ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಮಠಕ್ಕೆ ಬಂದ ಬಿ ಫಾರಂ!

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶೃಂಗೇರಿ: ಇಲ್ಲಿನ ಶಾರದಾ ಮಠಕ್ಕೆ ಬುಧವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಭೇಟಿ ನೀಡಿ, ಪಕ್ಷದ ಎಲ್ಲ 224 ಬಿ ಫಾರಂಗಳನ್ನು ಗುರುಗಳ ಮುಂದೆ ಇರಿಸಿ ಆಶೀರ್ವಾದ ಪಡೆದರು.

ಶಂಕರ ಜಯಂತಿ ಪ್ರಯುಕ್ತ ಶಂಕರ ಭಗವತ್ಪಾದರ ಮೂರ್ತಿಯ ವಿಶೇಷ ಪೂಜೆಯಲ್ಲಿ ಭಾಗವಹಿಸಲು ಬಂದ ದೇವೇಗೌಡ, ಶಾರದಾ ಮಠದ ಗುರುಗಳಾದ ಭಾರತೀತೀರ್ಥರ ಸನ್ನಿಧಾನಕ್ಕೆ ತೆರಳಿ ಅವರನ್ನು ಭೇಟಿಯಾದರು. ಗುರು ನಿವಾಸದಲ್ಲಿ ಭಾರತೀತೀರ್ಥರನ್ನು ಮತ್ತೆ ಭೇಟಿ ಮಾಡಿದ ದಂಪತಿಗೆ ಗುರುಗಳು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಚುನಾವಣೆಯ ಪ್ರಯುಕ್ತ ಮೇ 12ರ ತನಕ ತಮ್ಮ ಕುಟುಂಬದಿಂದ ನೆರವೇರಿಸಲಿರುವ ದುರ್ಗಾ ಪಾರಾಯಣ ಸಂಕಲ್ಪದ ಧಾರ್ಮಿಕ ಪ್ರಕ್ರಿಯೆಯಲ್ಲಿ ದಂಪತಿ ಭಾಗವಹಿಸಿ, ಶಾರದಾ ಪ್ರಸಾದವನ್ನು ಸ್ವೀಕರಿಸಿ ಕಲಬುರ್ಗಿಗೆ ತೆರಳಿದರು.

ಪ್ರಥಮ ಬಿ ಫಾರಂ ಅನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ಎಚ್.ಜಿ.ವೆಂಕಟೇಶ್ ಅವರಿಗೆ ನೀಡಲಾಯಿತು. ‘ಶಾರದಾ ದೇವಿ ನಿಮ್ಮನ್ನು ಅನುಗ್ರಹಿಸಲಿ. ಜೆಡಿಎಸ್ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ದೇವೇಗೌಡ ಹೇಳಿದರು.

ಎಚ್.ಜಿ.ವೆಂಕಟೇಶ್ ಮಾತನಾಡಿ, ‘ನಾನು ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವುದಿಲ್ಲ. ಪಕ್ಷದ ಪ್ರಣಾಳಿಕೆ, ಕುಮಾರಸ್ವಾಮಿ ಅವರು ನೀಡಿದ ಭರವಸೆ ಹಾಗೂ ನನ್ನ ತಂದೆಯವರ ಸಿದ್ಧಾಂತಮತ್ತು ಆದರ್ಶಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತೇನೆ. ರೈತರು ಹಾಗೂ ಕ್ಷೇತ್ರದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದರು.

ಎರಡು ದಿನಗಳಲ್ಲಿ ಅಂತಿಮ ಪಟ್ಟಿ: ಎಚ್‌ಡಿಕೆ

ಬೆಂಗಳೂರು: ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುವಾರ ರಾಮನಗರದಲ್ಲಿ ಮತ್ತು ಶುಕ್ರವಾರ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಅಮಿತ್‌ ಶಾ ಸಾಹಿತಿಗಳ ಮನೆಗಳಿಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ಸಾಹಿತಿಗಳು ಮತ್ತು ಕವಿಗಳ ಮನೆಗೆ ಭೇಟಿ ಕೊಟ್ಟ ತಕ್ಷಣ ಜನತೆ ಅದರಿಂದ ಪ್ರಭಾವಿತರಾಗಿ ಮತ ಚಲಾಯಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ರವಿ ಪಾಟೀಲ್, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಧರ ರೆಡ್ಡಿ, ಗೀತಾ ಶ್ರೀನಿವಾಸ ರೆಡ್ಡಿ ಇದೇ ಸಂದರ್ಭದಲ್ಲಿ ಜೆಡಿಎಸ್‌ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT