ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು  ಪ್ರತಿವರ್ಷ 5 ದಿನ ಕಾಡಿನಲ್ಲಿ ಕಳೆಯುತ್ತಿದ್ದೆ: ನರೇಂದ್ರ ಮೋದಿ

Last Updated 23 ಜನವರಿ 2019, 14:19 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾನು ಐದು ದಿನಗಳ ಕಾಲ ಕಾಡಿನಲ್ಲಿ ಕಳೆಯುತ್ತಿದ್ದೆ.ಅಲ್ಲಿ ಜನರು ಯಾರೂ ಇರುವುದಿಲ್ಲ. ಅಲ್ಲಿರುವುದು ಶುದ್ಧ ನೀರು. ಹಾಗಾಗಿ ಯುವ ಜನರಲ್ಲಿ ನನ್ನ ಮನವಿ ಏನೆಂದರೆ ನಿಮ್ಮ ಬದುಕು ಎಷ್ಟೇ ಬ್ಯುಸಿ ಆಗಿರಲಿ, ಸ್ವಲ್ಪ ಹೊತ್ತು ಬಿಡುವು ಮಾಡಿ. ಸ್ವಯಂ ಮನನ ಮಾಡಿಕೊಳ್ಳಿ.ಅದು ನಿಮ್ಮ ಗ್ರಹಿಕೆಯನ್ನೇ ಬದಲಿಸುತ್ತದೆ.ನಿಮ್ಮನ್ನು ನೀವುಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇದು ಸಹಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜನಪ್ರಿಯ ಫೇಸ್‌ಬುಕ್ ಪುಟ ದಿ ಹ್ಯೂಮನ್ಸ್ ಆಫ್ ಬಾಂಬೆಗೆ ಪ್ರಧಾನಿ ಮೋದಿ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.ಈ ಫೇಸ್‍ಬುಕ್ ಪುಟದಲ್ಲಿ ಮೋದಿಯವರ ಸಂದರ್ಶನಹಲವು ಭಾಗಗಳಾಗಿ ಪ್ರಕಟವಾಗುತ್ತಿದ್ದು, ಮೂರನೇ ಭಾಗದಲ್ಲಿ ಮೋದಿಯವರ ಈ ಕಥೆ ಇದೆ.

ನೀವು ನಿಮ್ಮನ್ನು ಅರಿತುಕೊಳ್ಳುವ ಮೂಲಕ ಜಗತ್ತನ್ನು ಅರಿಯಲು ತೊಡಗುತ್ತೀರಿ.ಇದು ನಿಮ್ಮಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ.ನೀವು ತುಂಬಾ ವಿಶೇಷವಾದವರು ಮತ್ತು ಸ್ಫೂರ್ತಿಗಾಗಿ ನೀವು ಬೇರೆ ಯಾರನ್ನೂ ಅವಲಂಬಿಸುವುದು ಬೇಡ. ಅದು ನಿಮ್ಮಲ್ಲಿಯೇ ಇದೆ ಎಂದಿದ್ದಾರೆ ಮೋದಿ.

ಹಿಂದಿನ ಸಂಚಿಕೆಯಲ್ಲಿ ಮೋದಿ ತಮ್ಮ ಬಾಲ್ಯ ಮತ್ತು ಹದಿಹರೆಯದ ಜೀವನದ ಬಗ್ಗೆ ಹೇಳಿದ್ದರು. 17 ವರ್ಷದವನಿದ್ದಾಗ ನಾನು ಹಿಮಾಲಯಕ್ಕೆ ಹೋಗಿದ್ದೆ. ಅಲ್ಲಿ ಸೂರ್ಯ ಉದಿಸುವುದಕ್ಕಿಂತ ಮೂರು ಗಂಟೆಗೆ ಮುನ್ನವೇ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆ ಎಂದು ಹೇಳಿದ್ದರು.

ಮೋದಿ ಹಿಮಾಲಯಕ್ಕೆ ಹೋಗಿದ್ದು...

17ನೇ ವರ್ಷದಲ್ಲಿ ನನ್ನ ಜೀವನದ ಬಗ್ಗೆ ನನಗೆ ನಿಖರತೆ ಇರಲಿಲ್ಲ. ಏನು ಮಾಡಬೇಕು ಎಂದು ನನಗೆ ಆಗ ತಿಳಿದಿರಲಿಲ್ಲ, ನನಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿರಲಿಲ್ಲ, ಆದರೆ ಏನಾದರೊಂದು ಮಾಡಬೇಕು ಎಂಬ ಛಲವಿತ್ತು, ದೊಡ್ಡವನಾಗುತ್ತಿದ್ದಂತೆ ನನಗೆ ಕುತೂಹಲ ಜಾಸ್ತಿ ಮತ್ತು ಸ್ಪಷ್ಟತೆ ಕಡಿಮೆ ಇತ್ತು, ಸಮವಸ್ತ್ರ ಧರಿಸಿದ ಯೋಧರನ್ನು ಕಂಡಾಗ ದೇಶ ಸೇವೆ ಸಲ್ಲಿಸಲು ಇದೊಂದೇ ಮಾರ್ಗ ಎಂದು ಭಾವಿಸುತ್ತಿದೆ. ಆದರೆ ರೈಲ್ವೆ ನಿಲ್ದಾಣದಲ್ಲಿ ನಾನು ಸಾಧು, ಸಂತರ ಜತೆ ಮಾತನಾಡಿದಾಗ ಜಗತ್ತು ಇಷ್ಟೇ ಅಲ್ಲ ಎಂಬುದು ಗೊತ್ತಾಯಿತು.

''ಏನಾದರೊಂದು ಮಾಡಬೇಕು ಎಂದು ಬಯಸಿದಾಗ ನಾನು ದೇವರ ಮುಂದೆ ಶರಣಾಗಿ 17ನೇ ವರ್ಷದಲ್ಲಿ ಹಿಮಾಲಯಕ್ಕೆ ಹೋದೆ. ನಾನು ಹೊರಡುವಾಗ ಅಮ್ಮ ಸಿಹಿ ತಿನಿಸಿ,ಹಣೆಗೆ ತಿಲಕವಿಟ್ಟು ಬೀಳ್ಕೊಟ್ಟಿದ್ದರು .
ದೇವರು ನನ್ನನ್ನು ಎಲ್ಲಿಗೆ ಕರೆದೊಯ್ಯುಲು ಬಯಸುತ್ತಾರೋ ಅಲ್ಲಿಗೆಲ್ಲಾ ನಾನು ಹೋದೆ. ನನ್ನ ಜೀವನದಲ್ಲಿ ಅನಿಶ್ಚಿತವಾದ ಕಾಲಘಟ್ಟವಾಗಿತ್ತು ಅದು. ಆದರೆ ನನಗೆ ಹಲವಾರು ಉತ್ತರಗಳು ಸಿಕ್ಕಿದವು, ನಾನು ನನ್ನನ್ನು ಅರ್ಥ ಮಾಡಿಕೊಳ್ಳುವುದ್ಕಾಗಿ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆ. ನಾನು ಉದ್ದಗಲಕ್ಕೂ ಪ್ರಯಾಣ ಮಾಡಿದೆ. ರಾಮಕೃಷ್ಣ ಮಿಷನ್‍ನಲ್ಲಿ ಸಮಯ ಕಳೆದೆ. ಸಾದು ಸಂತರನ್ನು ಭೇಟಿ ಮಾಡಿದೆ. ಅವರೊಂದಿಗೆ ಸಮಯ ಕಳೆದು ಹಲವಾರು ವಿಷಯಗಳನ್ನು ಅರಿತೆ. ನನ್ನ ತಲೆ ಮೇಲೆ ಸೂರು ಇರಲಿಲ್ಲ. ನಾನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸುತ್ತಲೇ ಇದ್ದೆ.

ಬ್ರಹ್ಮ ಮುಹೂರ್ತ ಅಂದರೆ ಮುಂಜಾನೆ 3 ಮತ್ತು 3.45ರ ಹೊತ್ತಿಗೆ ಎದ್ದು ಹಿಮಾಲಯ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುತ್ತಿದೆ . ನಡುಗುವ ಚಳಿಯಲ್ಲಿಯೂ ಬೆಚ್ಚನೆಯ ಅನುಭವ ನನಗಾಗುತ್ತಿತ್ತು.ಶಾಂತಿ, ಏಕತೆ ಮತ್ತು ಧ್ಯಾನ ನೀರಿನ ಝರಿಯ ಸದ್ದಿನಿಂದಲೂ ಸಿಗುತ್ತದೆ ಎಂಬುದನ್ನು ನಾನು ಅರಿತೆ, ನನ್ನೊಂದಿಗೆ ಇದ್ದ ಸಾಧುಗಳಿಂದ ಜಗತ್ತಿನ ಲಯವನ್ನು ಅರಿತೆ.

ಅಂದಿನ ಅನುಭವಗಳು ನನಗೆ ಇಂದಿಗೂ ಸಹಾಯ ಮಾಡಿದೆ. ನಮ್ಮ ಚಿಂತನೆ ಮತ್ತು ಪರಿಮಿತಿಗಳಿಂದ ನಮ್ಮನ್ನು ನಾವೇ ಕಟ್ಟಿಹಾಕಲ್ಪಟ್ಟಿದ್ದೇವೆ ಎಂಬುದನ್ನು ಅರಿತೆ. ನೀವು ಶರಣಾಗತಿ ಪಡೆದು ಈ ವೈಶಾಲ್ಯದ ಮುಂದೆ ನಿಂತರೆ ನೀವು ಬೃಹತ್ ಜಗತ್ತಿನ ಚಿಕ್ಕದೊಂದು ಭಾಗವೆಂಬುದು ನಿಮಗೆ ತಿಳಿಯುತ್ತದೆ, ಇದು ನಿಮ್ಮ ಅರಿವಿಗೆ ಬಂದರೆ ನಿಮ್ಮಲ್ಲಿರುವ ಅಹಂ ಕರಗಿ ಹೊಸತೊಂದು ಜೀವನ ಆರಂಭವಾಗುತ್ತದೆ.
ಎರಡು ವರ್ಷಗಳ ನಂತರ ನಾನು ನಿಖರತೆಯೊಂದಿಗೆ ಮನೆಗೆ ಮರಳಿದೆ. ಆ ಶಕ್ತಿ ನನ್ನನ್ನು ಮುನ್ನಡೆಸಿತು''

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT