ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣಭಾರತದಲ್ಲಿ ಕ್ಷೀಣವಾಗಲಿದೆ ಮಳೆ

ಉತ್ತರ ಭಾರತದಲ್ಲಿ ತಂಪೆರೆದ ಮಳೆ: ಪ್ರವಾಹದಲ್ಲಿ 17 ಘೇಂಡಾ ಮೃಗಗಳು ಸೇರಿ 200 ವನ್ಯಜೀವಿಗಳು ಸಾವು
Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 27ರಿಂದ (ಶನಿವಾರ) ರಾಜ್ಯದಲ್ಲಿ ಮುಂಗಾರಿನ ಬಿರುಸು ಕಡಿಮೆಯಾಗಲಿದೆ.

ಇದೇ ವೇಳೆ ಉತ್ತರ ಭಾರತದ ರಾಜ್ಯಗಳಲ್ಲಿ ಮುಂಗಾರಿನ ಬಿರುಸು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗಿದೆ.

ಜುಲೈ ಅಂತ್ಯದಲ್ಲಿ ಮತ್ತು ಆಗಸ್ಟ್‌ನಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಜುಲೈ ತಿಂಗಳ ಮೂರನೇ ವಾರದಲ್ಲಿ ಮುನ್ಸೂಚನೆ ನೀಡಿತ್ತು. ಆದರೆ ಈಗ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದೆ. ಗುರುವಾರ ಮತ್ತು ಶುಕ್ರವಾರ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ. ಈ ಎರಡೂ ದಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಭಾರಿ ಮಳೆಯಾಗಲಿದೆ.

ಅಲ್ಲದೆ ಉತ್ತರ ಒಳನಾಡಿನ ಬೀದರ್‌, ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಾರಿ ಮಳೆಯಾಗಲಿದೆ. ಆದರೆ 27ರಿಂದ (ಶನಿವಾರ) ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯ ಬಿರುಸು ಕಡಿಮೆಯಾಗಲಿದ್ದು, ರಾಜ್ಯದ ಉತ್ತರ ಒಳನಾಡಿನಲ್ಲಿ ಮಾತ್ರ ಉತ್ತಮ ಮಳೆಯಾಗಲಿದೆ. ಅಂದು ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. 28 ಮತ್ತು 29ರಂದೂ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ. 27ರಂದು ಗುಜರಾತ್‌ನಲ್ಲೂ ಉತ್ತಮ ಮಳೆಯಾಗಲಿದೆ ಎಂದು ಇಲಾಖೆಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸರಾಸರಿ ಶೇ 35ರಷ್ಟು ಮಳೆ ಕೊರತೆ
ನವದೆಹಲಿ
: ಉತ್ತರದ ಭಾರತದ ಹಲವು ರಾಜ್ಯಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮುಂಗಾರು ಆರಂಭವಾದಾಗಿನಿಂದ ಉತ್ತರದ ರಾಜ್ಯಗಳು ಸರಾಸರಿ ಶೇ 35ರಷ್ಟು ಮಳೆ ಕೊರತೆ ಎದುರಿಸಿದ್ದವು. ಈ ವಾರ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಮಳೆ ಕೊರತೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಉತ್ತರ ಭಾರತದ ಬಹುತೇಕ ಕಡೆ ಸರಾಸರಿಗಿಂತ ಹೆಚ್ಚು ಉಷ್ಣಾಂಶವಿತ್ತು. ಆದರೆ ಮಧ್ಯಾಹ್ನದ ನಂತರ ಹಲವೆಡೆ ಮಳೆಯಾದ ಕಾರಣ ವಾತಾವರಣ ತಂಪಾಗಿತ್ತು.

ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲಿ ಬುಧವಾರವೂ ಭಾರಿ ಮಳೆಯಾಗಿದೆ. ತೀವ್ರ ಮಳೆ ಕೊರತೆ ಎದುರಿಸಿದ್ದ ರಾಜಸ್ಥಾನದ ಹಲವೆಡೆ 1ರಿಂದ 4 ಸೆಂಟಿಮೀಟರ್‌ನಷ್ಟು ಮಳೆಯಾಗಿದೆ.

ದೆಹಲಿಯಲ್ಲಿ ಬುಧವಾರ ಮಧ್ಯಾಹ್ನದ ನಂತರ ಭಾರಿ ಮಳೆಯಾಗಿದ್ದು, ರಾಜಧಾನಿಯ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲವು ರಸ್ತೆಗಳಲ್ಲಿ ನಾಲ್ಕೂ ತಾಸಿಗೂ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿತ್ತು.

ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ತೀರದಲ್ಲಿ ಮತ್ತು ಮುಂಬೈನಲ್ಲಿ ಭಾರಿ ಮಳೆಯಾಗಿದೆ. ಮುಂಬೈನ ರಸ್ತೆಗಳು ಜಲಾವೃತ್ತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು. ರೈಲು ಮಾರ್ಗಗಳು ಜಲಾವೃತವಾಗಿದ್ದರಿಂದ, ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆವರೆಗೆ ಮುಂಬೈನಲ್ಲಿ ಸರಾಸರಿ 171 ಮಿಲಿಮೀಟರ್ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT