ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಕಡಿತದ ಉಡುಗೊರೆ?: ಆರ್ಥಿಕತೆ ಚೇತರಿಕೆಗೆ ಕೇಂದ್ರದ ಆದ್ಯತೆ

Last Updated 26 ಮೇ 2019, 18:52 IST
ಅಕ್ಷರ ಗಾತ್ರ

ನವದೆಹಲಿ: ಹಿಂಜರಿಕೆ ಕಾಣುತ್ತಿರುವ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಮಧ್ಯಮ ವರ್ಗದ ಜನರ ಜೇಬಿಗೆ ಹೆಚ್ಚು ಹೆಚ್ಚು ಹಣ ಹೋಗುವಂತೆ ಮಾಡುವುದು ಕೇಂದ್ರದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದ ಮೊದಲ ನೂರು ದಿನಗಳ ಕಾರ್ಯಯೋಜನೆಯಾಗಲಿದೆ.

ಜುಲೈ ತಿಂಗಳಲ್ಲಿ ಕೇಂದ್ರದ ಬಜೆಟ್‌ ಮಂಡನೆಯಾಗಲಿದ್ದು, ವಾರ್ಷಿಕ ₹5 ಲಕ್ಷದವರೆಗೆ ಸಂಪಾದನೆ ಮಾಡುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆ ಇದೆ. ಹೂಡಿಕೆಯನ್ನು ಹೆಚ್ಚಿಸುವ ಸಲುವಾಗಿ ಕಾರ್ಪೊರೇಟ್‌ ವಲಯಕ್ಕೂ ಕೆಲವು ರಿಯಾಯಿತಿಗಳನ್ನು ನೀಡುವ ಬಗ್ಗೆ ಯೋಜನೆಗಳು ಸಿದ್ಧವಾಗುತ್ತಿವೆ.

ಮೊದಲ ನೂರು ದಿನಗಳಲ್ಲಿ ಸರ್ಕಾರವು ರಸ್ತೆ ನಿರ್ಮಾಣ, ರೈಲ್ವೆ ಜಾಲ ವಿಸ್ತರಣೆ, ಗೃಹನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ವೆಚ್ಚ ಮಾಡುವ ಮೂಲಕ ಸಿಮೆಂಟ್‌, ಉಕ್ಕು ಮತ್ತು ಕಲ್ಲಿದ್ದಲು ಉದ್ದಿಮೆಗಳಿಗೆ ಶಕ್ತಿ ತುಂಬುವುದಲ್ಲದೆ, ಬ್ಯಾಂಕ್‌ಗಳ ವಿಲೀನ ಮತ್ತು ಪುನರ್ಧನ ನೀಡುವುದೂ ಸರ್ಕಾರದ ಆದ್ಯತೆಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೋದಿ ಅವರು 2014ರಲ್ಲಿ ಅಧಿಕಾರ ಸ್ವೀಕರಿಸಿದಾಗ ಇದ್ದ ಸ್ಥಿತಿ ಈಗ ಇಲ್ಲ. ಕಳೆದ ಐದು ತ್ರೈಮಾಸಿಕಗಳಲ್ಲಿಅರ್ಥ ವ್ಯವಸ್ಥೆಯು ಸತತವಾಗಿ ಕುಸಿಯುತ್ತ 2018– 19ನೇ ಸಾಲಿನ ಕನಿಷ್ಠ ಮಟ್ಟಕ್ಕೆ ಬಂದುನಿಂತಿದೆ. 2019ರ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದ ಅಂಕಿ ಅಂಶಗಳು ಮೇ 30ರಂದು ಬಹಿರಂಗಗೊಳ್ಳಲಿವೆ. ಈ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಇನ್ನಷ್ಟು ಕುಸಿತ ಕಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರವು ಮುಂದಿನ ದಿನಗಳಲ್ಲಿ ಹಂತಹಂತವಾಗಿ ನೇರ ತೆರಿಗೆ ಸರಳೀಕರಣ, ಭೂ ಮತ್ತು ಕಾರ್ಮಿಕ ಕಾಯ್ದೆ ಸುಧಾರಣೆ ಮುಂತಾದ ಮಹತ್ವದ ಹೆಜ್ಜೆಗಳನ್ನು ಇಡಲಿದೆ. ಆದರೆ ಮೊದಲ ಮೂರು–ನಾಲ್ಕು ತಿಂಗಳಲ್ಲಿ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವುದೇ ಅದರ ಆದ್ಯತೆಯಾಗಿರುತ್ತದೆ.

ನೇರ ತೆರಿಗೆ ವಿಚಾರದಲ್ಲಿ, ಆದಾಯ ತೆರಿಗೆ ಹಂತಗಳಲ್ಲಿ ಭಾರಿ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ವಾರ್ಷಿಕ ₹ 5ಲಕ್ಷದವರೆಗೆ ಆದಾಯ ಇರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆ ಇದೆ. ₹ 5ಲಕ್ಷದಿಂದ ₹10ಲಕ್ಷ ವರೆಗಿನ ಆದಾಯದವರಿಗೆ ಇನ್ನಷ್ಟು ರಿಯಾಯಿತಿಗಳು ಲಭಿಸುವ ನಿರೀಕ್ಷೆ ಇದೆ. ಪ್ರಸಕ್ತ ಈ ಹಂತದವರಿಗೆ ಶೇ 20ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತದೆ.

ಇದಲ್ಲದೆ, ಹೂಡಿಕೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಕಾರ್ಪೊರೇಟ್‌ ತೆರಿಗೆಯನ್ನು ಈಗಿನ ಶೇ 30ರಿಂದ ಶೇ 25ಕ್ಕೆ ಇಳಿಸುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ‘ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ಮೂಲಸೌಲಭ್ಯ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. 2022ನೇ ಸಾಲಿನೊಳಗೆ ಮೂಲ ಸೌಲಭ್ಯ ಕ್ಷೇತ್ರದಲ್ಲಿ ₹ 100 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್ಥಿಕ ಹಿಂಜರಿತದ ಹೊರತಾಗಿಯೂ ಸಿಮೆಂಟ್‌ ಉದ್ದಿಮೆ ಮಾತ್ರ ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಉತ್ತಮ ಸಾಧನೆ ದಾಖಲಿಸಿದೆ. ಉಕ್ಕು ಹಾಗೂ ವಿದ್ಯುತ್‌ ಕ್ಷೇತ್ರಗಳು ಭಾರಿ ಹಿನ್ನಡೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT