ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸ್ಟಿಂಗ್ ಕೌಚ್ ಜಾಗೃತಿ ಅಗತ್ಯ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಿನಿಮಾಗಳಲ್ಲಿ ನಟನೆಯ ಅವಕಾಶಗಳನ್ನು ನೀಡುವುದಕ್ಕೆ ಪ್ರತಿಯಾಗಿ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಕ್ಯಾಸ್ಟಿಂಗ್ ಕೌಚ್ ಪ್ರಕ್ರಿಯೆ ಬಗ್ಗೆ ಸಂಸದೆ ರೇಣುಕಾ ಚೌಧರಿ ಹಾಗೂ ಬಾಲಿವುಡ್‍ನ ಹಿರಿಯ ನೃತ್ಯ ನಿರ್ದೇಶಕಿ ಸರೋಜ್‌ ಖಾನ್ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳು, ಸಮಸ್ಯೆಯ ಕುರಿತ ಆತಂಕ ಹಾಗೂ ನಿರ್ಲಕ್ಷ್ಯ ಎರಡಕ್ಕೂ ನಿದರ್ಶನಗಳಂತಿವೆ. ಸಂಸತ್ ಸೇರಿದಂತೆ ಉದ್ಯೋಗದ ಎಲ್ಲ ಕ್ಷೇತ್ರಗಳಲ್ಲೂ ಕ್ಯಾಸ್ಟಿಂಗ್ ಕೌಚ್ ಇದೆ ಎನ್ನುವ ಸಂಸದೆಯ ಮಾತು, ಪಿಡುಗಿನ ವ್ಯಾಪಕತೆಯನ್ನು ಸೂಚಿಸುವ ಮೂಲಕ ಹೆಣ್ಣುಮಕ್ಕಳ ಶೋಷಣೆಯ ಕುರಿತು ಆತಂಕ ಹುಟ್ಟಿಸುವಂತಿದೆ. ಇದಕ್ಕೆ ಇನ್ನೊಂದು ತುದಿಯಲ್ಲಿ- ‘ಚಿತ್ರರಂಗದಲ್ಲಿನ ಕ್ಯಾಸ್ಟಿಂಗ್ ಕೌಚ್ ಅತ್ಯಂತ ಸಹಜ ಪ್ರಕ್ರಿಯೆ’ ಎನ್ನುವ ಸರೋಜ್ ಖಾನ್ ಪ್ರತಿಕ್ರಿಯೆ ಆಕ್ಷೇಪಾರ್ಹ ಹಾಗೂ ಬೇಜವಾಬ್ದಾರಿತನದ್ದು. ‘ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರು ಹೆಣ್ಣುಮಕ್ಕಳ ಸಖ್ಯವನ್ನು ಬಯಸುತ್ತಾರೆ. ಈ ಪ್ರಕ್ರಿಯೆ ಚಿತ್ರರಂಗದಲ್ಲೂ ಇದ್ದು, ಇದರ ಬಗ್ಗೆ ಆಶ್ಚರ್ಯಪಡುವಂತಹದ್ದೇನೂ ಇಲ್ಲ’ ಎಂದು ಹೇಳಿರುವ ಅವರು, ಇದರಿಂದ ಒಂದಷ್ಟು ಹುಡುಗಿಯರಿಗೆ ಕೆಲಸವಾದರೂ ಸಿಗುತ್ತದೆ ಎಂದು ಹೇಳಿದ್ದಾರೆ. ಅವರ ಮಾತಿನ ಇಂಗಿತ, ಪ್ರತಿಫಲ ನೀಡುವುದಾದಲ್ಲಿ ಹೆಣ್ಣುಮಕ್ಕಳನ್ನು ಶೋಷಿಸಿದರೂ ಅದು ಸಹ್ಯ ಎನ್ನುವಂತಿದೆ ಹಾಗೂ ಚಿತ್ರೋದ್ಯಮದಲ್ಲಿ ನಡೆಯುತ್ತಿರಬಹುದಾದ ಅಂಥ ಘಟನೆಗಳನ್ನು ಸಮರ್ಥಿಸುವಂತಿದೆ. ಅಸಹಾಯಕತೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಕೂಡ ಅಪರಾಧದ ಒಂದು ಬಗೆ ಎನ್ನುವುದನ್ನು ಸರೋಜ್‍ ಖಾನ್‍ರ ಮಾತಿನ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬೇಕು. ಅಂತೆಯೇ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ಗುರುತಿಸಿಕೊಂಡ ಕಲಾವಿದೆಯರನ್ನೂ ಅನುಮಾನದಿಂದ ನೋಡಲು ಅವರ ಮಾತು ಅವಕಾಶ ಕಲ್ಪಿಸುವಂತಿದೆ.

ಕ್ಯಾಸ್ಟಿಂಗ್‍ ಕೌಚ್‍ ಕುರಿತಂತೆ ತೆಲುಗು ನಟಿ ಶ್ರೀರೆಡ್ಡಿ ಅವರು ಅರೆನಗ್ನಗೊಳ್ಳುವ ಮೂಲಕ ದಾಖಲಿಸಿದ ಪ್ರತಿಭಟನೆಯು ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳನ್ನು ಭೋಗದ ಸರಕುಗಳಂತೆ ಬಳಸಲಾಗುತ್ತಿರುವ ಕುರಿತು ಚರ್ಚೆಗೆ ಕಾರಣವಾಗಿದೆ. ನಿರ್ಮಾಪಕರು, ನಿರ್ದೇಶಕರು ಹಾಗೂ ನಟರು ಕಲಾವಿದೆಯರನ್ನು ತಮ್ಮ ಸುಖಕ್ಕೆ ಬಳಸಿಕೊಳ್ಳುವ ಬಗೆಗಿನ ದೂರು ಹೊಸತೇನಲ್ಲ. ಹಾಲಿವುಡ್‍ನಲ್ಲಂತೂ ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಭಾರತೀಯ ನಟಿಯರು ಕೂಡ ಧೈರ್ಯವಾಗಿ ಮಾತನಾಡುವ ಮೂಲಕ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ.

ಇಂಥ ಸಂದರ್ಭದಲ್ಲಿ ಸರೋಜ್‍ ಖಾನ್‍ರಂಥ ಹಿರಿಯರು ವ್ಯವಸ್ಥೆಯ ಹುಳುಕುಗಳನ್ನು ಸರಿಪಡಿಸುವ ಬಗ್ಗೆ ಮಾತನಾಡುವುದನ್ನು ಸಮಾಜ ನಿರೀಕ್ಷಿಸುತ್ತದೆ. ಈ ನಿರೀಕ್ಷೆಯಿಂದಲೇ ಅವರ ಮಾತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅಂತಿಮವಾಗಿ ಸರೋಜ್‍ ಖಾನ್‍ ಕ್ಷಮೆ ಕೋರಿದ್ದಾರೆ. ಹಾಗೆ ನೋಡಿದರೆ ಅವರ ಮಾತುಗಳು ಸಮಾಜದ ಒಂದು ವರ್ಗದ ಅಂತರಂಗದ ಅಭಿವ್ಯಕ್ತಿಯೇ ಆಗಿವೆ. ಈ ಮನಃಸ್ಥಿತಿಯ ಭಾಗವಾಗಿಯೇ, ಪತ್ರಕರ್ತೆಯ ಕೆನ್ನೆ ಸವರಿದ ರಾಜ್ಯಪಾಲ ಹಾಗೂ ಪತ್ರಿಕಾ ಕಚೇರಿಗಳಲ್ಲಿ ಪಲ್ಲಂಗಗಳನ್ನು ಕಲ್ಪಿಸಿಕೊಂಡ ಶಾಸಕನ ಧೋರಣೆಗಳನ್ನು ಗುರ್ತಿಸಬೇಕು. ದೇಶದೊಳಗಿನ ಪೈಶಾಚಿಕ ಕಾಮಕೃತ್ಯಗಳ ಬಗ್ಗೆ ಪ್ರಧಾನಿ ವಿದೇಶದಲ್ಲಿ ಪ್ರತಿಕ್ರಿಯಿಸುತ್ತಾರೆ. ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ಶಿಕ್ಷೆ ಜಾರಿಗೆ ತರುವುದನ್ನು ಆಡಳಿತಾರೂಢ ಪಕ್ಷ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಸ್ತ್ರೀಯರನ್ನು ರಕ್ಷಿಸುವುದು ಪುರುಷರ ಕರ್ತವ್ಯ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತವೆ. ಪುರುಷ ಅಹಂಕಾರದ ಈ ಎಲ್ಲ ಧೋರಣೆಗಳ ಹಿಂದೆಯೂ ಹೆಣ್ಣನ್ನು ಎರಡನೇ ದರ್ಜೆಯ ವ್ಯಕ್ತಿಯನ್ನಾಗಿಯೂ ಭೋಗದ ಸರಕಾಗಿಯೂ ನೋಡುವ ಹಳದಿಕಣ್ಣುಗಳಿವೆ. ಪುರುಷ ಅಹಂಕಾರದ ಪ್ರತಿರೂಪವೇ ಆಗಿರುವ ಕ್ಯಾಸ್ಟಿಂಗ್‍ ಕೌಚ್, ಚಿತ್ರೋದ್ಯಮಕ್ಕೆ ಅಂಟಿರುವ ಕಳಂಕವಾಗಿದೆ. ಈ ಕೊಳಕಿನ ವಿರುದ್ಧ ಧ್ವನಿಯೆತ್ತುವ ಕಲಾವಿದೆಯರನ್ನು ಬೆಂಬಲಿಸುವುದು ಹಾಗೂ ಶೋಷಣೆಯನ್ನು ಪ್ರತಿಭಟಿಸುವುದು ಪ್ರಜ್ಞಾವಂತರ ನಾಗರಿಕ ಕರ್ತವ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT