿಜೆಪಿಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದೊರೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಉಲ್ಲೇಖಿಸಿದೆ. ಪ್ರಧಾನಿ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ದಾಖಲೆ ಸೃಷ್ಟಿಸಲೇಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ಆದರೆ, ಇಡೀ ದೇಶ ಧೀರ ಪೈಲಟ್‌ನ ಸುರಕ್ಷಿತ ಹಿಂದಿರುಗುವಿಕೆಗಾಗಿ ಕಾಯುತ್ತಿದೆ ಎಂದು ಕಾಂಗ್ರೆಸ್‌ನ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ಆದ್ಯತೆ ತಪ್ಪಾಗಿದೆ ಎಂಬುದು ಕಣ್ಣಿಗೆ ರಾಚುತ್ತಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಸುರಕ್ಷಿತವಾಗಿ ಹಿಂದಿರುಗಲಿ ಎಂದು 132 ಕೋಟಿ ಜನರು ಪ್ರಾರ್ಥಿಸುತ್ತಿದ್ದರೆ ಮೋದಿ ಅವರು ಪುನರಾಯ್ಕೆ ಬಿಟ್ಟು ಬೇರೆ ಏನನ್ನೂ ಯೋಚಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷವು ತನ್ನ ಮಹತ್ವದ ಕಾರ್ಯಕಾರಿಣಿ ಮತ್ತು ಸಮಾವೇಶವನ್ನು ರದ್ದು ಮಾಡಿದೆ. ಪ್ರಧಾನ ಸೇವಕ ಮಾತ್ರ ವಿಡಿಯೊ ಕಾನ್ಫರೆನ್ಸ್‌ ದಾಖಲೆಯ ಹಿಂದೆ ಬಿದ್ದಿದ್ದಾರೆ’ ಎಂದು ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ. ‘ಮೇರಾ ಬೂತ್‌, ಸಬ್‌ಸೆ ಮಜ್‌ಬೂತ್‌’ ಹೆಸರಿನ ವಿಡಿಯೊ ಕಾನ್ಫರೆನ್ಸ್‌ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕಾರ್ಯಕ್ರಮ ಎಂದು ಬಿಜೆಪಿ ಹೇಳಿಕೊಂಡಿದೆ. ‌ಸಶಸ್ತ್ರ ಪಡೆಗಳು ಗಡಿಯ ರಕ್ಷಣೆಗೆ ನಿಂತಿವೆ, ಪ್ರಧಾನ ಸೇವಕ ಮತಗಟ್ಟೆ ರಕ್ಷಣೆಗೆ ನಿಂತಿದ್ದಾರೆ ಎಂದು ಸುರ್ಜೇವಾಲಾ ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಆಮ್ಲಜನಕ ಪೂರೈಸಲು ಮಹಾಮೈತ್ರಿ: ಪ್ರಧಾನಿ ಲೇವಡಿ

ಬಿಜೆಪಿ ವಿರೋಧಿ ಪಕ್ಷಗಳ ಮಹಾಮೈತ್ರಿ ಪ್ರಯತ್ನವನ್ನು ಮೋದಿ ಅವರು ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಯ ಉದ್ದೇಶ ಸರ್ಕಾರ ರಚನೆ ಅಲ್ಲ, ಬದಲಿಗೆ ಅದು ರಾಹುಲ್‌ ಗಾಂಧಿ ನೇತೃತ್ವದ ಪಕ್ಷಕ್ಕೆ ಆಮ್ಲಜನಕ ಪೂರೈಸುವುದಾಗಿದೆ ಎಂದು ಹೇಳಿದ್ದಾರೆ.

2014ರ ಜನಮತವು ದೇಶದ ಜನರ ಅಗತ್ಯಗಳನ್ನು ಈಡೇರಿಸುವುದಕ್ಕೆ ಆಗಿತ್ತು. 2019ರ ಜನಮತವು ಜನರ ಆಕಾಂಕ್ಷೆಗಳನ್ನು ಈಡೇರಿಸಲಿದೆ. 2004ರ ರೀತಿಯಲ್ಲಿ ಬಿಜೆಪಿ ಸೋತರೆ, ಅಭಿವೃದ್ಧಿ ಕಾಮಗಾರಿಗಳ ಗಡಿಯಾರವನ್ನು ಹಿಂದಕ್ಕೆ ತಿರುಗಿಸಬಹುದು, ಸುಲಲಿತ ವ್ಯಾಪಾರ ಸಾಧ್ಯತೆ ಬದಲಿಗೆ ಸುಲಲಿತ ಭ್ರಷ್ಟಾಚಾರ ಬರಬಹುದು ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಒಗ್ಗಟ್ಟನ್ನು ಮಹಾಮೈತ್ರಿ ಎಂದು ಕರೆಯಬಾರದು. ಅದು ಗರಿಷ್ಠವಾಗಿ ಕಲಬೆರಕೆಯಾಗಿದೆ. ಹಾಗಾಗಿ ಅದನ್ನು ‘ಮಹಾಕಲಬೆರಕೆ’ ಎಂದು ಕರೆಯಬೇಕು. ಇದು ದೇಶವನ್ನು ತೀವ್ರ ನಿಗಾ ಘಟಕಕ್ಕೆ ಕಳುಹಿಸಬಹುದು ಎಂದರು.

ವಿವಿಧ ಪಕ್ಷಗಳ ಮುಖಂಡರ ಪ್ರತಿಕ್ರಿಯೆ

ದೇಶಕ್ಕಾಗಿ ನಿಲ್ಲಬೇಕು

ದೇಶವನ್ನು ರಕ್ಷಿಸಲು ಮತ್ತು ಜನರ ರಕ್ಷಣೆಗಾಗಿ ಕ್ರಮ ಕೈಗೊಂಡಿದ್ದರಿಂದ ಸರ್ಕಾರದ ಪರ ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲಬೇಕಿದೆಯೇ ಹೊರತು, ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಕೆಲವು ಸ್ಥಾನಗಳನ್ನು ಗೆಲ್ಲಲು ಅಲ್ಲ. (ಯಡಿಯೂರಪ್ಪ ಅವರಿಗೆ ಹೇಳಿದ ಕಿವಿಮಾತು)

–ವಿ.ಕೆ.ಸಿಂಗ್, ಕೇಂದ್ರ ಸಚಿವ

ಪಕ್ಷಕ್ಕಾಗಿ ಮೋದಿ ‘ಬ್ಯುಸಿ’

ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್‌ನ ಬಿಡುಗಡೆ ಸಂಬಂಧ ಇಡೀ ದೇಶ ಚಿಂತಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಮತಗಟ್ಟೆಗಳನ್ನು ಬಲಪಡಿಸುವಲ್ಲಿ ‘ಬ್ಯುಸಿ’ಯಾಗಿದ್ದಾರೆ

–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ದೇಶಕ್ಕೆ ಬಗೆದ ವಂಚನೆ

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಕ್ಕೆ ಪ್ರಬಲ ನಾಯಕತ್ವ ಬೇಕು. ಯುದ್ಧಭೀತಿಯ ಸಂದರ್ಭದಲ್ಲಿ ದೇಶದ ಭದ್ರತೆ ಬಗ್ಗೆ ನಿಗಾ ವಹಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಲಾಭಕ್ಕಾಗಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇದು ದೇಶಕ್ಕೆ ಬಗೆಯುತ್ತಿರುವ ದ್ರೋಹ

–ಮಾಯಾವತಿ, ಬಿಎಸ್‌ಪಿ ನಾಯಕಿ

ಅಮೇಠಿಯನ್ನು ಗೆಲ್ಲುತ್ತೇವೆ

ಹಿಂದೊಮ್ಮೆ ನಾವು (ಬಿಜೆಪಿ) ಅಮೇಠಿಯಲ್ಲಿ ಜಯಗಳಿಸಿದ್ದೆವು. ಸ್ವಸಾಮರ್ಥ್ಯದಿಂದ ದುಡಿಯುವ ನಮ್ಮ ಕಾರ್ಯಕರ್ತರ ಕಠಿಣ ಶ್ರಮದಿಂದ ಮತ್ತು ನಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಕಾರಣ ನಾವು ಆ ಇತಿಹಾಸವನ್ನು ಮರುಸೃಷ್ಟಿಸುತ್ತೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಮೇಠಿಯನ್ನು ಗೆಲ್ಲಲಿದೆ

–ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಬಾಲಾಕೋಟ್‌ನಲ್ಲಿ ಆಗಿದ್ದೇನು?

ಬಾಲಾಕೋಟ್ ದಾಳಿಯಲ್ಲಿ 300–350 ಉಗ್ರರುಸತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನ್ಯೂಯಾರ್ಕ್ ಟೈಮ್ಸ್‌ ಮತ್ತು ಇನ್ನೂ ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ಈ ದಾಳಿಯಲ್ಲಿ ಒಬ್ಬರೂ ಸತ್ತಿಲ್ಲ ಎಂದು ವರದಿ ಮಾಡಿವೆ. ಇದು ರಾಜಕೀಯ ಅಲ್ಲ.
ಆದರೆ ಬಾಲಾಕೋಟ್‌ ದಾಳಿಯಲ್ಲಿ ಏನಾಯಿತು ಎಂದು ಸರ್ಕಾರ ತಿಳಿಸಬೇಕು. ಅದನ್ನು ತಿಳಿದುಕೊಳ್ಳುವ ಹಕ್ಕು ನಮ್ಮೆಲ್ಲರಿಗೂ ಇದೆ

–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT