ಮಂಗಗಳ ತಂಟೆಗೆ ಹೋದೀರಿ...ಜೋಕೆ!

7
ಸಂಸತ್‌ ಭವನದಲ್ಲಿ ಕೋತಿ ಕಾಟ: ಮುನ್ನೆಚ್ಚರಿಕೆಗೆ ಸುತ್ತೋಲೆ

ಮಂಗಗಳ ತಂಟೆಗೆ ಹೋದೀರಿ...ಜೋಕೆ!

Published:
Updated:
Deccan Herald

ನವದೆಹಲಿ: ಮಂಗಗಳಿಗೂ ಸಂಸತ್ ಭವನಕ್ಕೂ ಬಿಡದ ನೆಂಟು. ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಅವುಗಳ ವಿಹಾರ ಸ್ವಚ್ಛಂದ. ಪಾಕ್ ಭಯೋತ್ಪಾದಕರ ದಾಳಿಯ ನಂತರ ಈ ಭವನ 'ಉಕ್ಕಿನ ಕೋಟೆ'. ಆದರೆ ಮಂಗಗಳ ಪಾಲಿಗೆ ಅಲ್ಲ. ಮನುಷ್ಯರು ಮಂಗಗಳಿಗೆ ಹೆದರಬೇಕಾದ ಪರಿಸ್ಥಿತಿ.

ಸಂಸದ್ ಭವನ, ವಿಜಯಚೌಕ್, ಪ್ರಧಾನಿ ಕಾರ್ಯಾಲಯ, ರಕ್ಷಣೆ, ಹಣಕಾಸು, ಗೃಹ, ವಿದೇಶಾಂಗ ವ್ಯವಹಾರ ಮಂತ್ರಿಗಳ ಕಾರ್ಯಾಲಯ ಹಾಗೂ ಕ್ಯಾಬಿನೆಟ್ ಸಚಿವಾಲಯಗಳಿರುವ ಭವ್ಯ ಕಟ್ಟಡಗಳು, ಸುತ್ತಮುತ್ತಲ ಮಂತ್ರಿಗಳು- ಸಂಸದರ ನಿವಾಸಗಳ ಫಾಸಲೆಯಲ್ಲಿ ಮಂಗಗಳ ದಂಡಿನ ಕಾರುಬಾರು ನಿರಂಕುಶ. ಮನೆಗಳಿಗೆ ನುಗ್ಗಿ ತಿಂಡಿ ತಿನಿಸು ಕದಿಯುವ, ಬೆದರಿಸಿ ಕಚ್ಚಿ ಪರಚುವ, ಗಿಡಮರಗಳ ಬಳ್ಳಿಗಳ ಧ್ವಂಸದ ಪ್ರಕರಣಗಳಿಗೆ ಲೆಕ್ಕವಿಲ್ಲ. ರಾಜಧಾನಿಯ ಸುತ್ತಮುತ್ತಲ ಅಡವಿ-ಕೆರೆಕಟ್ಟೆಗಳನ್ನು ನಾಶ ಮಾಡಿದ ಮನುಷ್ಯ ಮಂಗಗಳ ವಸತಿ ಕಿತ್ತುಕೊಂಡ ನಂತರ ವಾನರ ಸೇನೆ ನಗರಕ್ಕೆ ಲಗ್ಗೆ ಇಟ್ಟಿದೆ.

ಮುಖ್ಯದ್ವಾರದಿಂದ ದೂರವಿರುವ ಸಂಸದ್ ಭವನದ ಮೊದಲ ಮಹಡಿಯ ಕಾರಿಡಾರ್, ಮೆಟ್ಟಿಲುಗಳ ಮೇಲೆ ಮಂಗಗಳು ಠಳಾಯಿಸುವುದು ಸಾಮಾನ್ಯ ನೋಟ. ಇತ್ತೀಚಿನ ಅಧಿವೇಶನವೊಂದರಲ್ಲಿ ಸಂಸದ್ ಭವನದ ಗ್ರಂಥಾಲಯಕ್ಕೇ ನುಗ್ಗಿದ ಮಂಗವೊಂದು ಮೇಜು ಕುರ್ಚಿಗಳ ಮೇಲೆ ನೆಗೆದು ಕುಪ್ಪಳಿಸಿ ಅರ್ಧ ತಾಸು ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಕಡೆಗೆ ಗಣ್ಯವ್ಯಕ್ತಿಗಳು ನಿರ್ಗಮಿಸುವ ದ್ವಾರದಿಂದ ಹೊರಬಿದ್ದಿತ್ತು.

ಪ್ರಣಬ್ ಮುಖರ್ಜಿ ಅರ್ಥಸಚಿವರಾಗಿದ್ದ ದಿನಗಳು. ತಮ್ಮ ಹಿತ್ತಲಿನ ಕುಂಬಳಕಾಯಿಗಳನ್ನು ಮಂಗಗಳು ಮೆದ್ದು, ಬಳ್ಳಿ ಕಿತ್ತೆಸೆದು ದಾಂಧಲೆ ಮಾಡಿದವೆಂದು ದೂರಿದ್ದರು. ನಗರದ ಹೊರಗೆ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ ಇಂತಹ ದಾಂಧಲೆಗಳನ್ನು ತಡೆಯಬಹುದೆಂದು ಸಲಹೆ ಮಾಡಿದ್ದರು. ಅಂದಿನ ಸಚಿವ ಮಣಿಶಂಕರ ಅಯ್ಯರ್ ಕಾಮರಾಜ ಮಾರ್ಗದ ಸರ್ಕಾರಿ ಬಂಗಲೆಯನ್ನು ಬೇಡವೆಂದಿದ್ದರು. ಖಾಲಿ ಬಿದ್ದಿದ್ದ ಆ ಬಂಗಲೆ ಮಂಗಗಳಿಗೆ ಅಚ್ಚುಮೆಚ್ಚಿನ ರಾತ್ರಿ ಬಿಡಾರದ ತಾಣವಾಗಿತ್ತು.

ಸಂಸತ್ತಿನ ಚಳಿಗಾಲದ ಅಧಿವೇಶನ ಹತ್ತಿರ ಬರುತ್ತಿದೆ. ತಿಂಗಳೊಪ್ಪತ್ತಿನಲ್ಲಿ ಸಂಸದರು ದೆಹಲಿಗೆ ಬಂದಿಳಿಯಲಿದ್ದಾರೆ. ಅವುಗಳೊಂದಿಗೆ ಮನುಷ್ಯರು ಹೇಗೆ ವ್ಯವಹರಿಸಬೇಕಾದ ರೀತಿ ನೀತಿಗಳ ಕುರಿತು ಲೋಕಸಭಾ ಸಚಿವಾಲಯದ ಭದ್ರತಾ ವಿಭಾಗವು ಸಲಹಾ-ಸುತ್ತೋಲೆ ಹೊರಡಿಸಿದೆ.

'ಅವುಗಳ ತಂಟೆಗೆ ಹೋಗದಿರಿ, ಅವು ನಿಮ್ಮ ತಂಟೆಗೆ ಬರುವುದಿಲ್ಲ' ಎಂಬುದು ಸಂಸದರು -ಮಂತ್ರಿಗಳು ಅವರ ಸಿಬ್ಬಂದಿ ಹಾಗೂ ಭೇಟಿ ನೀಡುವ ಸಾರ್ವಜನಿಕರ ಸುರಕ್ಷತೆಗೆಂದು ಹೊರಡಿಸಿರುವ ಓಲೆಯ ತಿರುಳು. ಮಂಗಗಳ ಕಣ್ಣೊಳಗೆ ಕಣ್ಣಿಟ್ಟು ನೋಡಬೇಡಿ, ತಾಯಿ ಮತ್ತು ಕೂಸು ಮಂಗದ ನಡುವಿನ ರಸ್ತೆಯನ್ನು ಹಾಯಬೇಡಿ, ಅವುಗಳನ್ನು ಛೇಡಿಸದಿರಿ, ಮಂಗಗಳ ಗುಂಪು ಹಾಯುವಾಗ ಓಡದಿರಿ, ಸತ್ತ ಅಥವಾ ಗಾಯಗೊಂಡ ಮಂಗದ ಬಳಿ ಹೋಗಬೇಡಿ, ಅವುಗಳಿಗೆ ಆಹಾರ ನೀಡುವುದು ಬೇಡ, ನಿಮ್ಮ ವಾಹನ ಅವುಗಳಿಗೆ ಡಿಕ್ಕಿ ಹೊಡೆದರೆ ನಿಲ್ಲಿಸದಿರಿ, ಖೊ ಖೊ ಸದ್ದು ಮಾಡುವ ಮಂಗದಿಂದಲೂ ಭಯವಿಲ್ಲ, ನಿರ್ಲಕ್ಷಿಸಿ ನಡೆಯಿರಿ, ಮಂಗಕ್ಕೆ ಹೊಡೆಯದಿರಿ, ಬಡಿಗೆಯಿಂದ ನೆಲ ಕುಟ್ಟಿ ಸದ್ದು ಮಾಡಿದರೆ ಚದುರುತ್ತವೆ ಎಂಬ ಸಲಹೆಗಳ ಪಟ್ಟಿ ಮಾಡಲಾಗಿದೆ.

2014ರಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಇಂದಿನ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಸಂಸದ್ ಭವನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಂಗಗಳ ಕಾಟ ನಿಯಂತ್ರಿಸಲು ನಲವತ್ತು ಮಂದಿ ಯುವಕರನ್ನು ತಿಂಗಳ ಸಂಬಳಕ್ಕೆ ನೇಮಕ ಮಾಡಿಕೊಂಡ ಸುದ್ದಿ ಅಂತಾರಾಷ್ಟ್ರೀಯ ಸುದ್ದಿಮಾಧ್ಯಮಗಳ ಗಮನ ಸೆಳೆದಿತ್ತು. ಮುಸಿಯನ (ಲಂಗೂರ್) ವೇಷ ಧರಿಸಿ, ವಾರಕ್ಕೆರಡು ಬಾರಿ ಮರೆಯಲ್ಲಿ ಕುಳಿತು ಅವುಗಳಂತೆಯೇ ಕೂಗಿ ಸದ್ದು ಮಾಡಿ ಮಂಗಗಳನ್ನು ಓಡಿಸುವುದು ಈ ಯುವಕರ ಕೆಲಸ.

ದೆಹಲಿಯ ಸುಮಾರು 25 ಸಾವಿರ ಮಂಗಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ₹ 23 ಕೋಟಿ ಯೋಜನೆಯನ್ನು ಎರಡು ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !