ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಮೆಣಸಿನಕಾಯಿ ದರ ಕುಸಿತ: ಹತಾಶರಾದ ರೈತರು

ಹಸಿರು ಮೆಣಸಿನಕಾಯಿ ದರ ಕುಸಿತ
Last Updated 19 ಮೇ 2018, 12:12 IST
ಅಕ್ಷರ ಗಾತ್ರ

ಶನಿವಾರಸಂತೆ: ಪಟ್ಟಣದ ಸಂತೆಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಹಸಿರುಮೆಣಸಿನಕಾಯಿ ಸಂತೆಗೆ 7 ಲೋಡ್ ಮೆಣಸಿನಕಾಯಿ ಮಾರಾಟಕ್ಕೆ ಬಂದಿತ್ತು.1 ಕೆ.ಜಿ.ಗೆ ₹10–11ಹಾಗೂ 25 ಕೆ.ಜಿ.ಮೆಣಸಿನಕಾಯಿ ತುಂಬಿದ ಚೀಲಕ್ಕೆ ₹ 250–275 ದರ ದೊರೆತು ರೈತರು ತೀರಾ ಹತಾಶೆ ವ್ಯಕ್ತಪಡಿಸಿದರು.

ಮುಂಜಾನೆಯಿಂದಲೇ ಆರಂಭವಾದ ವ್ಯಾಪಾರ ಬೆಳಿಗ್ಗೆ 9–10 ಗಂಟೆಗೆಲ್ಲ ಮುಗಿದು ವ್ಯಾಪಾರಿಗಳು ಖರೀದಿಸಿದ ಹಸಿರುಮೆಣಸಿನಕಾಯಿಯನ್ನು ಲಾರಿಗಳಲ್ಲಿ ತುಂಬಿಸಿ ಬೆಂಗಳೂರು, ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಹೊರ ರಾಜ್ಯಗಳಿಗೆ ಸಾಗಿಸಿದರು.

‘ಆಗಾಗ್ಗೆ ಬಿದ್ದ ಉತ್ತಮ ಮಳೆಯಿಂದ ಇಳುವರಿ ಚೆನ್ನಾಗಿ ಬಂದಿದೆ. ಹಸಿರುಮೆಣಸಿನಕಾಯಿ ಕೊಯ್ದು 2–3 ದಿನ ಮಾತ್ರ ಇಟ್ಟುಕೊಳ್ಳಬಹುದೇ ವಿನಃ ವಾರಗಟ್ಟಲೆ ಸಂಗ್ರಹಿಸಿಡುವಂತಿಲ್ಲ. ಕೊಳೆಯುವ ಸಾಧ್ಯತೆ ಇರುವುದರಿಂದ ಸಿಕ್ಕಷ್ಟು ರೇಟಿಗೆ ಮಾರದೇ ವಿಧಿಯಿಲ್ಲ. ಸಿಗುವ ಹಣವು ಕೊಡುವ ಕೂಲಿಗೆ, ಸಾಗಾಟ ವೆಚ್ಚಕ್ಕೆ ಸರಿಯಾಗುತ್ತದೆ.ಲಾಭವಿರಲಿ ಅಸಲಿನ ಮಾತೇ ಇಲ್ಲ’ ಎಂದು ರೈತರಾದ ಕಾಜೂರು ಗ್ರಾಮದ ಕೆ.ಎಂ.ಚಂದ್ರಶೇಖರ್, ಬಿಳಾಹ ಗ್ರಾಮದ ಬಿ.ಎಂ.ಪ್ರಕಾಶ್ ಅಳಲು ತೋಡಿಕೊಂಡರು.

ಕಳೆದೆರೆಡು ವರ್ಷಗಳಲ್ಲಿ ಉತ್ತಮ ದರ ದೊರೆತ ಪರಿಣಾಮ ಈ ವರ್ಷ ಎಲ್ಲೆಡೆ ರೈತರು ಹಸಿರುಮೆಣಸಿನಕಾಯಿ ಬೆಳೆದರು.ಇಳುವರಿ ಚೆನ್ನಾಗಿ ಬಂದಿತು. ಆಗಾಗ್ಗೆ ಸುರಿದ ಮಳೆಯಿಂದ ಹೊಳೆಗಳಲ್ಲಿ ನೀರಾಗಿ ಗಿಡಗಳಿಗೆ ನೀರಿಗೂ ತೊಂದರೆಯಾಗಲಿಲ್ಲ. ವರ್ಷದ ಆರಂಭದಿಂದ 5 ಇಂಚು ಮಳೆಯಾಗಿದೆ. ಗೊಬ್ಬರ ಹಾಕಿ ಗಿಡಗಳಲ್ಲಿ ಕಾಯಿ ಸೊಂಪಾಗಿ ಬೆಳೆಯಿತು. ಆದರೆ ಅಧಿಕ ಇಳುವರಿ ದರ ಕುಸಿತಕ್ಕೆ ಕಾರಣವಾಯಿತು.

ಹಸಿರುಮೆಣಸಿನಕಾಯಿ ಕೊಯ್ಯಲು ಬರುವ ಗಂಡಾಳಿಗೆ ದಿನಕ್ಕೆ ₹ 430, ಹೆಣ್ಣಾಳಿಗೆ ₹ 280 ಕೂಲಿ ಕೊಡಬೇಕು. ಜತೆಗೆ ಗೊಬ್ಬರದ ರೇಟು ಜಾಸ್ತಿ. ಹಾಗಾಗಿ, ಕೆಲ ರೈತರು ತಾವೇ ಮನೆಮಂದಿಯೆಲ್ಲ ದುಡಿಯುತ್ತಾರೆ. ದಿನವಿಡೀ ದುಡಿದರೂ ಶ್ರಮಕ್ಕೆ ಬೆಲೆಯಿಲ್ಲ ಎಂಬ ನಿರಾಶೆ ವ್ಯಕ್ತಪಡಿಸಿದರೂ ಪ್ರತಿ ವರ್ಷ ಮಾಡುವ ಬೇಸಾಯ ಮಾಡಲೇಬೇಕಲ್ಲ. ಸುಮ್ಮನೇ ಕೂರುವ ಜಾಯಮಾನ ತಮ್ಮದಲ್ಲ ಎನ್ನುತ್ತಾರೆ.

‘ಹಸಿರುಮೆಣಸಿಕಾಯಿ ಬೆಳೆಗೆ ವಾರಕ್ಕೊಮ್ಮೆ ಹದವಾಗಿ ಮಳೆಯಾದರೆ ಒಳ್ಳೆಯದೇ. ಜೂನ್ ಕೊನೆಯವರೆಗೆ ಮಾತ್ರ ಈ ಬೇಸಾಯ. ಈಗ ಮಧ್ಯಂತರ ಅವಧಿಯಲ್ಲಿ ಒಳ್ಳೆಯ ರೇಟು ಸಿಕ್ಕಿದ್ದರೆ ರೈತ ಬದುಕಿಕೊಳ್ಳುತ್ತಿದ್ದ’
– ಚಂದ್ರಣ್ಣ, ರೈತ, ಕಾಜೂರು ಗ್ರಾಮ

-ಶ.ಗ.ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT