ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್‌ ಠೇವಣಿ: ಭಾರತಕ್ಕೆ 74ನೇ ರ್‍ಯಾಂಕ್‌

2018ರಲ್ಲಿ ₹ 6757 ಕೋಟಿ ಹಿಂಪಡೆದ ಭಾರತೀಯರು
Last Updated 30 ಜೂನ್ 2019, 20:01 IST
ಅಕ್ಷರ ಗಾತ್ರ

ಜೂರಿಚ್‌/ನವದೆಹಲಿ: ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು ಹಣ ಇಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಒಂದು ಸ್ಥಾನ ಕುಸಿತ ಕಂಡು 74ನೇ ರ್‍ಯಾಂಕ್‌ ಪಡೆದಿದೆ. ಬ್ರಿಟನ್‌ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಸ್ವಿಟ್ಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕಿಂಗ್‌ ಪ್ರಾಧಿಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಪಟ್ಟಿಯಲ್ಲಿ ಈ ಉಲ್ಲೇಖ ಇದೆ. ಎರಡು ವರ್ಷಗಳ ಹಿಂದೆ 88ನೇ ಸ್ಥಾನದಲ್ಲಿದ್ದ ಭಾರತವು ಕಳೆದ ವರ್ಷ 15 ಸ್ಥಾನಗಳಷ್ಟು ಮೇಲಕ್ಕೇರಿ 73ನೇ ಸ್ಥಾನಕ್ಕೆ ಬಂದಿತ್ತು.

2018ನೇ ಸಾಲಿನ ಅಂತ್ಯದವರೆಗಿನ ವರದಿಯ ಪ್ರಕಾರ, ಸ್ವಿಟ್ಜರ್‌ಲೆಂಡ್‌ನ ಬ್ಯಾಂಕ್‌ಗಳಲ್ಲಿ ವಿದೇಶಿಯರು ಇಟ್ಟಿರುವ ಒಟ್ಟಾರೆ ಹಣದ ಶೇ 0.07ರಷ್ಟು ಮಾತ್ರ ಭಾರತೀಯರದ್ದಾಗಿದೆ. ಇದರಲ್ಲಿ ಬ್ರಿಟನ್‌ ನಾಗರಿಕರ ಪಾಲು ಶೇ 26ರಷ್ಟಿದೆ. ಬ್ರಿಟನ್‌ ನಂತರದ ನಾಲ್ಕು ಸ್ಥಾನಗಳಲ್ಲಿ ಅಮೆರಿಕ, ವೆಸ್ಟ್‌ ಇಂಡೀಸ್‌, ಫ್ರಾನ್ಸ್‌ ಹಾಗೂ ಹಾಂಗ್‌ಕಾಂಗ್‌ ಇದೆ.

ಸ್ವಿಸ್‌ ಬ್ಯಾಂಕ್‌ನಲ್ಲಿರುವ ಒಟ್ಟು ವಿದೇಶಿ ಹಣದ ಶೇ 50ರಷ್ಟು ಹಣ ಪಟ್ಟಿಯ ಮೊದಲ ಐದು ಸ್ಥಾನದಲ್ಲಿರುವ ರಾಷ್ಟ್ರಗಳ ನಾಗರಿಕರಿಂದ ಬಂದಿದೆ. ಒಟ್ಟಾರೆ ಹಣದ ಮೂರನೇ ಎರಡರಷ್ಟು ಭಾಗ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿರುವ ದೇಶಗಳ ನಾಗರಿಕರಿಗೆ ಸೇರಿದ್ದಾಗಿದೆ. ಶೇ 75ರಷ್ಟು ಹಣ ಮೊದಲ 15 ಸ್ಥಾನಗಳಲ್ಲಿರುವ ದೇಶಗಳಿಂದ ಬಂದಿದೆ. ಸುಮಾರು ಶೇ 90ರಷ್ಟು ಹಣವು ಪಟ್ಟಿಯ ಮೊದಲ 30 ಸ್ಥಾನಗಳನ್ನು ಪಡೆದ ರಾಷ್ಟ್ರಗಳ ನಾಗರಿಕರಿಗೆ ಸೇರಿದ್ದು ಎಂದು ವರದಿ ಹೇಳುತ್ತದೆ.

ಸ್ವಿಸ್‌ ಬ್ಯಾಂಕ್‌ನಲ್ಲಿ ಹೆಚ್ಚು ಹಣವನ್ನು ಇಟ್ಟಿರುವ ‘ಬ್ರಿಕ್ಸ್‌’ ಒಕ್ಕೂಟದ ರಾಷ್ಟ್ರಗಳಲ್ಲಿ ಭಾರತವು ಕೊನೆಯ ಸ್ಥಾನದಲ್ಲಿದೆ. ರಷ್ಯಾ ಮೊದಲ ಸ್ಥಾನದಲ್ಲಿದೆ (ಪಟ್ಟಿಯಲ್ಲಿ 20ನೇ ಸ್ಥಾನ). ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಚೀನಾ (ಪಟ್ಟಿಯಲ್ಲಿ 22ನೇ ಸ್ಥಾನ), ದಕ್ಷಿಣ ಆಫ್ರಿಕಾ (ಪಟ್ಟಿಯಲ್ಲಿ 60ನೇ ಸ್ಥಾನ) ಮತ್ತು ಬ್ರೆಜಿಲ್‌ (ಪಟ್ಟಿಯಲ್ಲಿ 65ನೇ ಸ್ಥಾನ) ಇವೆ.

ಭಾರತದ ನೆರೆ ರಾಷ್ಟ್ರಗಳಲ್ಲಿ ಪಾಕಿಸ್ತಾನ 82ನೇ ಸ್ಥಾನ, ಬಾಂಗ್ಲಾದೇಶ 89ನೇ ಸ್ಥಾನ, ನೇಪಾಳ 109ನೇ ಸ್ಥಾನ, ಶ್ರೀಲಂಕಾ 141ನೇ ಸ್ಥಾನ, ಮ್ಯಾನ್ಮಾರ್‌ 187ನೇ ಸ್ಥಾನ ಹಾಗೂ ಭೂತಾನ್‌ 193ನೇ ಸ್ಥಾನ ಪಡೆದಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲಬಾರಿ, ಪಾಕಿಸ್ತಾನ ಮೂಲದವರು ಸ್ವಿಸ್‌ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣದ ಪ್ರಮಾಣವು ಭಾರತೀಯರು ಇಟ್ಟಿರುವ ಹಣದ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ವಿದೇಶಿಯರು ಇಟ್ಟಿರುವ ಹಣದ ಮಾಹಿತಿ ನೀಡುವಂತೆ ಸ್ವಿಸ್‌ ಬ್ಯಾಂಕ್‌ಗಳ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವುದರ ಪರಿಣಾಮವಾಗಿ ಅನೇಕ ರಾಷ್ಟ್ರಗಳಿಂದ ಇಲ್ಲಿಗೆ ಹರಿದು ಬರುವ ಹಣದ ಪ್ರಮಾಣ ತಗ್ಗಿದೆ.

ಸ್ವಿಟ್ಜರ್‌ಲೆಂಡ್‌ ದೇಶವು ಭಾರತ ಹಾಗೂ ಇತರ ಕೆಲವು ರಾಷ್ಟ್ರಗಳ ಜೊತೆ ಮಾಹಿತಿ ವಿನಿಮಯ ವ್ಯವಸ್ಥೆಯನ್ನು ರೂಪಿಸಿದೆ. ಇದರಿಂದಾಗಿ ತೆರಿಗೆ ಕಳ್ಳರಿಗೆ ಈ ಬ್ಯಾಂಕ್‌ಗಳಲ್ಲಿ ಇದ್ದ ರಕ್ಷಣಾ ಗೋಡೆ ಕುಸಿಯುವಂತಾಗಿದೆ. ಭಾರತವು ಪ್ರಸಕ್ತ ಸಾಲಿನಿಂದ ಈ ಮಾಹಿತಿಯನ್ನು ಪಡೆಯಲಿದೆ.

ಇಳಿಕೆಯ ಹಾದಿ
1996ರಿಂದ 2007ರವರೆಗೆ ಸ್ವಿಸ್‌ಬ್ಯಾಂಕ್‌ನಲ್ಲಿ ಹೆಚ್ಚಿನ ಹಣ ಇಟ್ಟಿದ್ದ ವಿದೇಶಿಯರ ಪಟ್ಟಿಯಲ್ಲಿ ಭಾರತವು 50ರೊಳಗಿನ ಸ್ಥಾನದಲ್ಲೇ ಇರುತ್ತಿತ್ತು. 2008ರಲ್ಲಿ ಮೊದಲ ಬಾರಿಗೆ ಭಾರತ 55ನೇ ಸ್ಥಾನಕ್ಕೆ ಕುಸಿಯಿತು. ಅದಾದ ನಂತರ ಕೆಲವು ವರ್ಷಗಳ ಕಾಲ ಸ್ವಲ್ಪ ಏರಿಳಿತ ಕಾಣುತ್ತಲೇ ಹೋಗಿ 2013ರಲ್ಲಿ 58ನೇ ಸ್ಥಾನಕ್ಕೆ ಬಂದಿತ್ತು.

2018ರಲ್ಲಿ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣದ ಒಟ್ಟು ಪ್ರಮಾಣವು ಶೇ 6ರಷ್ಟು (₹ 6,757 ಕೋಟಿ) ಇಳಿಕೆಯಾಗಿ ಎರಡು ದಶಕಗಳ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಅಂಕಿ ಅಂಶ
61 –2014ನೇ ಸಾಲಿನಲ್ಲಿ ಪಟ್ಟಿಯಲ್ಲಿ ಭಾರತ ಹೊಂದಿದ್ದ ಸ್ಥಾನ
37 –2007ನೇ ಸಾಲಿನಲ್ಲಿ ಭಾರತದ ಸ್ಥಾನ
₹ 99ಲಕ್ಷ ಕೋಟಿ (4%) – 2018ರಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ವಿದೇಶಿಯರು ಇಟ್ಟಿರುವ ಹಣದಲ್ಲಿ ಆಗಿರುವ ಕುಸಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT