ಗುರುವಾರ , ಸೆಪ್ಟೆಂಬರ್ 19, 2019
26 °C
ಚಂಡಮಾರುತ ಅಬ್ಬರ: ಮುನ್ನೆಚ್ಚರಿಕೆಯಿಂದಾಗಿ ಸಾವು–ನೋವು ಕನಿಷ್ಠ

‘ಫೋನಿ’ಗೆ ಒಡಿಶಾ ತಲ್ಲಣ

Published:
Updated:

ಭುವನೇಶ್ವರ/ಕೋಲ್ಕತ್ತ: ಫೋನಿ ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಭಾರಿ ಮಳೆ ಸುರಿದಿದ್ದು ತಾಸಿಗೆ 175 ಕಿ.ಮೀ.ಗೂ ಹೆಚ್ಚು ವೇಗದ ಗಾಳಿ ಜನ ಜೀವನವನ್ನು ತಲ್ಲಣಗೊಳಿಸಿದೆ. ಹುಲ್ಲು ಚಾವಣಿಯ ಮನೆಗಳು ಗಾಳಿಗೆ ಹಾರಿ ಹೋಗಿವೆ. ಪಟ್ಟಣಗಳು ಮತ್ತು ಗ್ರಾಮಗಳು ನೀರಿನಿಂದ ಆವೃತವಾಗಿವೆ.

ದೇಗುಲಗಳ ನಗರಿ ಪುರಿಯಲ್ಲಿ ಕುಂಭದ್ರೋಣ ಮಳೆಯಾಗಿದೆ. ಮನೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ನೀರು ನಿಂತಿದೆ. ಪುರಿ, ನಯಾಗಡ ಮತ್ತು ಕೇಂದ್ರಪಾಡ ಜಿಲ್ಲೆಗಳಲ್ಲಿ ಎಂಟು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬಹಳ ಮುತುವರ್ಜಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ಸಾವು ನೋವಿನ ಸಂಖ್ಯೆ ಕನಿಷ್ಠ ಮಟ್ಟದಲ್ಲಿಯೇ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಡಿಐಜಿ ರಣದೀಪ್‌ ರಾಣಾ ಹೇಳಿದ್ದಾರೆ. 

ಚಂಡಮಾರುತ ಕೇಂದ್ರವು ಸುಮಾರು 28 ಕಿ.ಮೀ.ನಷ್ಟು ವಿಸ್ತಾರವಾಗಿದೆ. ಮಾರುತವು ತಾಸಿಗೆ ಸುಮಾರು 30 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಆದರೆ, 28 ಕಿ.ಮೀ. ಒಳಗಿನ ವಿಸ್ತಾರದ ಚಂಡಮಾರುತ ಕೇಂದ್ರದಲ್ಲಿ ಗಾಳಿಯ ವೇಗ ತಾಸಿಗೆ 175 ಕಿ.ಮೀ.ನಷ್ಟಿದೆ. ಗಾಳಿಯ ಅಪಾರ ವೇಗದಿಂದಾಗಿ ಹಲವು ಕಟ್ಟಡಗಳು ನೆಲಕ್ಕುರುಳಿವೆ ಮತ್ತು ಮರಗಳು ಬುಡಮೇಲಾಗಿವೆ. 

ಕರಾವಳಿಗೆ ಅಪ‍್ಪಳಿಸಿದ ‍‘ಫೋನಿ’ ಮಾರುತವು ಖುರ್ದಾ, ಕಟಕ್‌, ಜಾಜ್‌ಪುರ, ಭದ್ರಕ್‌ ಮತ್ತು ಬಾಲಸೋರ್‌ಗಳನ್ನು ಹಾದು ಪಶ್ಚಿಮ ಬಂಗಾಳ ಪ್ರವೇಶಿಸಲಿದೆ. ಶನಿವಾರ ಬೆಳಿಗ್ಗೆ ಇದು ಪಶ್ಚಿಮ ಬಂಗಾಳವನ್ನು ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದೆ.

ಒಡಿಶಾದಲ್ಲಿ ಅಪಾರ ಸಂಖ್ಯೆಯ ಮರಗಳು ನೆಲಕ್ಕುರುಳಿವೆ. ಹಾಗಾಗಿ ವಿವಿಧೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮೊಬೈಲ್‌ ಗೋಪುರಗಳು, ವಿದ್ಯುತ್‌ ಮಾರ್ಗಗಳು ಹಾನಿಗೊಂಡಿವೆ. ಬಹಳಷ್ಟು ಸ್ಥಳಗಳಲ್ಲಿ ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ. 

ಭುವನೇಶ್ವರ ಮತ್ತು ಕೋಲ್ಕತ್ತ ವಿಮಾಣ ನಿಲ್ದಾಣಗಳನ್ನು ಮುಚ್ಚಲಾಗಿದೆ. ಭುವನೇಶ್ವರ ವಿಮಾನ ನಿಲ್ದಾಣ ಶನಿವಾರ ಬೆಳಿಗ್ಗೆ 8 ಗಂಟೆಗೆ ತೆರೆಯುವ ನಿರೀಕ್ಷೆ ಇದೆ.

ಕೋಲ್ಕತ್ತ ವಿಮಾನ ನಿಲ್ದಾಣವನ್ನು ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ಮುಚ್ಚಲು ನಿರ್ಧರಿಸಲಾಗಿದೆ. 

ಪ್ರಚಾರಕ್ಕೂ ‘ಫೋನಿ’ ಬಾಧೆ
ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಅಬ್ಬರ ಮುಗಿಲು ಮುಟ್ಟಿತ್ತು. ಆದರೆ, ಶನಿವಾರ ಬೆಳಿಗ್ಗೆಯ ಹೊತ್ತಿಗೆ ಫೋನಿ ಚಂಡಮಾರುತ ರಾಜ್ಯವನ್ನು ಅಪ್ಪಳಿಸಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. 

ಇದನ್ನೂ ಓದಿ... ಮಧ್ಯರಾತ್ರಿ ಬಳಿಕ ಪಶ್ಚಿಮ ಬಂಗಾಳಕ್ಕೆ ‘ಫೋನಿ’

ವಿವಿಧೆಡೆ ಪ್ರಭಾವ
‘ಫೋನಿ’ ಪ್ರಭಾವ ವಿವಿಧ ರಾಜ್ಯಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ರಾಜಸ್ಥಾನದ ಕೆಲವೆಡೆ ದೂಳಿನ ಮಾರುತಗಳು ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರದ ಕರಾವಳಿಯಲ್ಲಿ ಬಿಸಿಗಾಳಿಯ ಭೀತಿಯೂ ಉಂಟಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಹಿಮಾಲಯದಲ್ಲಿ ಹಿಮಪಾತದ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಿಂದ ಹಾದು ಹೋಗುವ ‘ಫೋನಿ’ ಬಾಂಗ್ಲಾದೇಶವನ್ನು ಪ್ರವೇಶಿಸಲಿದೆ. ಅಲ್ಲಿ ಭಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶ್ರೀಲಂಕಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಚ್ಚರಿಕೆಯಲ್ಲಿ ಇರುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.

₹1,000 ಕೋಟಿ ನೆರವು
ಹಿಂಡೌನ್‌ (ರಾಜಸ್ಥಾನ) (ಪಿಟಿಐ):
‘ಫೋನಿ’ ಬಾಧಿತ ರಾಜ್ಯಗಳಿಗೆ ಸುಮಾರು ₹1,000 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಸಂಕಷ್ಟದ ಸಮಯದಲ್ಲಿ ಸರ್ಕಾರವು ಜನರ ಜತೆಗಿದೆ ಎಂದು ಇಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ. ಉನ್ನತ ಅಧಿಕಾರಿಗಳ ಸಭೆ ನಡೆಸಿ ವ್ಯಾಪಕ ಸಮಾಲೋಚನೆ ನಡಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 

ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್‌), ಭಾರತೀಯ ಕರಾವಳಿ ಕಾವಲು ಪಡೆ, ನೌಕಾಪಡೆ ಮತ್ತು ಸೇನೆಯನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಮಾನ ಹಾರಾಟ ರದ್ದು
* ‘ಫೋನಿ’ ಹಾದು ಹೋಗುವ ಪ್ರದೇಶಗಳಲ್ಲಿ ವಿಮಾನ ಹಾರಾಟ ರದ್ದು

* ವಿಮಾನ ಪ್ರಯಾಣಿಕರ ನೆರವಿಗೆ ನಿಯಂತ್ರಣ ಕೊಠಡಿ, ಸಹಾಯವಾಣಿ ಸ್ಥಾಪನೆ

* ಕೋಲ್ಕತ್ತ–ಚೆನ್ನೈ ಮಾರ್ಗದ 220ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತ

* ಭಾರಿ ಸಂಖ್ಯೆಯಲ್ಲಿ ಮರಗಳು ಬಿದ್ದಿರುವ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತ

* ವಿದ್ಯುತ್‌, ದೂರವಾಣಿ ಸಂಪರ್ಕ ಕಡಿತ

 ಅಂಕಿ – ಅಂಶಗಳು
* 11 ಲಕ್ಷ –‌ ಒಡಿಶಾದಲ್ಲಿ ಸ್ಥಳಾಂತರಗೊಂಡ ಜನರ ಸಂಖ್ಯೆ
* 10,000 –ಗ್ರಾಮಗಳು ಫೋನಿ ಬಾಧಿತ
* 52 –ನಗರ ಪ್ರದೇಶದಲ್ಲಿ ಫೋನಿ ಅಬ್ಬರ
* 4,000 –ಪುನರ್ವಸತಿ ಕೇಂದ್ರಗಳು
*  880 –ಫೋನಿ ಪರಿಹಾರದ ವಿಶೇಷ ಕೇಂದ್ರಗಳು

Post Comments (+)