ಮಾಧ್ಯಮಗೋಷ್ಠಿ ನಿರೀಕ್ಷೆ ಹುಸಿಗೊಳಿಸಿದ ಮೋದಿ

ಶುಕ್ರವಾರ, ಏಪ್ರಿಲ್ 19, 2019
27 °C

ಮಾಧ್ಯಮಗೋಷ್ಠಿ ನಿರೀಕ್ಷೆ ಹುಸಿಗೊಳಿಸಿದ ಮೋದಿ

Published:
Updated:
Prajavani

ನವದೆಹಲಿ: ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ ಅಥವಾ ಪ್ರಶ್ನೋತ್ತರ ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರಧಾನಿಯೂ ಸೇರಿದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಜೆಪಿಯ ಯಾವ ನಾಯಕರೂ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸದೇ ಹಿಂದಿರುಗಿದರು.

ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ಈವರೆಗೆ ಒಂದೂ ಮಾಧ್ಯಮಗೋಷ್ಠಿಯನ್ನು ನಡೆಸಿಲ್ಲ. ಆಯ್ದ ಕೆಲವು ಸುದ್ದಿವಾಹಿನಿಗಳಿಗೆ ಮತ್ತು ಆಯ್ದ ಕೆಲವು ಪತ್ರಕರ್ತರಿಗೆ ಒಂದೆರಡು ಬಾರಿ ಸಂದರ್ಶನ ನೀಡಿದ್ದಾರೆ ಅಷ್ಟೆ. ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಇವೆ. ವಿಪಕ್ಷಗಳ ಕೆಲವು ನಾಯಕರಂತೂ ಮಾಧ್ಯಮಗಳನ್ನು ಎದುರಿಸುವಂತೆ ಮೋದಿಗೆ ಸವಾಲು ಹಾಕಿದ್ದಾರೆ.

ಪ್ರಣಾಳಿಕೆ ಬಿಡುಗಡೆಯ ನಂತರ ಯಾವುದೇ ಪಕ್ಷದ ನಾಯಕರು ಮಾಧ್ಯಮಗಳನ್ನು ಎದುರಿಸುವುದು ವಾಡಿಕೆ. ಹೀಗಾಗಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ನಂತರ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೊದಲಿಗೆ ಅಮಿತ್ ಶಾ ಮಾತನಾಡಿದರು. ನಂತರ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಾತನಾಡಿದರು. ಕೊನೆಯಲ್ಲಿ ಪ್ರಧಾನಿ ಮೋದಿ 90 ನಿಮಿಷ ಮಾತನಾಡಿದರು. ಆದರೆ ಅವರ ಮಾತು ಮುಗಿದ ತಕ್ಷಣ ನಿರೂಪಕರು ಎಲ್ಲರಿಗೂ ವಂದನೆ ಅರ್ಪಿಸಿ, ಕಾರ್ಯಕ್ರಮವನ್ನು ಕೊನೆಗೊಳಿಸಿದರು. ಮೋದಿ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ವೇದಿಕೆಯಿಂದ ಹೊರನಡೆದರು.

ಕಾರ್ಯಕ್ರಮ ಮುಗಿದ ಕೆಲವೇ ನಿಮಿಷಗಳಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಟ್ವೀಟ್ ಮಾಡಿದರು. ‘ಚುನಾವಣಾ ಪ್ರಚಾರಕ್ಕಾಗಿ ಜಮ್ಮುವಿಗೆ ಹೋಗುತ್ತಿದ್ದೇನೆ. ಉಧಂಪುರ ಮತ್ತು ಜಮ್ಮು ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಲಿದ್ದೇನೆ’ ಎಂದು ಅವರು ಟ್ವೀಟ್‌ನಲ್ಲಿ ವಿವರಿಸಿದ್ದರು. ಆದರೆ ಬಿಜೆಪಿಯ ಇನ್ಯಾವುದೇ ನಾಯಕರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಮೋದಿ ಹೀಗೇ ಮಾಡುತ್ತಾರೆ ಎಂಬುದು ಗೊತ್ತಿತ್ತು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಲೇವಡಿ ಮಾಡಿದ್ದಾರೆ.

‘ಇದರಲ್ಲಿ ಹೊಸತೇನೂ ಇಲ್ಲ. ಮೋದಿ ವಿಚಾರದಲ್ಲಿ ಇದೇ ವಾಡಿಕೆ. ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮೋದಿಗಿಲ್ಲ. ಇದು ನಿರಂಕುಶಾಧಿಕಾರವೇ ಹೊರತು ಪ್ರಜಾಸತ್ತಾತ್ಮಕ ನಡೆಯಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.

ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿ, ಸೀತಾರಾಂ ಯೆಚೂರಿ, ಡಿ.ರಾಜಾ ಮತ್ತು ಇತರ ಪ್ರಾದೇಶಿಕ ಪಕ್ಷಗಳ ನಾಯಕರು ಮಾಧ್ಯಮಗೋಷ್ಠಿ ನಡೆಸಿದ್ದರು.

*
ಬೇರೆಯವರ ಮಾತು ಕೇಳಿಸಿಕೊಳ್ಳುವುದು ಮೋದಿಯ ಜಾಯಮಾನದಲ್ಲೇ ಇಲ್ಲ. ಅವರ ‘ಮನದ ಮಾತ’ನ್ನು ಹೇಳಿ ಹೋಗುವುದಷ್ಟೇ ಅವರಿಗೆ ಅಭ್ಯಾಸವಾಗಿ ಹೋಗಿದೆ.
–ಡಿ.ರಾಜಾ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !