ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಬೇಗುದಿ: ಕಾಂಗ್ರೆಸ್‌ ತತ್ತರ

ತೆಲಂಗಾಣ, ಪಂಜಾಬ್‌ನಲ್ಲಿ ಭಿನ್ನಮತ ಬಹಿರಂಗ; ಕರ್ನಾಟಕ ಸೇರಿ ಕೆಲವೆಡೆ ಬೂದಿ ಮುಚ್ಚಿದ ಕೆಂಡ
Last Updated 7 ಜೂನ್ 2019, 1:19 IST
ಅಕ್ಷರ ಗಾತ್ರ

ಹೈದರಾಬಾದ್/ಚಂಡಿಗಡ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಹಿಂದೆಯೇ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಭಿನ್ನಮತವೂ ಹೆಚ್ಚುತ್ತಿದೆ. ವಿವಿಧ ರಾಜ್ಯಗಳಲ್ಲಿ ಪಕ್ಷಕ್ಕೆ ಭಿನ್ನಮತ, ಬಂಡಾಯ ಬಾಧಿಸುತ್ತಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ನ 12 ಶಾಸಕರು ಪಕ್ಷದಿಂದ ಹೊರನಡೆದಿದ್ದು, ಪಕ್ಷವನ್ನು ಟಿಆರ್‌ಎಸ್‌ನಲ್ಲಿ ವಿಲೀನಗೊಳಿಸಲು ಕೋರಿಕೆ ಮಂಡಿಸಿದ್ದಾರೆ. ಅತ್ತ, ಪಂಜಾಬ್‌ನಲ್ಲಿ ಸಚಿವ ನವಜೋತ್‌ಸಿಂಗ್‌ ಸಿಧು, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿಯನ್ನು ಮುಂದುವವರಿಸಿದ್ದು, ಸಂಪುಟ ಸಭೆಯಿಂದ ದೂರ
ಉಳಿದಿದ್ದಾರೆ.

ಹರಿಯಾಣದಲ್ಲಿ ವಿಧಾನಸಭೆಯ ಚುನಾವಣೆಗೆ ಕೆಲವೇ ತಿಂಗಳಿದ್ದು ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತದ ಹೊಗೆ ಹೆಚ್ಚುತ್ತಿದೆ. ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾಗೆ ನಿಷ್ಠರಾದ ಕೆಲ ಶಾಸಕರು ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಅಶೋಕ್‌ ತನ್ವಾರ್‌ ವಿರುದ್ಧ ಹರಿಹಾಯ್ದಿದ್ದಾರೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಮತ್ತು ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಬೆಂಬಲಿಗರ ನಡುವೆ ಚುನಾವಣಾ ಸೋಲಿಗಾಗಿ ಹೊಣೆ ಯಾರು ಹೊರಬೇಕು ಎಂಬುದರ ಸಂಬಂಧ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿವೆ. ಮಧ್ಯಪ್ರದೇಶದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿ ಮೈತ್ರಿ ಸರ್ಕಾರ ಉಳಿಸಲು ಕಾಂಗ್ರೆಸ್‌ ಶ್ರಮಿಸುತ್ತಿದೆ.

ನಾಟಕೀಯ ಬೆಳವಣಿಗೆ: ಹೈದರಾಬಾದ್‌ನಲ್ಲಿ ಗುರುವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಪಕ್ಷ ತ್ಯಜಿಸಿದ 12 ಶಾಸಕರು ಸ್ಪೀಕರ್‌ ಪಿ. ಶ್ರೀನಿವಾಸ ರೆಡ್ಡಿ ಅವರನ್ನು ಭೇಟಿಯಾಗಿ ಪಕ್ಷವನ್ನು ಟಿಆರ್‌ಎಸ್‌ನಲ್ಲಿ ವಿಲೀನಗೊಳಿಸಲು ಮನವಿ ಸಲ್ಲಿಸಿದರು.

ತಾನು ಆಡಳಿತ ಪಕ್ಷವನ್ನು ಸೇರುವುದಾಗಿ ಕಾಂಗ್ರೆಸ್‌ ಶಾಸಕ ರೋಹಿತ್‌ ರೆಡ್ಡಿ ಅವರು ಗುರುವಾರ ಬೆಳಿಗ್ಗೆ ಘೋಷಿಸಿಕೊಂಡರು. ಇದಾಗಿ ಸ್ವಲ್ಪ ಹೊತ್ತಿ
ನಲ್ಲೇ ಇತರ 11 ಶಾಸಕರ ಜೊತೆ ಸೇರಿ ಅವರು ಟಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ಅವರನ್ನು ಭೇಟಿಮಾಡಿದರು. ಅಲ್ಲಿ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಜೊತೆ ಭೋಜನವನ್ನೂ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅವರು ಸ್ಪೀಕರ್‌ ಅವರನ್ನು ಭೇಟಿಮಾಡಿ ವಿಲೀನ ಕುರಿತ ಪತ್ರ ನೀಡಿದ್ದಾರೆ. ಈ ಬೆಳವಣಿಗೆಯನ್ನು ಖಂಡಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉತ್ತಮ್‌ ಕುಮಾರ್‌ ರೆಡ್ಡಿ ಅವರು ಇತರ ಶಾಸಕರ ಜೊತೆಸೇರಿ ವಿಧಾನಸಭೆ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಮೌನ ಪ್ರತಿಭಟನೆ ನಡೆಸಿದ್ದಾರೆ. ‘ಇದು, ಅನೈತಿಕ ಬೆಳವಣಿಗೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ರಾಜ್ಯದಲ್ಲಿ ಜನಾದೇಶಕ್ಕೆ ವಂಚನೆ ಮಾಡುತ್ತಿದ್ದಾರೆ’ ಎಂದು ಉತ್ತಮ್‌ ಕುಮಾರ್‌ ರೆಡ್ಡಿ ಟೀಕಿಸಿದ್ದಾರೆ.

ಇಂದು,ನಾಳೆ ಪ್ರಿಯಾಂಕಾ ಸಭೆ
ಲಖನೌ: ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವುದಕ್ಕೆ ಕಾರಣ ಕಂಡುಕೊಳ್ಳುವ ಉದ್ದೇಶದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪಕ್ಷದ ನಾಯಕರ ಸಭೆ ನಡೆಸಲಿದ್ದಾರೆ.

‘ಶುಕ್ರವಾರ ಮತ್ತು ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಸಭೆ ನಡೆಯಲಿದ್ದು ಉತ್ತರಪ್ರದೇಶದ ಪೂರ್ವ ಭಾಗದ ಜಿಲ್ಲೆಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಸ್ಥಳೀಯ ಘಟಕಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಉತ್ತರಪ್ರದೇಶದಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಿಯಾಂಕಾ ಮಾತನಾಡುವರು. ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷದ ಉಸ್ತುವಾರಿ ಹೊತ್ತಿದ್ದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಷದೊಳಗೆ ಸಂಘಟನಾತ್ಮಕವಾಗಿ ಕೆಲವು ಬದಲಾವಣೆಗಳನ್ನೂ ನಿರೀಕ್ಷಿಸಲಾಗಿದೆ’ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಂಡಾಯ: ನವಜೋತ್ ಸಿಧು ಖಾತೆಬದಲಾವಣೆ

ಚಂಡಿಗಡ: ಲೋಕಸಭಾ ಚುನಾವಣೆಯ ನಂತರ ನಡೆದ ಪಂಜಾಬ್‌ ಸರ್ಕಾರದ ಮೊದಲ ಸಂಪುಟ ಸಮಿತಿ ಸಭೆಯಿಂದ ದೂರ ಉಳಿಯುವ ಮೂಲಕ ಸಚಿವ ನವಜೋತ್‌ಸಿಂಗ್‌ ಸಿಧು ಅವರು ‘ನನ್ನನ್ನು ಲಘುವಾಗಿ ಪರಿಗಣಿಸಬೇಡಿ’ ಎಂಬ ಸಂದೇಶವನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸಿದ್ದು ಅವರಿಗೆ ವಹಿಸಿದ್ದ ಪೌರಾಡಳಿತ ಖಾತೆಯನ್ನು ಕಿತ್ತುಕೊಂಡು ಅವರಿಗೆ ಇಂಧನ ಖಾತೆಯ ಜವಾಬ್ದಾರಿ ನೀಡಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಸಿಧು ಕಾರಣ’ ಎಂದು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಈಚೆಗೆ ಆರೋಪಿಸಿದ್ದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ ಇರಲಿ, ವೀಕ್ಷಕ ವಿವರಣೆ ನೀಡುವುದಿರಲಿ, ಟಿ.ವಿ. ಕಾರ್ಯಕ್ರ ಅಥವಾ ಪ್ರೇರಣಾದಾಯಕ ಭಾಷಣ ಮಾಡುವುದಿರಲಿ... ಕಳೆದ 40 ವರ್ಷಗಳಿಂದ ನಾನು ಉತ್ತಮ ಸಾಧನೆ ಮಾಡುತ್ತಾ ಬಂದಿದ್ದೇನೆ. ಆದ್ದರಿಂದ ನನ್ನನ್ನು ಲಘುವಾಗಿ ಪರಿಗಣಿಸಬಾರದು’ ಎಂದು ಮಾಧ್ಯಮದವರ ಜೊತೆ ಮಾತನಾಡಿದ ಸಿಧು ಹೇಳಿದ್ದಾರೆ.

‘ಮುಖ್ಯಮಂತ್ರಿಯನ್ನು ನಾನು ಹಿರಿಯ ಸಹೋದರನಂತೆ ನೋಡಿದ್ದೇನೆ. ಅವರು ಹೇಳಿದ್ದನ್ನು ಕೇಳಿ ಗೌರವಿಸಿದ್ದೇನೆ. ಆದರೆ ಅವರು ನನ್ನನ್ನು ಕಡೆಗಣಿಸಿದ್ದಾರೆ. ಅವರ ಹೇಳಿಕೆಗಳಿಂದ ನೋವಾಗಿದೆ. ಸಾಮೂಹಿಕ ಹೊಣೆಗಾರಿಕೆಯ ಮಾತು ಈಗ ಎಲ್ಲಿದೆ? ಅವರು (ಅಮರಿಂದರ್‌) ನನ್ನನ್ನು ಕರೆದು ಎಲ್ಲವನ್ನೂ ಹೇಳಬಹುದಾಗಿತ್ತು’ ಎಂದು ಸಿಧು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT