ಶುಕ್ರವಾರ, ಡಿಸೆಂಬರ್ 13, 2019
27 °C

ತೆಲಂಗಾಣ: ಆರೋಗ್ಯ ಕೇಂದ್ರವಾಗಿ ಬದಲಾದ ಮಸೀದಿ, ಎಲ್ಲ ಧರ್ಮದವರಿಗೂ ಸೇವೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಲ್ಲಿನ ಮಸೀದಿಯೊಂದು ಎಲ್ಲಾ ಧರ್ಮದ ಜನರಿಗೂ ಸೇವೆ ಒದಗಿಸುವ ಆರೋಗ್ಯ ಕೇಂದ್ರವಾಗಿ ಬದಲಾಗಿದೆ. 

ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಮಸೀದ್‌-ಇ-ಇಷ್ಕ್ ಮಸೀದಿಯೇ ಆರೋಗ್ಯ ಕೇಂದ್ರವಾಗಿ ಮಾರ್ಪಾಡಾದ ಖ್ಯಾತಿ ಗಳಿಸಿರುವುದು. ಮಸೀದಿಯು ಹೆಲ್ಪಿಂಗ್‌ ಹ್ಯಾಂಡ್‌ ಫೌಂಡೇಶನ್‌(ಎಚ್‌ಎಚ್‌ಎಫ್‌) ಹೆಸರಿನ ಸ್ವಯಂಸೇವಾ ಸಂಸ್ಥೆಯೊಂದರ(ಎನ್‌ಜಿಒ) ಸಹಯೋಗದಲ್ಲಿ ಈ ಕಾರ್ಯ ಮಾಡುತ್ತಿದೆ.

ಎಚ್‌ಎಚ್‌ಎಫ್‌ನ ಟ್ರಸ್ಟಿ ಮುಜ್ತಾಬಾ ಆಸ್ಕರಿ, ‘ನಿರ್ದಿಷ್ಟ ಪ್ರದೇಶದಲ್ಲಿಯೇ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದೆವು. ಸದ್ಯ ಕೊಳಗೇರಿ ಪ್ರದೇಶದ ಹೃದಯ ಭಾಗದಲ್ಲಿ ಮಸೀದಿ ಆರೋಗ್ಯ ಕೇಂದ್ರ ಇರುವುದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಈ ಮಸೀದಿಯು ಸುಮಾರು 1.5 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಒಂಬತ್ತು ಕೊಳಗೇರಿಗಳಿಂದ ಸುತ್ತುವರಿದಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಮುಖ್ಯ ಉದ್ದೇಶ’ ಎಂದರು.

ಎನ್‌ಜಿಒ ಹಾಗೂ ಮಸೀದಿಯ ಪ್ರಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿದಿನ ಸುಮಾರು 40–50 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಅಗತ್ಯವಿದ್ದಲ್ಲಿ ಬಡವರಿಗೆ ಸಾರಿಗೆ ಸೌಲಭ್ಯವನ್ನೂ ಒದಗಿಸಲಾಗುವುದು ಎಂದೂ ಮಾಹಿತಿ ನೀಡಿದರು.

‘ಕಳೆದ 13 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, 30 ಆಸ್ಪತ್ರೆಗಳನ್ನು ನಿರ್ವಹಿಸುತ್ತಿದ್ದೇವೆ. ಅಲ್ಲೆಲ್ಲಾ ನಮ್ಮ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಅಗತ್ಯಗಳಿಗೆ ಅನುಸಾರವಾಗಿ ನಾವು ರೋಗಿಯ ಬಗ್ಗೆ ಅಧ್ಯಯನ ನಡೆಸುತ್ತೇವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಉಚಿತ ಸಾರಿಗೆ ಸೌಲಭ್ಯವನ್ನೂ ಒದಗಿಸುತ್ತೇವೆ’ ಎಂದು ಎನ್‌ಜಿಒ ನಿರ್ದೇಶಕ ಫರೀದ್‌ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು