ಲೋಕಸಭೆಯೊಳಗೆ ತಬ್ಬುಗೆ: ಪ್ರತಿಕ್ರಿಯೆ ಇಬ್ಬಗೆ

7

ಲೋಕಸಭೆಯೊಳಗೆ ತಬ್ಬುಗೆ: ಪ್ರತಿಕ್ರಿಯೆ ಇಬ್ಬಗೆ

Published:
Updated:

ಷಾಜಹಾನ್‌ಪುರ, ಉತ್ತರ ಪ್ರದೇಶ: ಹಲವು ಪಕ್ಷಗಳು ತಮ್ಮ ವಿರುದ್ಧ ಒಗಟ್ಟಾಗುವುದು ಕಮಲ ಅರಳಲು ಸಹಕಾರಿಯೇ ಆಗುತ್ತದೆ ಎಂದು ಮೋದಿ ಅವರು ರ್‍ಯಾಲಿಯೊಂದರಲ್ಲಿ ಹೇಳಿದ್ದಾರೆ. 

‘ಅವಿಶ್ವಾಶ ನಿರ್ಣಯಕ್ಕೆ ಕಾರಣ ಏನು ಎಂದು ನಾವು ಅವರನ್ನು ಕೇಳಿದೆವು. ಆದರೆ ಅದರಲ್ಲಿ ವಿಫಲರಾದ ಅವರು ನಮಗೆ ಬೇಕಿಲ್ಲದಿದ್ದರೂ ತಬ್ಬಿಕೊಂಡರು’ ಎಂದು ಪ್ರಧಾನಿ ಹೇಳಿದ್ದಾರೆ. 

ಒಂದು ದಳವಲ್ಲ, ಹಲವು ದಳಗಳಿವೆ. ದಳ ಮತ್ತು ದಳಗಳು ಸೇರಿದಾಗ ದಲ್‌ದಲ್‌ ಆಗುತ್ತದೆ (ದಲ್‌ದಲ್‌ ಎಂದರೆ ಹಿಂದಿಯಲ್ಲಿ ಜವುಗು ನೆಲ ಎಂದು ಅರ್ಥ). ಇಂತಹ ಜವುಗು ನೆಲವು ಕಮಲ ಅರಳಲು ಅನುಕೂಲಕಾರಿ ಎಂದು ಅವರು ವಿವರಿಸಿದರು. 

ಯುವಜನರು, ಬಡವರು ಮತ್ತು ರೈತರನ್ನು ನಿರ್ಲಕ್ಷಿಸಿರುವ ವಿರೋಧ ಪಕ್ಷಗಳು ಅಧಿಕಾರದ ಹಿಂದೆ ಓಡುತ್ತಿವೆ. ಅವರೆಲ್ಲರ ಕಣ್ಣುಗಳು ಪ್ರಧಾನಿ ಕುರ್ಚಿಯ ಮೇಲಿವೆ ಎಂದು ಲೋಕಸಭೆಯಲ್ಲಿ ಶುಕ್ರವಾರ ಹೇಳಿದ್ದನ್ನು ಪುನರುಚ್ಚರಿಸಿದರು. 

‘ನಾನು ಮಾಡಿರುವ ತಪ್ಪಾದರೂ ಏನು... ಬಡವರಿಗಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ... ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ. ಇದು ನಾನು ಮಾಡಿದ ಅಪರಾಧ’ ಎಂದು ಮೋದಿ ಹೇಳಿದರು. 

ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಮೋದಿ ಅವರದ್ದು ಇದು ಮೂರನೇ ಭೇಟಿಯಾಗಿದೆ. 

ಕಟ್ಟುಕತೆ, ದೊಂಬರಾಟ: ಜೇಟ್ಲಿ ಆರೋಪ
ನವದೆಹಲಿ
: ರಾಹುಲ್‌ ಅವರ ಭಾಷಣವು ಅಜ್ಞಾನ, ಸುಳ್ಳು ಮತ್ತು ದೊಂಬರಾಟ’ದ ಮಿಶ್ರಣವಾಗಿತ್ತು. ಹುಡುಗಾಟಿಕೆಯಿಂದ ವರ್ತಿಸಿದ ಅವರು ಭ್ರಮೆಯಲ್ಲಿದ್ದರು ಎಂದು ಜೇಟ್ಲಿ ಆರೋಪಿಸಿದ್ದಾರೆ. 

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಜತೆಗೆ ರಾಹುಲ್‌ ನಡೆಸಿದ್ದಾರೆ ಎನ್ನಲಾದ ಮಾತುಕತೆ ಕಟ್ಟುಕತೆ. ಭಾರತದ ರಾಜಕಾರಣಿಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ವರ್ಚಸ್ಸಿಗೆ ಇಂತಹ ಕಟ್ಟುಕತೆಯ ಮೂಲಕ ರಾಹುಲ್‌ ಧಕ್ಕೆ ತಂದಿದ್ದಾರೆ ಎಂದು ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ರಫೇಲ್‌ ಒಪ್ಪಂದದ ವಿವರಗಳಿಗೆ ಸಂಬಂಧಿಸಿ ರಹಸ್ಯ ಕಾಪಾಡಿಕೊಳ್ಳಬೇಕು ಎಂಬ ಯಾವುದೇ ಷರತ್ತು ಇಲ್ಲ ಎಂದು ಮ್ಯಾಕ್ರನ್‌ ತಮಗೆ ಹೇಳಿದ್ದಾಗಿ ರಾಹುಲ್‌ ಲೋಕಸಭೆಯಲ್ಲಿ ಶುಕ್ರವಾರ ಹೇಳಿದ್ದರು. 

ಮ್ಯಾಕ್ರನ್‌ ಜತೆಗಿನ ಸಂಭಾಷಣೆಯ ಕಟ್ಟುಕತೆಯ ಮೂಲಕ ತಮ್ಮ ವಿಶ್ವಾಸಾರ್ಹತೆಯನ್ನೂ ರಾಹುಲ್‌ ಕೆಳಗೆ ಇಳಿಸಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಯನ್ನು ಅವರು ಕ್ಷುಲ್ಲಕ ಮಟ್ಟಕ್ಕೆ ಇಳಿಸಿದ್ದಾರೆ. ಪ್ರಧಾನಿಯಾಗುವ ಆಕಾಂಕ್ಷೆ ಇರುವವರು ಯಾವತ್ತೂ ಅಜ್ಞಾನ, ಸುಳ್ಳು ಮತ್ತು ದೊಂಬರಾಟದ ಮೊರೆ ಹೋಗಬಾರದು ಎಂದು ಅವರು ಹೇಳಿದ್ದಾರೆ. 

ಮೂಲಭೂತ ವಿಚಾರಗಳಿಗೆ ಸಂಬಂಧಿಸಿ ಮಾತ್ರವಲ್ಲ, ಶಿಷ್ಟಾಚಾರ ವಿಚಾರದಲ್ಲಿಯೂ ಅವರಿಗೆ ಅಜ್ಞಾನ ಇದೆ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. 

ನೈತಿಕತೆ–ಬಹುಮತದ ಹೋರಾಟ: ನಾಯ್ಡು

ಅವಿಶ್ವಾಸ ನಿರ್ಣಯವು ನೈತಿಕತೆ ಮತ್ತು ಬಹುಮತದ ನಡುವಣ ಹೋರಾಟ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕೇಂದ್ರದ ವಿರುದ್ಧ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಈ ನಿರ್ಣಯಕ್ಕೆ ಬೆಂಬಲ ನೀಡಿದ ಪಕ್ಷಗಳಿಗೆ ನಾಯ್ಡು ಕೃತಜ್ಞತೆ ಸಲ್ಲಿಸಿದ್ದಾರೆ. 

ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು 14ನೇ ಹಣಕಾಸು ಆಯೋಗವು ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ಹೇಳಿರುವುದು ಸರಿಯಲ್ಲ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ‘ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು 14ನೇ ಹಣಕಾಸು ಆಯೋಗವು ಸ್ಪ‍ಷ್ಟಪಡಿಸಿದೆ. ಈ ವಿಚಾರದಲ್ಲಿ ಆಯೋಗವನ್ನು ಎಳೆದು ತರಬೇಡಿ. ವಿಶೇಷ ಸ್ಥಾನಮಾನದ ವಿಚಾರದಲ್ಲಿ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. 

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನಿರಾಕರಿಸಿ ಈಶಾನ್ಯ ರಾಜ್ಯಗಳಿಗೆ ಈ ಸ್ಥಾನ ನೀಡಿದ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರ ವಿರುದ್ಧವೂ ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರೇ ನಾಯ್ಡುಗಿಂತ ಪ್ರಬುದ್ಧ ಎಂದು ಪ್ರಧಾನಿ ಹೇಳಿರುವುದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ‘ನಾನು ಪ್ರಧಾನಿಗಿಂತಲೂ ಹಿರಿಯ ವ್ಯಕ್ತಿ. ಅವರು ಹಾಗೆ ಹೇಳಲು ಹೇಗೆ ಸಾಧ್ಯ’ ಎಂದು ನಾಯ್ಡು ಪ್ರಶ್ನಿಸಿದರು. 

ಆಂಧ್ರಪ್ರದೇಶ ವಿಭಜನೆಗೆ ಸಂಬಂಧಿಸಿ ‘ಮಗುವನ್ನು ಉಳಿಸಿಕೊಂಡ ಕಾಂಗ್ರೆಸ್‌ ತಾಯಿಯನ್ನು ಕೊಂದಿತು. ನಾನಾಗಿದ್ದರೆ ತಾಯಿಯನ್ನೂ ಉಳಿಸಿಕೊಳ್ಳುತ್ತಿದ್ದೆ’ ಎಂದು ಮೋದಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನಾಯ್ಡು, ‘ಅದಕ್ಕಾಗಿ ನಾವು ವರ್ಷಗಳಿಂದ ಕಾಯುತ್ತಿದ್ದೇವೆ’ ಎಂದರು. 

ದೇಶ ಕಟ್ಟಲು ಪ್ರೀತಿ ಬೇಕು: ರಾಹುಲ್‌ 
ನವದೆಹಲಿ
: ಪ್ರೀತಿ ಮತ್ತು ಸಹಾನುಭೂತಿಯಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

ಜನರ ಮನದಲ್ಲಿ ‘ದ್ವೇಷ, ಭೀತಿ ಮತ್ತು ಆಕ್ರೋಶ’ ಸೃಷ್ಟಿಸುವ ಮೂಲಕ ಪ್ರಧಾನಿ ತಮ್ಮ ರಾಜಕೀಯ ನೆಲೆ ವಿಸ್ತರಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಪ್ರೀತಿ ಮತ್ತು ಸಹಾನುಭೂತಿಯಿಂದ ಅದನ್ನು ಎದುರಿಸಲಿದೆ ಎಂದು ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ರಾಹುಲ್‌ ಹೇಳಿದ್ದರು. ಶನಿವಾರವೂ ಅವರು ಅದನ್ನು ಮುಂದುವರಿಸಿದ್ದಾರೆ. 

‘ಸಂಸತ್ತಿನಲ್ಲಿ ನಿನ್ನೆ (ಶುಕ್ರವಾರ) ನಡೆದ ಚರ್ಚೆಯ ಕೇಂದ್ರ ಬಿಂದು ಏನೆಂದರೆ... ಪ್ರಧಾನಿ ತಮ್ಮ ರಾಜಕೀಯ ನೆಲೆ ವಿಸ್ತರಣೆಗೆ ದ್ವೇಷ, ಭೀತಿ, ಮತ್ತು ಆಕ್ರೋಶವನ್ನು ಕೆಲವು ಜನರ ಮನದಲ್ಲಿ ಬಿತ್ತುತ್ತಿದ್ದಾರೆ. ಭಾರತೀಯರ ಹೃದಯದಲ್ಲಿ ಪ್ರೀತಿ ಮತ್ತು ಸಹಾನುಭೂತಿ ಸೃಷ್ಟಿಸುವುದೇ ದೇಶ ಕಟ್ಟುವ ಏಕೈಕ ದಾರಿ ಎಂಬುದನ್ನು ನಾವು ಸಾಧಿಸಿ ತೋರಿಸಲಿದ್ದೇವೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಫ್ರಾನ್ಸ್‌ನಂತೆ ಮೋದಿ, ರಾಹುಲ್‌ ಕ್ರೊವೇಷ್ಯಾ: ಶಿವಸೇನಾ 
ಮುಂಬೈ
: ಅವಿಶ್ವಾಸ ನಿರ್ಣಯದ ಚರ್ಚೆಯನ್ನು ಫುಟ್‌ಬಾಲ್‌ ವಿಶ್ವಕಪ್‌ ‍ಫೈನಲ್‌ಗೆ ಶಿವಸೇನಾ ಹೋಲಿಸಿದೆ. 

‘ಫುಟ್‌ಬಾಲ್‌ ಫೈನಲ್‌ನಲ್ಲಿ ಫ್ರಾನ್ಸ್ ಗೆದ್ದಿದೆ. ಆದರೆ, ಕ್ರೊವೇಷ್ಯಾದ ಆಟ ಜನರ ಮನಗೆದ್ದಿದೆ. ರಾಹುಲ್‌ ಅವರ ಬಗ್ಗೆಯೂ ಇದೇ ರೀತಿ ಮಾತನಾಡಿಕೊಳ್ಳಲಾಗುತ್ತಿದೆ. ಒಬ್ಬ ರಾಜಕಾರಣಿ ಇಂತಹ ವರ್ತನೆ ಮೂಲಕ ನಾಲ್ಕೈದು ಮೆಟ್ಟಿಲು ಮೇಲೇರಲು ಸಾಧ್ಯವಾಗುತ್ತದೆ’ ಎಂದು ಸೇನಾ ವಕ್ತಾರ ಸಂಜಯ ರಾವತ್‌ ಹೇಳಿದ್ದಾರೆ. 

‘ಅಪ್ಪುಗೆ’ ಬಗ್ಗೆ ಮಾತನಾಡಿದ ಅವರು, ಗಮನ ಸೆಳೆಯುವುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಮೋದಿಯವರನ್ನು ತಬ್ಬಿಬ್ಬುಗೊಳಿಸುವುದಕ್ಕಾಗಿಯೇ ರಾಹುಲ್‌ ತಬ್ಬಿಕೊಂಡಿದ್ದರೆ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾವತ್‌ ಅಭಿಪ್ರಾಯಪಟ್ಟಿದ್ದಾರೆ. 
**
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಜತೆ ಸೇರುವುದಿಲ್ಲ. ಬಿಜೆಪಿ ಕೇಳಿಕೊಂಡರೂ ಮೈತ್ರಿಕೂಟದಿಂದ ಟಿಡಿಪಿ ದೂರವೇ ಉಳಿಯಲಿದೆ.
– ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !