ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳಿಗೆ ನಿರ್ದಿಷ್ಟ ದಾಳಿಯ ತಾಕತ್ತಿಲ್ಲ

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮೋದಿ ಚಾಲನೆ * ವಿಪಕ್ಷಗಳ ವಿರುದ್ಧ ವಾಗ್ದಾಳಿ * ಮತ್ತೆ ಸರ್ಕಾರ ರಚಿಸುವ ವಿಶ್ವಾಸ
Last Updated 28 ಮಾರ್ಚ್ 2019, 19:42 IST
ಅಕ್ಷರ ಗಾತ್ರ

ಮೀರಠ್ (ಉತ್ತರ ಪ್ರದೇಶ): ‘ನಾವು ನೆಲ, ವಾಯು ಮತ್ತು ಬಾಹ್ಯಾಕಾಶದಲ್ಲೂ ನಿರ್ದಿಷ್ಟ ದಾಳಿ ನಡೆಸುವ ತಾಕತ್ತು ತೋರಿಸಿದ್ದೇವೆ. ಆದರೆ ವಿರೋಧ ಪಕ್ಷಗಳಿಗೆ ಆ ತಾಕತ್ತೇ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಇದು ಚೌಕೀದಾರನ ಸರ್ಕಾರ. ಹೀಗಾಗಿಯೇ ನಾವು ನೆಲ, ವಾಯು ಮತ್ತು ಬಾಹ್ಯಾಕಾಶದಲ್ಲೂ ನಿರ್ದಿಷ್ಟ ದಾಳಿ ನಡೆಸುವ ತಾಕತ್ತು ತೋರಿಸಿದೆವು. ನಮ್ಮದು ಧಮ್‌ದಾರ್‌ ಬಿಜೆಪಿ, ವಿರೋಧ ಪಕ್ಷಗಳೆಲ್ಲಾ ದುರ್ಬಲ. ದೇಶದ 130 ಕೋಟಿ ಜನರೂ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಬಯಸಿದ್ದಾರೆ. ಭಾರತವು ಪ್ರಗತಿ ಸಾಧಿಸಬೇಕು. ಅದೇ ಸಂದರ್ಭದಲ್ಲಿ ಭಾರತವು ವೈರಿಗಳಿಂದಲೂ ಮುಕ್ತವಾ ಗಬೇಕು’ ಎಂದು ಮೋದಿ ಹೇಳಿದ್ದಾರೆ.

‘ಉತ್ತಮ ಆಡಳಿತ ನಡೆಸಲು ಗೊತ್ತಿರುವ ಸರ್ಕಾರವನ್ನು ದೇಶವು ಇದೇ ಮೊದಲ ಬಾರಿ ಪಡೆದಿತ್ತು. 2014ರಲ್ಲಿ ಪ್ರಚಾರ ಮಾಡುವಾಗ ನಮ್ಮ ಸಾಧನೆಗಳ ಪಟ್ಟಿಯನ್ನು ನೀಡುತ್ತೇನೆ ಎಂದು ಹೇಳಿದ್ದೆ. ಕೆಲವೇ ದಿನಗಳಲ್ಲಿ ನಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡಲಿದ್ದೇನೆ. ನಾವು ಏನೆಲ್ಲಾ ಕೆಲಸ ಮಾಡಿದ್ದೇವೆ ಎಂಬುದನ್ನು ನಿಮ್ಮ ಮುಂದೆ ಬಹಿರಂಗಪಡಿಸಲಿದ್ದೇನೆ. ಅದರ ಜತೆಯಲ್ಲೇ ನೀವು ಏನೆಲ್ಲಾ ಕೆಲಸ ಮಾಡಿದ್ದೀರಿ ಎಂದು ವಿಪಕ್ಷಗಳನ್ನು ಪ್ರಶ್ನಿಸುತ್ತೇನೆ’ ಎಂದು ಅವರು ಸವಾಲು ಹಾಕಿದ್ದಾರೆ.

ಮಹಾಮೈತ್ರಿ ಎಂದರೆ ಸರಾಬ್‌

ಉತ್ತರಪ್ರದೇಶದಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟವನ್ನು ಪ್ರಧಾನಿ ನರೇಂದ್ರ ಮೋದಿ ‘ಸರಾಬ್’ (ಸಾರಾಯಿ) ಎಂದು ಕರೆದಿದ್ದಾರೆ.

ಸಮಾಜವಾದಿ ಪಕ್ಷದಿಂದ ‘ಸ’, ರಾಷ್ಟ್ರೀಯ ಲೋಕ ದಳದಿಂದ ‘ರಾ’ ಮತ್ತು ಬಹುಜನ ಸಮಾಜವಾದಿ ಪಕ್ಷದಿಂದ ‘ಬ’ ಎಂಬ ಅಕ್ಷರಗಳನ್ನು ಆರಿಸಿಕೊಂಡು, ಮಹಾಮೈತ್ರಿಕೂಟವನ್ನು ಮೋದಿ ‘ಸರಾಬ್’ ಎಂದು ಕರೆದಿದ್ದಾರೆ.

‘ಸರಾಬ್‌ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದು ನಿಮ್ಮನ್ನು ಹಾಳುಮಾಡುತ್ತದೆ. ಹೀಗಾಗಿ ನೀವು ಸರಾಬ್‌ ಅನ್ನು ದೂರವಿಡಬೇಕು’ ಎಂದು ಮೋದಿ ಕರೆ ನೀಡಿ ನೀಡಿದ್ದಾರೆ.

ಮಹಾಮೈತ್ರಿಕೂಟವನ್ನು ‘ಸರಾಬ್’ ಎಂದು ಕರೆದಿರುವುದಕ್ಕೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

* ದ್ವೇಷವನ್ನು ಬಿತ್ತುವ ಜನರಿಗೆ ‘ಸರಾಬ್’ ಮತ್ತು ‘ಶರಾಬ್‌’ ನಡುವಣ ವ್ಯತ್ಯಾಸ ಗೊತ್ತಿಲ್ಲ. ಸರಾಬ್ ಎಂದರೆ ಮರೀಚಿಕೆ. ಮೋದಿ ಸರ್ಕಾರ ಐದು ವರ್ಷಗಳಲ್ಲಿ ಜನರಿಗೆ ನೀಡಿರುವುದು ‘ಸರಾಬ್’ (ಮರೀಚಿಕೆ) ಅಲ್ಲದೆ ಮತ್ತೇನಲ್ಲ

–ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

* ಇಂತಹ ಮಾತುಗಳು ಪ್ರಧಾನಿಗೆ ಯೋಗ್ಯವೇ? ಪ್ರಜಾಪ್ರಭುತ್ವದಲ್ಲಿ ಮೂರು ರಾಜಕೀಯ ಪಕ್ಷಗಳನ್ನು ನೀವು ಶರಾಬ್ ಎಂದು ಕರೆಯುತ್ತಿದ್ದೀರಿ. ಒಬ್ಬ ಪ್ರಧಾನಿ ಆಡುವಂತಹ ಮಾತೇ ಇದು?

–ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT