ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ಪ್ರೀತಿ, ಅಪ್ಪುಗೆ: ಮೋದಿಗೆ ರಾಹುಲ್‌ ತಿರುಗೇಟು

ರಾಜೀವ್‌ ಗಾಂಧಿಗೆ ಪ್ರಧಾನಿ ಮೋದಿ ಟೀಕೆ
Last Updated 5 ಮೇ 2019, 20:17 IST
ಅಕ್ಷರ ಗಾತ್ರ

ಲಖನೌ: ‘ಕರ್ಮ ಕಾಯುತ್ತಲಿದೆ... ನನ್ನ ಕಡೆಯಿಂದ ನಿಮಗೆ ಪ್ರೀತಿ ಹಾಗೂ ಅಪ್ಪುಗೆ...’ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜೀವ್‌ ಗಾಂಧಿ ಅವರನ್ನು ಕುರಿತು ಮಾಡಿರುವ ಟೀಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ಹೀಗೆ ಪ್ರತ್ಯುತ್ತರ ನೀಡಿದ್ದಾರೆ.

‘ಮೋದಿಜಿ, ಯುದ್ಧ ಮುಗಿದಿದೆ. ಕರ್ಮ ಕಾಯುತ್ತಲಿದೆ. ನಿಮ್ಮೊಳಗೆ ನಿಮ್ಮ ಬಗ್ಗೆಯೇ ಇರುವ ನಂಬಿಕೆಯನ್ನು ನನ್ನ ತಂದೆಯ ಮೇಲೆ ಹೇರುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲಾಗದು. ನನ್ನ ಕಡೆಯಿಂದ ನಿಮಗೆ ಪ್ರೀತಿ ಹಾಗೂ ಅಪ್ಪುಗೆ’ ಎಂದು ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿಯೊಂದರಲ್ಲಿ ರಾಹುಲ್‌ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನೂ ತೀವ್ರವಾಗಿ ಟೀಕಿಸಿದ್ದರು. ಇದನ್ನು ಕಾಂಗ್ರೆಸ್‌ ನಾಯಕರಷ್ಟೇ ಅಲ್ಲ ಇತರ ರಾಜಕೀಯ ಪಕ್ಷಗಳವರೂ ಟೀಕಿಸಿದ್ದಾರೆ. ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದ್ದು, ಮೋದಿಯವರ ಈ ಹೇಳಿಕೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೋದಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಹುತಾತ್ಮ ಯೋಧರ ಹೆಸರಿನಲ್ಲಿ ಮತ ಯಾಚಿಸುವ ಮೂಲಕ ಅವರನ್ನು ಅವಮಾನಿಸಿದ ಮೋದಿ, ನಿನ್ನೆ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು (ರಾಜೀವ್ ಗಾಂಧಿ) ಅವಮಾನಿಸಿದ್ದಾರೆ. ಮೋದಿ ಹೇಳಿಕೆಗೆ ಅಮೇಠಿಯ ಜನರೇ ಉತ್ತರ ನೀಡುತ್ತಾರೆ’ ಎಂದಿದ್ದಾರೆ.

‘ರಾಜೀವ್‌ ಅವರು ಅಮೇಠಿಯ ಜನರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಅವರ ಬಗ್ಗೆ ಮೋದಿ ಆಡಿರುವ ಮಾತನ್ನು ಜನರು ಖಂಡಿತವಾಗಿಯೂ ಇಷ್ಟಪಡುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದಾರೆ.

ಮೋದಿ ಹೇಳಿದ್ದೇನು?

ರಫೇಲ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿರುವ ರಾಹುಲ್‌ ಗಾಂಧಿಯನ್ನು ಟೀಕಿಸುವ ಸಂದರ್ಭದಲ್ಲಿ ಮೋದಿ, ‘ಕಾಂಗ್ರೆಸ್‌ ನಾಯಕರೆಲ್ಲರೂ ನಿಮ್ಮ ತಂದೆಯನ್ನು (ರಾಜೀವ್‌ ಗಾಂಧಿ) ‘ಮಿಸ್ಟರ್‌ ಕ್ಲೀನ್‌’ ಎಂದು ಹೊಗಳುತ್ತಿದ್ದರು. ಆದರೆ ಅವರು ಸಾಯುವ ವೇಳೆಗೆ ‘ಭ್ರಷ್ಟಾಚಾರಿ ನಂ–1’ ಎನಿಸಿಕೊಂಡರು’ ಎಂದಿದ್ದರು. ಆ ಮೂಲಕ ಬೊಫೋರ್ಸ್‌ ಹಗರಣದೊಂದಿಗೆ ರಾಜೀವ್‌ ಅವರ ಹೆಸರು ತಳಕು ಹಾಕಿಕೊಂಡಿದ್ದನ್ನು ಪರೋಕ್ಷವಾಗಿ ಮೋದಿ ಉಲ್ಲೇಖಿಸಿದ್ದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಮೇಠಿಯ ರ‍್ಯಾಲಿಯೊಂದರಲ್ಲಿ ರಾಜೀವ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ‘ರಾಜೀವ್‌ ಒಬ್ಬ ಸೊಕ್ಕಿನ ಮನುಷ್ಯರಾಗಿದ್ದರು. ಅವರು ಆಂಧ್ರದ ಅಂದಿನ ಮುಖ್ಯಮಂತ್ರಿ ಟಿ. ಅಂಜಯ್ಯ ಅವರನ್ನು ವಿಮಾನ ನಿಲ್ದಾಣದಲ್ಲೇ ಅವಮಾನಿಸಿದ್ದರು’
ಎಂದು ಟೀಕಿಸಿದ್ದರು.

*ರಾಜೀವ್‌ ಕುರಿತಾಗಿ ಮೋದಿ ನೀಡಿರುವ ಹೇಳಿಕೆಯು ಅವರಲ್ಲಿ ಮೂಡಿರುವ ಸೋಲಿನ ಭಯ ಹಾಗೂ ಹತಾಶೆಯ ಪ್ರತೀಕವಾಗಿದೆ

– ಪಿ. ಚಿದಂಬರಂ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT