ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶಾಂತಿಯುತ ಶೇ 75.78 ಮತದಾನ

ಮಾಗಡಿಯಲ್ಲಿ ಗರಿಷ್ಠ, ಕನಕಪುರದಲ್ಲಿ ಕನಿಷ್ಠ ಮತದಾನ ಪ್ರಮಾಣ ದಾಖಲು
Last Updated 9 ಜೂನ್ 2018, 8:55 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯು ಶುಕ್ರವಾರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಒಟ್ಟಾರೆ ಶೇ 75.78 ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 6772 ಪುರುಷ ಪದವೀಧರರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 5182 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಅಂತೆಯೇ 3494 ಮಹಿಳಾ ಮತದಾರರು ಇದ್ದು, ಅವರಲ್ಲಿ 2599 ಮಂದಿ ಮತಗಟ್ಟೆಗೆ ಬಂದಿದ್ದರು. 3 ಇತರೆ ಮತದಾರರ ಪೈಕಿ ಒಬ್ಬರು ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದರು.

ಮಾಗಡಿ ತಾಲ್ಲೂಕಿನ ಮೊದಲ ಮತಗಟ್ಟೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರಮಾಣದ ಮತದಾನ ನಡೆದಿದೆ. ಅಂತೆಯೇ ಕನಕಪುರ ತಾಲ್ಲೂಕು ಕಚೇರಿಯ ಕೊಠಡಿ ಸಂಖ್ಯೆ ಮೂರರಲ್ಲಿನ ಮತಗಟ್ಟೆಯಲ್ಲಿ ಕನಿಷ್ಠ ಪ್ರಮಾಣದ ಮತದಾನವು ನಡೆದಿದೆ.

ಪ್ರತಿ ತಾಲ್ಲೂಕು ಕೇಂದ್ರದಲ್ಲಿ ತಲಾ ಮೂರರಂತೆ ಜಿಲ್ಲೆಯಲ್ಲಿ ಒಟ್ಟು 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಾಗಡಿ ತಾಲ್ಲೂಕು ಕಚೇರಿಯಲ್ಲಿ ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು. ರಾಮನಗರ ತಾಲ್ಲೂಕಿನ ಮತದಾರರಿಗಾಗಿ ಇಲ್ಲಿನ ಮಿನಿವಿಧಾನ ಸೌಧದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಚನ್ನಪಟ್ಟಣ ತಾಲ್ಲೂಕಿನ ಮತದಾರರಿಗಾಗಿ ಚನ್ನಪಟ್ಟಣ ತಾಲ್ಲೂಕು ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಕನಕಪುರ ತಾಲ್ಲೂಕಿನ ಮತದಾರರಿಗೆ ಕನಕಪುರ ತಾಲ್ಲೂಕು ಕಚೇರಿಯ ಮೂರು ಕೊಠಡಿಗಳಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿತ್ತು.

ರಾಮನಗರದಲ್ಲಿ ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆಯು ಆರಂಭಗೊಂಡಿದ್ದು, ಮಂದಗತಿಯಲ್ಲಿಯೇ ಮತದಾನ ನಡೆಯಿತು. ಆದರೆ 9 ಗಂಟೆ ನಂತರದಲ್ಲಿ ಮತದಾನ ಚುರುಕುಗೊಂಡಿತು. 10 ಗಂಟೆಯ ನಂತರ ಪದವೀಧರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬಹುಪಾಲು ಮಂದಿ ಚುನಾವಣಾ ಆಯೋಗದಿಂದ ನೀಡಿರುವ ಮತದಾನ ಚೀಟಿ ಇಲ್ಲವೇ ಆಧಾರ್ ಕಾರ್ಡ್‌ ತೋರಿಸಿ ಮತ ಚಲಾಯಿಸಿದರು. ಮತದಾನ ನಡೆಯುವ ಸ್ಥಳದಲ್ಲಿ ಹಲವು ಹಳೆಯ ಸ್ನೇಹಿತರ ಸಮಾಗಮವಾಯಿತು. ಈ ಚುನಾವಣೆಯ ಮೂಲಕವಾದರೂ ನಮ್ಮ ಭೇಟಿ ಸಾಧ್ಯವಾಯಿತಲ್ಲ ಎಂದು ಹಲವರು ತಮ್ಮ ಮೊಬೈಲ್ ನಂಬರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಜತೆಗೆ ಕೆಲವರು ಸ್ನೇಹಿತರೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೊದಲ ಬಾರಿ ಮತದಾನ : ‘ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇನೆ ಎಂಬ ನಂಬಿಕೆ ಇದೆ. ಆಯ್ಕೆಯಾದ ಅಭ್ಯರ್ಥಿಗಳು ಪದವೀಧರರ ಸಮಸ್ಯೆಗೆ ಸ್ಪಂದಿಸಬೇಕು. ಪದವೀಧರ ಕ್ಷೇತ್ರದಲ್ಲಿ ಅನೇಕ ಕೆಲಸ ಗಳು ಆಗಬೇಕಿದೆ’ ಎಂದು ಮೊದಲ ಮತದಾನ ಮಾಡಿದ ಸರಿತಾ ತಿಳಿಸಿದರು.

ಗೊಂದಲಕ್ಕೀಡಾದರು: ಮಿನಿ ವಿಧಾನ ಸೌಧದ ಆವರಣದಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಸೂಚನೆಗಳ ಪಟ್ಟಿಯನ್ನು ಅಳವಡಿಸಲಾಗಿತ್ತು. ಆದರೂ ಹಲವು ಪದವೀಧರರು ತಾವು ಮತ ಚಲಾಯಿಸುವ ಮತಗಟ್ಟೆಗಳನ್ನು ತಿಳಿದುಕೊಳ್ಳುವಲ್ಲಿ ಗೊಂದಲಕ್ಕೀಡಾದರು.

ಸ್ಥಳದಲ್ಲಿದ್ದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತದಾರರಿಗೆ ಅವರ ಕ್ರಮಸಂಖ್ಯೆಗೆ ಅನುಗುಣವಾಗಿ ಇರುವ ಮತಗಟ್ಟೆಗಳನ್ನು ತೋರಿಸುವ ಮೂಲಕ ನೆರವಾದರು.

ಮಿನಿ ವಿಧಾನ ಸೌಧದ ಸಮೀಪ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರವಾಗಿ ಪೆಂಡಾಲ್‌ ಹಾಕಿಕೊಂಡು ಪ್ರಚಾರ ನಡೆಸುವ ಜತೆಗೆ, ಮತದಾರರಿಗೆ ಮತಗಟ್ಟೆ ಸಂಖ್ಯೆ, ಮತದಾರರ ಪಟ್ಟಿಯಲ್ಲಿರುವ ಕ್ರಮಸಂಖ್ಯೆಯನ್ನು ಬರೆದು ಕೊಡು
ತ್ತಿದ್ದರು. ಇದರಿಂದ ಪದವೀಧರರ ಮತದಾರರಿಗೆ ಅನುಕೂಲವಾಯಿತು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸಿಪಿಐ(ಎಂ) ಪಕ್ಷದ ಮುಖಂಡರು, ಇವರ ಜತೆಗೆ ಪದವೀಧರರು, ಶಿಕ್ಷಕರು, ಸರ್ಕಾರಿ ನೌಕರರು ಸೇರಿದಂತೆ ಹಲವರು ಮಿನಿ ವಿಧಾನ ಸೌಧದ ಸಮೀಪ ತಂಡೋಪ ತಂಡವಾಗಿ ಜಮಾಯಿಸಿದ್ದರು.

ಶಾಂತಿಯುತ ಚುನಾವಣೆ: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯನ್ನು ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಇದರಿಂದ ಚುನಾವಣೆಯು ಸುಗಮ ಹಾಗೂ ಪಾರದರ್ಶಕತೆಯಿಂದ ನಡೆಯಿತು ಎಂದು ತಹಶೀಲ್ದಾರ್ ಬಿ.ವಿ. ಮಾರುತಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ ಮಸ್ಟರಿಂಗ್‌ ಪ್ರಕ್ರಿಯೆ
ಸಂಜೆ 6ರ ಬಳಿಕ ತಾಲ್ಲೂಕುಗಳ ವಿವಿಧ ಮತಗಟ್ಟೆಗಳಿಂದ ಬ್ಯಾಲೆಟ್ ಪತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ಹೊತ್ತು ಚುನಾವಣಾ ಸಿಬ್ಬಂದಿಯು ಜಿಲ್ಲಾಧಿಕಾರಿ ಕಚೇರಿಯತ್ತ ಹೆಜ್ಜೆ ಹಾಕಿದರು. ರಾತ್ರಿವರೆಗೂ ಡಿ ಮಸ್ಟರಿಂಗ್‌ ಪ್ರಕ್ರಿಯೆಯು ನಡೆದಿತ್ತು. ಬೆಂಗಳೂರಿನಲ್ಲಿ ಇದೇ 12ರಂದು ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT