ಛತ್ತೀಸಗಡ: ನಕ್ಸಲ್‌ ಭರಾಟೆ ನಡುವೆ ಮತಬೇಟೆ

7
ಮಾವೋವಾದಿ ಚಟುವಟಿಕೆ ಕೇಂದ್ರವಾದ ಬಸ್ತಾರ್‌ ಪ್ರಾಂತ್ಯದಲ್ಲಿ ಸೋಮವಾರ ಮತದಾನ

ಛತ್ತೀಸಗಡ: ನಕ್ಸಲ್‌ ಭರಾಟೆ ನಡುವೆ ಮತಬೇಟೆ

Published:
Updated:
Deccan Herald

ಬೆಂಗಳೂರು: ಛತ್ತೀಸಗಡದಲ್ಲಿ ನಕ್ಸಲ್‌ ಹೋರಾಟಕ್ಕೆ ಬೆಂಬಲ ಕೊಡುತ್ತಿರುವವರು ಯಾರು? ಅಲ್ಲಿನ ನಕ್ಸಲ್‌ಬಾಧಿತ ಪ್ರದೇಶ
ಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಈ ಪ್ರಶ್ನೆಯನ್ನು ಮುನ್ನೆಲೆಗೆ ತರಲು ಬಿಜೆಪಿ ಯತ್ನಿಸುತ್ತಿದೆ ಎಂಬುದು ಆ ಪಕ್ಷದ ಅಗ್ರ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗಿದೆ.

‘ನಗರ ನಕ್ಸಲರಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಈ ನಕ್ಸಲರು ಬಡ, ಆದಿವಾಸಿ ಯುವ ಜನರ ಬದುಕನ್ನು ಧ್ವಂಸ ಮಾಡಿದ್ದಾರೆ. ಬಸ್ತಾರ್‌ ಪ್ರದೇಶದಲ್ಲಿ ನಕ್ಸಲ್‌ ಹಾವಳಿ ಇದೆ ಎಂಬ ನೆಪ ಹೇಳಿದ್ದ ಕಾಂಗ್ರೆಸ್‌ ಈ ಪ್ರದೇಶದ ಅಭಿವೃದ್ಧಿಗೆ ಗಮನವನ್ನೇ ಹರಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಛತ್ತೀಸಗಡದ ಬಿಜೆಪಿ ಸರ್ಕಾರವು ರಾಜ್ಯವನ್ನು ನಕ್ಸಲ್‌ ‍ಪೀಡೆಯಿಂದ ಮುಕ್ತವಾಗಿ ಸಿದೆ. ನಕ್ಸಲರನ್ನು ಕ್ರಾಂತಿಯ ಮಾಧ್ಯಮ ಎಂದು ಒಂದು ಪಕ್ಷವು ಬಿಂಬಿಸಲು ಯತ್ನಿಸುತ್ತಿದ್ದರೂ ಅದರಲ್ಲಿ ಯಶಸ್ವಿಯಾಗದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶನಿವಾರ ಹೇಳಿದ್ದಾರೆ. ಛತ್ತೀಸಗಡದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಇದೇ ಅರ್ಥದ ಮಾತು ಆಡಿದ್ದಾರೆ.

ಛತ್ತೀಸಗಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವಣ ಮತಗಳಿಕೆ ಅಂತರ ಅತ್ಯಲ್ಪ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ 41ರಷ್ಟು ಮತ್ತು ಕಾಂಗ್ರೆಸ್‌ ಶೇ 40.03ರಷ್ಟು ಮತ ಪಡೆದಿದ್ದವು. ಹಾಗಾಗಿ ನಕ್ಸಲ್‌ಪೀಡಿತ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆಯಲು ಎರಡೂ ಪಕ್ಷಗಳು ಯತ್ನಿಸುತ್ತಿವೆ. ನಕ್ಸಲ್‌ಪೀಡಿತ ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ.  

ಬಸ್ತಾರ್‌, ದಾಂತೇವಾಡ, ಕಾಂಕೇರ್‌ ಮುಂತಾದ ಪ್ರದೇಶಗಳಲ್ಲಿ ಬುಡಕಟ್ಟು ಜನರು ಹೆಚ್ಚಾಗಿದ್ದಾರೆ. ಈ ಪ್ರದೇಶಗಳಲ್ಲಿ ನಕ್ಸಲ್‌ ಚಟುವಟಿಕೆಯೂ ತೀವ್ರವಾಗಿದೆ. ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಶೇ 32ಕ್ಕೂ ಹೆಚ್ಚು. ಇವರಲ್ಲಿ ಬಹುಪಾಲು ಜನರು ಈ ಪ್ರದೇಶದಲ್ಲಿಯೇ ನೆಲೆಯಾಗಿದ್ದಾರೆ. ರಾಜ್ಯದ ಇತರ ಭಾಗಗಳಲ್ಲಿಯೂ ಹಂಚಿ ಹೋಗಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಭಾಗದ 18 ಕ್ಷೇತಗಳ ಪೈಕಿ 12ರಲ್ಲಿ ಕಾಂಗ್ರೆಸ್‌ ಗೆಲುವು ಪಡೆದಿತ್ತು. ಬಿಜೆಪಿಗೆ ದಕ್ಕಿದ್ದು ನಾಲ್ಕು ಸ್ಥಾನಗಳು ಮಾತ್ರ.

ಹಾಗಾಗಿಯೇ, ನಕ್ಸಲರಿಗೆ ಬೆಂಬಲವಾಗಿ ಇರುವುದು ಕಾಂಗ್ರೆಸ್‌ ಎಂದು ಸ್ಥಾಪಿಸುವ ಮೂಲಕ ಬುಡಕಟ್ಟು ಜನರ ಮತ ಸೆಳೆಯುವ ತಂತ್ರವನ್ನು ಬಿಜೆಪಿ ಸಕ್ರಿಯವಾಗಿ ಕಾರ್ಯರೂಪಕ್ಕೆ ಇಳಿಸುತ್ತಿದೆ. ನಕ್ಸಲ್‌ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದೇವೆ ಎಂದು ಬಿಜೆಪಿ ಮುಖಂಡರು ಸಾರುತ್ತಿದ್ದಾರೆ. ಆದರೆ, ಛತ್ತೀಸಗಡದಲ್ಲಿ ನಕ್ಸಲ್‌ ಹೆಸರಿನ ರಕ್ತದೋಕುಳಿ ಬೇರೆಯದೇ ಕತೆ ಹೇಳುತ್ತಿದೆ. ಚುನಾವಣಾ ದಿನಾಂಕ ಪ್ರಕಟವಾದ ಬಳಿಕವೂ ಎರಡು ತೀವ್ರ ಪ್ರಮಾಣದ ಹಿಂಸಾಚಾರವನ್ನು ನಕ್ಸಲರು ಎಸಗಿದ್ದಾರೆ.

ಮತದಾನ ಬಹಿಷ್ಕರಿಸುವಂತೆ ನಕ್ಸಲರು ಕರೆ ನೀಡಿರುವ ಕರಪತ್ರಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳು ಬುಡಕಟ್ಟು ಜನರ ಜೀವನ ವನ್ನೇ ಧ್ವಂಸಗೊಳಿಸಿವೆ ಎಂದು ಈ ಕರಪತ್ರಗಳಲ್ಲಿ ಹೇಳಲಾಗಿದೆ. ನಕ್ಸಲ್‌ ಚಟುವಟಿಕೆಯ ಕೇಂದ್ರವಾದ ಬಸ್ತಾರ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮತದಾನದ ದಿನವಾದ ಸೋಮವಾರ ಹಿಂಸಾಚಾರ ಉಂಟಾಗಬಹುದು ಎಂಬ ಭೀತಿ ಇದೆ. ಮತದಾನ ದಿನದಂದೇ ನಕ್ಸಲರು ಹಿಂಸೆಗೆ ಇಳಿದರೆ, ನಕ್ಸಲ್‌ ಚಟುವಟಿಕೆಯೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಬಹುದು. ಹಾಗಾಗಿಯೇ, ಮೊದಲ ಹಂತದಲ್ಲಿ ಮತದಾನವಾಗುವ ಪ್ರದೇಶಗಳ ಬಂದೋಬಸ್ತ್‌ಗೆ ನಿಯೋಜಿಸಲಾಗಿರುವ ಹೆಚ್ಚುವರಿ ಸಿಬ್ಬಂದಿಯ ಸಂಖ್ಯೆ 65 ಸಾವಿರಕ್ಕೂ ಹೆಚ್ಚು.

ಬಿಜೆಪಿ ಕಾರ್ಯತಂತ್ರ ಯಶಸ್ವಿಯಾದೀತೇ?: ನಕ್ಸಲ್‌ ಹಿಂಸೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಎರಡು ಅಲಗಿನ ಕತ್ತಿಯ ಜತೆಗೆ ಆಟ. ನಕ್ಸಲ್‌ ಚಟುವಟಿಕೆ ಬಗ್ಗೆ ಸಹಮತ ಇರುವ ಬುಡಕಟ್ಟು ಜನರ ಸಂಖ್ಯೆ ಗಣನೀಯವಾಗಿದೆ. ಇದಲ್ಲದೆ, ನಕ್ಸಲರನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡ ಕಾರ್ಯಾಚರಣೆಯಿಂದ ಅತಿಯಾದ ತೊಂದರೆಗೆ ಒಳಗಾದವರ ಸಂಖ್ಯೆಯೂ ಕಡಿಮೆ ಏನಲ್ಲ. ಹಾಗಾಗಿ ನಕ್ಸಲ್‌ ವಿರೋಧವನ್ನೇ ಚುನಾವಣೆಯ ಮುಖ್ಯ ವಿಷಯವಾಗಿಸುವುದರ ಪರಿಣಾಮ ಊಹಿಸುವುದು ಕಷ್ಟ.

ಬುಡಕಟ್ಟು ಸಮುದಾಯ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಪರವಾಗಿದೆ. ಅದು ಕಳೆದ ಚುನಾವಣೆಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಾಗಿದ್ದರೂ ಈ ಸಮುದಾಯದಲ್ಲಿ ಬಿಜೆಪಿ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಗುಡ್ಡಗಾಡು ಸಮುದಾಯದ ಶೇ 40ರಷ್ಟು ಮತ ಸಿಕ್ಕರೆ ಅನಾಯಾಸವಾಗಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಯಾಕೆಂದರೆ, ಗೆಲುವಿಗೆ ಉಳಿದ ಭಾಗವನ್ನು ಭರ್ತಿ ಮಾಡಲು ಮೇಲ್ಜಾತಿ ಗುಂಪುಗಳ ಗಟ್ಟಿ ಬೆಂಬಲ ಬಿಜೆಪಿಗೆ ಇದೆ. ಅಜಿತ್‌ ಜೋಗಿ ಮತ್ತು ಮಾಯಾವತಿ ಅವರ ಪಕ್ಷಗಳ ನಡುವಣ ಮೈತ್ರಿ ಕಸಿಯುವ ಮತಗಳು ತನಗೆ ನೆರವಾಗಬಹುದು ಎಂಬ ಎಣಿಕೆಯೂ ಬಿಜೆಪಿಗೆ ಇದೆ.

ಪ್ರತಿರೋಧದ ಜಾಡು...
* ಛತ್ತೀಸಗಡದ ನಕ್ಸಲ್‌ ಚಟುವಟಿಕೆಗೆ ದಶಕಗಳ ಇತಿಹಾಸ ಇದೆ.
* 2004ರಲ್ಲಿ ಪೀಪಲ್ಸ್ ವಾರ್ ಗ್ರೂಪ್‌ (ಪಿಡಬ್ಲ್ಯುಜಿ) ಮತ್ತು ಮಾವೋಯಿಸ್ಟ್‌ ಕಮ್ಯುನಿಸ್ಟ್‌ ಸೆಂಟರ್‌ ಆಫ್‌ ಇಂಡಿಯಾ (ಎಂಸಿಸಿಐ) ವಿಲೀನವಾಗಿ ರೂಪುಗೊಂಡ ಸಿಪಿಐ (ಮಾವೋವಾದಿ)
* ಸಿಪಿಐ (ಮಾವೋವಾದಿ) ಹುಟ್ಟಿನೊಂದಿಗೆ ನಕ್ಸಲ್‌ ಹೋರಾಟದ ಬಲ ದ್ವಿಗುಣ
* ಕಾಂಗ್ರೆಸ್‌ ಶಾಸಕ ಮಹೇಂದ್ರ ಕರ್ಮಾ ಅವರಿಂದ ಸಾಲ್ವಾ ಜುಡುಂ (ಶುದ್ಧೀಕರಣದ ಬೇಟೆ ಎಂದು ಅರ್ಥ) 2005ರಲ್ಲಿ ಸ್ಥಾಪನೆ. ನಕ್ಸಲರ ವಿರುದ್ಧ ಸ್ಥಳೀಯರ ಸಶಸ್ತ್ರ ಹೋರಾಟ ಇದರ ಉದ್ದೇಶ
* ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು ಮರುವರ್ಷವೇ ಇದನ್ನು ಕೈಗೆತ್ತಿಕೊಂಡರು. ಸಾಲ್ವಾ ಜುಡುಂ ಸದಸ್ಯರನ್ನು ವಿಶೇಷ ಪೊಲೀಸ್‌ ಅಧಿಕಾರಿಗಳು ಎಂದು ಪರಿಗಣಿಸಲಾಯಿತು. ಅವರಿಗೆ ಶಸ್ತ್ರಾಸ್ತ್ರವನ್ನೂ ಪೂರೈಸಲಾಯಿತು.
* ಸಾಲ್ವಾ ಜುಡುಂ ಹಾವಳಿ ಮಿತಿ ಮೀರಿತು. 2011ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ಇದನ್ನು ನಿಷೇಧಿಸಿತು.
* ಸಾಲ್ವಾ ಜುಡುಂ ನಿಷೇಧದ ಬೆನ್ನಿಗೇ ಸರ್ಕಾರವು ‘ಮಿಷನ್‌ 2016’ ಎಂಬ ಹೊಸ ಕಾರ್ಯಾಚರಣೆ ಆರಂಭಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !