ಅಕ್ರಮ ಹಣ ವರ್ಗಾವಣೆ: ಪ್ರಿಯಾಂಕಾ ಜತೆ ಬಂದ ವಾದ್ರಾ

7

ಅಕ್ರಮ ಹಣ ವರ್ಗಾವಣೆ: ಪ್ರಿಯಾಂಕಾ ಜತೆ ಬಂದ ವಾದ್ರಾ

Published:
Updated:
Prajavani

ನವದೆಹಲಿ : ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಉದ್ಯಮಿ ರಾಬರ್ಟ್‌ ವಾದ್ರಾ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಬುಧವಾರ ವಿಚಾರಣೆಗಾಗಿ ಹಾಜರಾದರು.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಕವಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಿಚಾರಣೆಗೆ ಹಾಜರಾಗಬೇಕಿದ್ದ ಪತಿ ವಾದ್ರಾ ಅವರನ್ನು ಬುಧವಾರ ಮಧ್ಯಾಹ್ನ 3.47ಕ್ಕೆ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆತಂದು ಬಿಟ್ಟರು. ನಾಲ್ಕು ತಾಸಿಗೂ ಹೆಚ್ಚು ಕಾಲ ಇ.ಡಿ ಅಧಿಕಾರಿಗಳು ವಾದ್ರಾ ಅವರ ವಿಚಾರಣೆ ನಡೆಸಿದರು.

ಲಂಡನ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮತ್ತು ಹಣ ಪಾವತಿಗೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.

ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ ವಾದ್ರಾ, ಅವೆಲ್ಲವೂ ರಾಜಕೀಯ ಪ್ರೇರಿತ ಎಂದು ಸಮಜಾಯಿಷಿ ನೀಡಿದರು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಿಯಾಂಕಾ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಚೇರಿ ಪಕ್ಕದಲ್ಲಿಯೇ ಕಚೇರಿ ನೀಡಲಾಗಿದೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ‘ನಾನು ನನ್ನ ಕುಟುಂಬದ ಬೆಂಬಲಕ್ಕೆ ಇರುತ್ತೇನೆ’ ಎಂದು ಹೇಳಿದರು.

ಮೊದಲ ಬಾರಿಗೆ ವಿಚಾರಣೆ ಹಾಜರು: ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ರಾಬರ್ಟ್‌ ವಾದ್ರಾ ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆಯ ವಿಚಾರಣೆಗೆ ಹಾಜರಾದರು. 

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ವಾದ್ರಾ ಅವರನ್ನು ಫೆ.16ವರೆಗೆ ಬಂಧಿಸದಂತೆ ಸೂಚಿಸಿದ್ದ ದೆಹಲಿ ಕೋರ್ಟ್‌ ಇ.ಡಿ ಎದುರು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು.

**

ಯುಪಿಎ ಅವಧಿಯ ರಕ್ಷಣಾ ಒಪ್ಪಂದ ಮತ್ತು ಪೆಟ್ರೋಲಿಯಂ ಒಪ್ಪಂದದಲ್ಲಿ ಸಂದಾಯವಾದ ಕೋಟ್ಯಂತರ ರೂಪಾಯಿ ಲಂಚದ ಹಣದಲ್ಲಿಯೇ ವಾದ್ರಾ ಲಂಡನ್‌ನಲ್ಲಿ ಎಂಟು ಆಸ್ತಿ ಖರೀದಿಸಿದ್ದಾರೆ
- ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

**

ವಾದ್ರಾ ನನ್ನ ಪತಿ ಮತ್ತು ನನ್ನ ಕುಟುಂಬ. ನನ್ನ ಕುಟುಂಬವನ್ನು ಬೆಂಬಲಿಸುತ್ತೇನೆ
- ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !