ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ವೇಳೆಗೆ ಸೂರಿಲ್ಲದವರಿಗೆ ಸೂರು ನಮ್ಮ ಗುರಿ-ನರೇಂದ್ರ ಮೋದಿ

Last Updated 16 ಏಪ್ರಿಲ್ 2019, 13:54 IST
ಅಕ್ಷರ ಗಾತ್ರ

ಛತ್ತೀಸಗಡ: 2022ರ ವೇಳೆಗೆ ಸೂರಿಲ್ಲದವರಿಗೆ ಸೂರು ಕೊಡುವುದೇ ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿನ ಕೊರ್ಬಾದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ರ‌್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ದ್ರೋಹ ಬಗೆಯುವುದರಲ್ಲಿ ಪಿಎಚ್ ಡಿ ಪಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಬಿಜೆಪಿ ಶಾಸಕ ಭೀಮಾ ಮಂಡವಿ ಹಾಗೂ ಇತರೆ ನಾಲ್ಕು ಮಂದಿ ಭದ್ರತಾ ಪಡೆಯ ಸಿಬ್ಬಂದಿ ಹತ್ಯೆ ನಡೆಸಿದ ಮಾವೋವಾದಿಗಳ ಕೃತ್ಯವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಛತ್ತೀಸಗಡದಲ್ಲಿ ಮಾವೋವಾದಿಗಳ ಸಂಖ್ಯೆ ಹೆಚ್ಚಲು ಕಾಂಗ್ರೆಸ್ ಕಾರಣವಾಗಿದೆ. ಕಾಂಗ್ರೆಸ್ ಮಾವೋವಾದಿಗಳನ್ನುಕ್ರಾಂತಿಕಾರಿಗಳು ಎಂದು ಕರೆದಿರುವುದು ಅವರ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಒಂದೆಡೆ ನಾವು ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ, ಗಿರಿಜನರು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮಾಡುವತ್ತ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ರಾಜ್ಯವನ್ನು ಹಿಂಸೆಯತ್ತ ದೂಡಲು ಒಳಸಂಚು ನಡೆಸುವುದು.ಇದೆಂತಾ ರಾಜಕೀಯ. ಇಂತಹ ಜನರ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನನನ್ನೇ ರದ್ದು ಮಾಡುವುದಾಗಿ ಹೇಳಿದೆ. ಇದರ ಅರ್ಥ ಭಯೋತ್ಪಾದನೆ ಮಾಡುವವರಿಗೆ ಯಾವುದೇ ಶಿಕ್ಷೆ ಇಲ್ಲ. ಅವರು ಯಾವುದೇ ಅಡೆತಡೆ ಇಲ್ಲದೆ, ತಮ್ಮ ಕೃತ್ಯಗಳನ್ನು ಮುಂದುವರಿಸಬಹುದು ಎಂಬುದಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಿಂದ ಮಾವೋವಾದಿಗಳು ಪ್ರಚೋದಿತರಾಗಿರಲೂಬಹುದು ಎಂದು ಆರೋಪಿಸಿದರು.

ಛತ್ತೀಸಗಡಕ್ಕೆ ನೀರಿನ ಪೈಪ್ ಲೈನು ಹಾಗೂ ವಿದ್ಯುಚ್ಚಕ್ತಿ ಬೇಕೋ ಅಥವಾ ಗಣಿಗಾರಿಕೆ ಬೇಕೋ ಹೇಳಿ. ಕಾಂಗ್ರೆಸ್ ಅಭಿವೃದ್ಧಿಯತ್ತ ಕೈಜೋಡಿಸುತ್ತಾ ಇದೆಯೋ ಅಥವಾ ರಾಜ್ಯವನ್ನ ವಿನಾಶದತ್ತ ಕರೆದೊಯ್ಯುತ್ತಿದೆಯೋ. ಛತ್ತೀಸಗಡದಲ್ಲಿನ ಇತ್ತೀಚಿನಬೆಳವಣಿಗೆಗಳನ್ನು ಕಂಡಾಗ ರಾಜ್ಯ ಮತ್ತೆ ತನ್ನ ಹಳೆಯ ಸ್ಥಿತಿಗೆ ಮರಳುತ್ತಿದೆಯೇನೋ ಎನಿಸುತ್ತಿದೆ. ಕಾಂಗ್ರೆಸ್ ದೇಶವನ್ನು ಇಬ್ಬಾಗ ಮಾಡುವವರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಸೇನಾತುಕಡಿಗಳ ವಿಶೇಷಾಧಿಕಾರ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಸೇನಾ ತುಕಡಿಗಳಿಗೆ ಇರುವ ವಿಶೇಷಾಧಿಕಾರಿಗಳನ್ನು ಕಿತ್ತೊಗೆಯಲು ಕಾಂಗ್ರೆಸ್ ಬಯಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಜನರ ಬಗ್ಗೆ ತಿಳಿದಿಲ್ಲ. ದೇಶದ ಜನರನ್ನು ಓಡಿಸಬೇಕು ಎಂಬುದು ಕಾಂಗ್ರೆಸ್ ಉದ್ದೇಶ. ದೇಶ ಮತ್ತು ದೇಶದ ಪ್ರಜೆಗಳ ಜೊತೆ ಆಟವಾಡುವ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕು. ಛತ್ತೀಸಗಡದಲ್ಲಿ ಏನು ನಡೆಯಬೇಕು ಎಂಬುದು ದೆಹಲಿಯಲ್ಲಿ ತೀರ್ಮಾನವಾಗುತ್ತೆ. ಇಲ್ಲದಿದ್ದರೆ ಆಯುಷ್ಮಾನ್ ಭಾರತ ಯೋಜನೆ ಇದ್ದಕ್ಕಿದ್ದಂತೆ ಈ ರಾಜ್ಯದಲ್ಲಿ ನಿಂತುಹೋಗಲು ಕಾರಣವೇನು ಎಂದು ಪ್ರಶ್ನಿಸಿದರು.

ಛತ್ತೀಸಗಡದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮೋದಿ,2014ರ ಚುನಾವಣೆಗಳಿಗೂ ಹಿಂದೆ ಕಾಂಗ್ರೆಸ್ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿತ್ತು. ಕಾಂಗ್ರೆಸ್ ಗಿರಿಜನರ ಪ್ರದೇಶಗಳನ್ನು ಕಬಳಿಸುವ ಲೂಟಿಕೋರರಿಗೆ ಬೆಂಬಲ ನೀಡುತ್ತಿತ್ತು. ಗಿರಿಜನರು ಯಾವುದೇ ಪ್ರಯೋಜನ ಪಡೆಯುತ್ತಿರಲಿಲ್ಲ. ರಾಷ್ಟ್ರದ ತಿಜೋರಿಗೂ ಏನೂ ಬರಲಿಲ್ಲ. ಆದರೆ, ಕಾಂಗ್ರೆಸ್ ಎಲ್ಲವನ್ನೂ ಪಡೆದುಕೊಂಡಿತು ಎಂದು ಆರೋಪಿಸಿದರು.

ಅಲ್ಲದೆ, ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದ ಕಿಸಾನ್ ಯೋಜನಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೆ ತರಲಿಲ್ಲ. ರೈತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಿಲ್ಲ. ರೈತರಿಗೆ ಕೇಂದ್ರ ಕೊಡುವ ಹಣವನ್ನು ರಾಜ್ಯ ಕೊಡಲಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ಬಡಜನರಿಗಾಗಿ ಜಾರಿಗೆ ತಂದ ಹಲವು ಯೋಜನೆಗಳನ್ನು ಛತ್ತೀಸಗಡ ಸರ್ಕಾರ ಜಾರಿಗೊಳಿಸಿಲ್ಲ.ಛತ್ತೀಸಗಡದ ಅಭಿವೃದ್ಧಿಯ ಹಿತದೃಷ್ಟಿಯಿಂದ ಅತಿಶೀಘ್ರದಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆಯಲಾಗುವುದು. ಕಾಂಗ್ರೆಸ್ ಎಲ್ಲಾ ಯೋಜನೆಗಳನ್ನು ನಿಲ್ಲಿಸುವತ್ತ ಕೆಲಸ ಮಾಡಿದರೆ, ಬಿಜೆಪಿ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವತ್ತ ಕೆಲಸ ಮಾಡುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT