ಬುಧವಾರ, ಸೆಪ್ಟೆಂಬರ್ 18, 2019
21 °C

ಭೂಗಳ್ಳರ ಜೈಲಿಗಟ್ಟಲು ಅಧಿಕಾರ ಕೊಡಿ: ನರೇಂದ್ರ ಮೋದಿ

Published:
Updated:

ಫತೇಹಾಬಾದ್‌: ಹರಿಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷವು ಭ್ರಷ್ಟಾಚಾರದ ಫಸಲು ತೆಗೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ರೈತರ ಜಮೀನನ್ನು ಕಾಂಗ್ರೆಸ್‌ ಮುಖಂಡರು ಲೂಟಿ ಮಾಡಿದ್ದಾರೆ ಎಂದು ಅವರು ಹೇಳಿದರು. ಭೂ ಹಗರಣಗಳಲ್ಲಿ ಹೆಸರು ಕೇಳಿ ಬಂದಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅಥವಾ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಹೆಸರನ್ನು ಮೋದಿ ಉಲ್ಲೇಖಿಸಲಿಲ್ಲ. 

‘ಹರಿಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲ ರೈತರ ಜಮೀನನ್ನು ಬಿಡಿಗಾಸಿಗೆ ಖರೀದಿಸಿದ ಆಟ ನಿಮಗೆಲ್ಲಾ ಗೊತ್ತಿದೆ. ಆದರೆ, ರೈತರ ಜಮೀನು ಲೂಟಿ ಮಾಡಿದವರನ್ನು ಈ ಚೌಕೀದಾರ ನಿಮ್ಮ ಆಶೀರ್ವಾದದಿಂದಾಗಿ ನ್ಯಾಯಾಲಯಕ್ಕೆ ಎಳೆದಿದ್ದಾನೆ’ ಎಂದು ಮೋದಿ ಅವರು ಹರಿಯಾಣದಲ್ಲಿನ ಈ ಲೋಕಸಭಾ ಚುನಾವಣೆಯ ಮೊದಲ ಪ್ರಚಾರ ರ‍್ಯಾಲಿಯಲ್ಲಿ ಹೇಳಿದ್ದಾರೆ. 

ಈಗ ಅವರೆಲ್ಲರೂ ಜಾಮೀನಿಗಾಗಿ ಓಡಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ಕಚೇರಿಗೆ ಎಡತಾಕುತ್ತಿದ್ದಾರೆ. ಅವರು ದೊರೆಗಳು, ಅವರನ್ನು ಮುಟ್ಟುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ಈಗ ಅವರಿಗೆ ಬಿಸಿ ಮುಟ್ಟಿದೆ. ನಾನು ಅವರನ್ನು ಜೈಲಿನ ಬಾಗಿಲವರೆಗೆ ಒಯ್ದಿದ್ದೇನೆ. ಮುಂದಿನ ಐದು ವರ್ಷಗಳೊಳಗೆ ಅವರನ್ನು ಸೆರೆಮನೆಗೆ ತಳ್ಳುವುದಕ್ಕಾಗಿ ಮತ್ತೆ ನಿಮ್ಮ ಆಶೀರ್ವಾದ ಬೇಕು ಎಂದು ಮೋದಿ ಹೇಳಿದರು. 

ವೈಯಕ್ತಿಕ ಕಿರುಕುಳ: ವಾದ್ರಾ

ದೇಶವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಮೋದಿ ಅವರು ತಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ರಾಬರ್ಟ್‌ ವಾದ್ರಾ ಹೇಳಿದ್ದಾರೆ. 

ಹರಿಯಾಣದಲ್ಲಿ ಮೋದಿ ಅವರು ತಮ್ಮ ಮೇಲೆ ಪರೋಕ್ಷವಾಗಿ ಮಾಡಿದ ಆರೋಪಗಳಿಗೆ ವಾದ್ರಾ ಅವರು ಟ್ವಿಟರ್‌ ಮತ್ತು ಫೇಸ್‌ಬುಕ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.  ಮೋದಿ ನೇತೃತ್ವದ ಸರ್ಕಾರವು ತಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಹೇಳುವ ಮೂಲಕ ನ್ಯಾಯಾಂಗಕ್ಕೆ ಅವರು ಅವಮಾನ ಮಾಡಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ. 

***

ನಾನು ಅವರನ್ನು ಜೈಲಿನ ಬಾಗಿಲವರೆಗೆ ಒಯ್ದಿದ್ದೇನೆ. ಮುಂದಿನ ಐದು ವರ್ಷಗಳೊಳಗೆ ಅವರನ್ನು ಸೆರೆಮನೆಗೆ ತಳ್ಳುವುದಕ್ಕಾಗಿ ಮತ್ತೆ ನಿಮ್ಮ ಆಶೀರ್ವಾದ ಬೇಕು

-ನರೇಂದ್ರ ಮೋದಿ, ಪ್ರಧಾನಿ 

ನಿಮ್ಮ ರ್‍ಯಾಲಿಯಲ್ಲಿ ನನ್ನ ಹೆಸರು ಮತ್ತೆ ಪ್ರಸ್ತಾಪವಾಗಿದ್ದು ಆಘಾತ ತಂದಿದೆ. ಹಲವು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಎಲ್ಲವನ್ನೂ ಬಿಟ್ಟು ನನ್ನ ವಿರುದ್ಧ ಮಾತನಾಡುತ್ತಿದ್ದೀರಿ

-ರಾಬರ್ಟ್‌ ವಾದ್ರಾ, ಸೋನಿಯಾ ಗಾಂಧಿ ಅವರ ಅಳಿಯ

Post Comments (+)