ಭಾನುವಾರ, ಜೂಲೈ 5, 2020
27 °C

ಮೋದಿ–ಮಾರಿಸನ್‌ ಸಮೋಸಾ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್‌ ಅವರು ಗುರುವಾರ ವಿಡಿಯೊ ಸಂವಾದ ನಡೆಸಲಿದ್ದಾರೆ. ಆದರೆ, ಅದಕ್ಕೂ ಮುನ್ನ, ಸೋಮವಾರ ಇಬ್ಬರು ನಡೆಸಿದ ‘ಸಮೋಸಾ ರಾಜತಾಂತ್ರಿಕತೆ’ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ.

ಮಾರಿಸನ್‌ ಅವರು ಸೋಮವಾರ ತಮ್ಮ ಮನೆಯಲ್ಲಿ ಸಮೋಸಾ ಹಾಗೂ ಮಾವಿನಕಾಯಿ ಚಟ್ನಿ ತಯಾರಿಸಿ, ಅದರ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ, ‘ಮೋದಿ ಅವರು ಸಸ್ಯಾಹಾರಿ. ಇದನ್ನು ನಾನು ಅವರ ಜತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಆದರೆ ನಮ್ಮ ಸಂವಾದ ವಿಡಿಯೊ ಮುಖಾಂತರ ನಡೆಯಲಿದೆ’ ಎಂದು ಬರೆದಿದ್ದಾರೆ. ಟ್ವೀಟ್‌ನಲ್ಲಿ ಅವರು ‘ಸಮೋಸಾ’ ಪದವನ್ನು ‘ಸ್ಕೊಮೊಸಾ’ (ScoMosas) ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಸಾವಿರಾರು ಬಾರಿ ಮರು ಟ್ವೀಟ್‌ ಆಗಿದೆ. ಇದನ್ನು ಗಮನಿಸಿದ ಮೋದಿ ಅವರು, ‘ನಾವು ಹಿಂದೂ ಮಾಹಾಸಾಗರದಿಂದ ಬೆಸೆದುಕೊಂಡಿದ್ದು, ಸಮೋಸಾ ಮೂಲಕ ಒಗ್ಗಟ್ಟಾಗೋಣ. ಸಮೋಸಾ ರುಚಿಕರವಾಗಿರುವಂತಿದೆ. ಕೋವಿಡ್‌–19 ವಿರುದ್ಧ ಗೆಲುವು ಸಾಧಿಸಿದ ನಂತರ ಜತೆಯಾಗಿ ಸಮೋಸಾ ಸೇವಿಸೋಣ. ಜೂನ್‌ 4ರ ವಿಡಿಯೊ ಸಂವಾದಕ್ಕಾಗಿ ಉತ್ಸುಕನಾಗಿದ್ದೇನೆ’ ಎಂದು ಟ್ವಿಟರ್‌ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಜನವರಿ 13ರಿಂದ 16ರವರೆಗೆ ಮಾರಿಸನ್‌ ಅವರ ದೆಹಲಿ ಪ್ರವಾಸ ನಿಗದಿಯಾಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದ ಪ್ರವಾಸ ಮುಂದೂಡಬೇಕಾಯಿತು. ನಂತರ ಲಾಕ್‌ಡೌನ್‌ನಿಂದ ಪ್ರವಾಸವನ್ನು ಮರುನಿಗದಿ ಮಾಡಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು