ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮದ ಮೇಲೆ ದೇಶ ಒಡೆಯುತ್ತಿರುವ ಮೋದಿಯೇ ನಿಜವಾದ ದೇಶದ್ರೋಹಿ: ಸಿದ್ದು

Last Updated 12 ಮೇ 2019, 14:45 IST
ಅಕ್ಷರ ಗಾತ್ರ

ಬೆಂಗಳೂರು:‘ಜಾತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನರೇಂದ್ರ ಮೋದಿಯೇ ನಿಜವಾದ ದೇಶದ್ರೋಹಿ,’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಮತ್ತು ಬಿಜೆಪಿ ವಿರುದ್ಧ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ‘ಮಹಾತ್ಮ ಗಾಂಧಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ದೇಶಕ್ಕಾಗಿ ಪ್ರಾಣತ್ಯಾಗಗೈದ ಒಬ್ಬನೇ ಒಬ್ಬ ಬಿಜೆಪಿಯವನನ್ನು ತೋರಿಸಿ...ಉಳಿದವರ ದೇಶಪ್ರೇಮ ಪ್ರಶ್ನಿಸುವ ಬಿಜೆಪಿಯವರೇ ನಿಜವಾದ ದೇಶಪ್ರೇಮಿಗಳಲ್ಲ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನರೇಂದ್ರ ಮೋದಿಯೇ ನಿಜವಾದ ದೇಶದ್ರೋಹಿ,’ ಎಂದು ಅವರು ಕಟು ಶಬ್ದಗಳಿಂದ ಟೀಕಿಸಿದ್ದಾರೆ.

‘ಭ್ರಷ್ಟಾಚಾರ ಮಾಡಿ ಜೈಲು ಸೇರಿದ ಪಕ್ಷದವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಪಕ್ಷದವರಿಗೆ ದೇಶಪ್ರೇಮದ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಇದೆಂಥಾ ವಿಪರ್ಯಾಸ?ದೇಶಪ್ರೇಮಿ ಗಾಂಧಿಯನ್ನು ಕೊಂದ ಆರ್‌ಎಸ್‌ಎಸ್‌ನ ಗೋಡ್ಸೆಯ ಅನುಯಾಯಿಗಳು ನೀಡುವ ದೇಶಪ್ರೇಮದ ಸರ್ಟಿಫಿಕೇಟ್ ಯಾರಿಗೆ ಬೇಕಾಗಿದೆ? ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಆಜಾದ್ ಇವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ವರ್ಷಗಟ್ಟಲೆ ಜೈಲುವಾಸ ಅನುಭವಿಸಿದರು. ಇವರಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿಬಂದ ಒಬ್ಬನೇ ಒಬ್ಬ ಆರ್‌ಎಸ್‌ಎಸ್ ಮುಖಂಡನನ್ನು ತೋರಿಸಿ. ಆಮೇಲೆ ಬಿಜೆಪಿಯವರ ದೇಶಪ್ರೇಮವನ್ನು ಒಪ್ಪೋಣ,’ ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ

‘ಜನರ ದುಡ್ಡಿನಲ್ಲಿ ಪ್ರಧಾನಿ ಮೋದಿ ವಿದೇಶ ಯಾತ್ರೆ ಮಾಡಿಕೊಂಡು ಆರಾಮವಾಗಿದ್ದಾರೆ. ಈವರೆಗೆ ರೂ.1,690 ಕೋಟಿ ವೆಚ್ಚದಲ್ಲಿ 84 ಬಾರಿ ವಿದೇಶ ಯಾತ್ರೆ ಮಾಡಿದ್ದು, ಸುಳ್ಳು ಭಾಷಣ, ವಿದೇಶ ಸುತ್ತಿದ್ದೇ ಅವರ ಸಾಧನೆಗಳಾಗಿವೆ. ಅಭಿವೃದ್ಧಿ ಮತ್ತು ಸೌಹಾರ್ದತೆಯ ಅರ್ಥವೇ ಗೊತ್ತಿರದ ಬಿಜೆಪಿಯನ್ನು ಈ ಬಾರಿ ಜನ ತಿರಸ್ಕರಿಸಲಿದ್ದಾರೆ ಎಂಬ ಭರವಸೆಯಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಬಡ ಜನರಿಗೆ ಕಡಿಮೆ ದರದಲ್ಲಿ‌ ಆಹಾರ ಸಿಗುವಂತೆ ಮಾಡಿದರು. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿ ಸಾಮಾಜಿಕ‌ ಬದಲಾವಣೆ ಕಾರಣರಾದವರು ಕಾಂಗ್ರೆಸ್‌ನವರು. ಅದರೆ ನೋಟ್ ಬ್ಯಾನ್ ಮಾಡಿ ಜನರನ್ನು ಬೀದಿಗೆ ತಂದವರು ಮೋದಿಯವರು,’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT