ಚುನಾವಣಾ ಸುಧಾರಣೆ| ‘ಏಕಕಾಲಕ್ಕೆ ಚುನಾವಣೆ’, 19ರಂದು ವಿಶೇಷ ಸಭೆ

ಬುಧವಾರ, ಜೂಲೈ 17, 2019
29 °C

ಚುನಾವಣಾ ಸುಧಾರಣೆ| ‘ಏಕಕಾಲಕ್ಕೆ ಚುನಾವಣೆ’, 19ರಂದು ವಿಶೇಷ ಸಭೆ

Published:
Updated:

ನವದೆಹಲಿ: ಚುನಾವಣಾ ಸುಧಾರಣೆ ಮತ್ತು ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ‘ಒನ್‌ ನೇಷನ್‌, ಒನ್‌ ಪೋಲ್‌’ ವಿಷಯ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಈ ವಿಷಯಗಳ ಕುರಿತು ಚರ್ಚಿಸಲು ಮೋದಿ ಅವರು ಜೂನ್‌ 19ರಂದು ವಿವಿಧ ಪಕ್ಷಗಳ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ.

ಸಭೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ‘ಜೂನ್‌ 19ರಂದು ನಡೆಯಲಿರುವ ಸಭೆಯಲ್ಲಿ ಚುನಾವಣಾ ಸುಧಾರಣೆ ಹಾಗೂ ಒನ್‌ ನೇಷನ್‌, ಒನ್‌ ಪೋಲ್‌ ವಿಷಯ ಪ್ರಮುಖವಾಗಿ ಚರ್ಚೆಯಾಗಲಿದೆ’ ಎಂದು ಹೇಳಿದ್ದಾರೆ.

ಇದಲ್ಲದೆ, ‘2022ರಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವುದು ಮತ್ತು ಪ್ರಸಕ್ತ ಸಾಲಿನಲ್ಲಿ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವ ಆಚರಣೆ ವಿಚಾರಗಳನ್ನು ಚರ್ಚಿಸಲು ಜೂನ್‌ 20ರಂದು ಪ್ರಧಾನಿ ಸಂಸದರ ಜೊತೆ ಸಭೆ ನಡೆಸುವರು’ ಎಂದು ಜೋಶಿ ತಿಳಿಸಿದ್ದಾರೆ.

ಗೊಂದಲದಲ್ಲಿ ಕಾಂಗ್ರೆಸ್‌: ಮೋದಿ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ನಿರ್ಧಾರ ತಳೆಯುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲದಲ್ಲಿದ್ದಂತೆ ಕಾಣುತ್ತಿದೆ.

ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಲು ಮೋದಿ ಅವರು ಬುಧವಾರ ಕರೆದಿರುವ ರಾಜಕೀಯ ಪಕ್ಷಗಳ ಮುಖ್ಯಸ್ಥರ ಸಭೆಯಲ್ಲಿ ಕಾಂಗ್ರೆಸ್ ಭಾಗಿಯಾಗುವುದೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂನಬಿ ಆಜಾದ್ ಅವರು ಸ್ಪಷ್ಟವಾಗಿ ಉತ್ತರಿಸಲಿಲ್ಲ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿದ್ದು, ಸೋಮವಾರದಿಂದ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳುವರೇ, ಮೋದಿ ಅವರು ಕರೆದಿರುವ ಸಭೆಗೆ ಬರುವರೇ ಎಂಬುದು ಸಹ ಸ್ಪಷ್ಟಗೊಂಡಿಲ್ಲ. 

ಮೋದಿ ನೇತೃತ್ವದ ಸಭೆಗೆ ಕಾಂಗ್ರೆಸ್ ಭಾಗವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು, ‘ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು. 

ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ವಿರೋಧಿಸಿದ್ದ ಕಾಂಗ್ರೆಸ್‌, ಇದರಿಂದ ಒಕ್ಕೂಟ ವ್ಯವಸ್ಥೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಲಿದೆ ಎಂದು ವಾದಿಸಿತ್ತು. ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಟಿಡಿಪಿ, ಎಐಎಂಐಎಂ ಹಾಗೂ ಆಮ್ ಆದ್ಮಿ ಪಕ್ಷಗಳೂ ಈ ಪ್ರಸ್ತಾವವನ್ನು ವಿರೋಧಿಸಿದ್ದವು.

ಬರ, ನಿರುದ್ಯೋಗ ಚರ್ಚೆಗೆ ಒತ್ತಾಯ
ಸೋಮವಾರದಿಂದ ಆರಂಭವಾಗಲಿರುವ ಲೋಕಸಭೆಯ ಅಧಿವೇಶನದಲ್ಲಿ ‘ಕೃಷಿ ಕ್ಷೇತ್ರದ ಸಮಸ್ಯೆಗಳು, ನಿರುದ್ಯೋಗ ಹಾಗೂ ಬರ ಪರಿಸ್ಥಿತಿಯ ಬಗ್ಗೆ ವಿಸ್ತಾರವಾಗಿ ಚರ್ಚೆಯಾಗಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಭಾನುವಾರ ನಡೆದ ಸರ್ವಪಕ್ಷ ಪ್ರತಿನಿಧಿಗಳ ಸಭೆಯಲ್ಲಿ ಪಕ್ಷ ಈ ಒತ್ತಾಯ ಮಾಡಿದೆ.

‘ಜನಪರವಾದ ಯಾವ ಮಸೂದೆಯನ್ನೂ ನಾವು ವಿರೋಧಿಸುವುದಿಲ್ಲ. ಆದರೆ ಕೃಷಿ ಕ್ಷೇತ್ರದ ಸಮಸ್ಯೆಗಳು, ನಿರುದ್ಯೋಗ ಹಾಗೂ ಬರ ಪರಿಸ್ಥಿತಿಯ ಬಗ್ಗೆಯೂ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಗುಲಾಂನಬಿ ಆಜಾದ್‌ ಹೇಳಿದರು.

‘ಜಮ್ಮು ಕಾಶ್ಮೀರದಲ್ಲಿ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಸಬೇಕು. ಅಲ್ಲಿ ಲೋಕಸಭಾ ಚುನಾವಣೆ ನಡೆಸಲು ಸಾಧ್ಯವಾಗುವುದಾದರೆ ವಿಧಾನಸಭಾ ಚುನಾವಣೆ ಯಾಕೆ ಸಾಧ್ಯವಿಲ್ಲ? ರಾಜ್ಯಪಾಲರ ಮೂಲಕವೇ ಆಡಳಿತ ನಡೆಸಲು ಕೇಂದ್ರ ಸರ್ಕಾರ ಇಚ್ಛಿಸಿದಂತೆ ಕಾಣಿಸುತ್ತಿದೆ’ ಎಂದು ಆಜಾದ್‌ ಟೀಕಿಸಿದರು.

ಟಿಎಂಸಿ ನಾಯಕ ಡರೆಕ್‌ ಒ’ಬ್ರಯಾನ್‌ ಅವರು, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ‘ಮಹಿಳಾ ಮೀಸಲಾತಿ ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು. ಬಜೆಟ್‌ ಅಧಿವೇಶನವು ಜೂನ್‌ 17 ರಿಂದ ಜುಲೈ 26ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !