ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಪೊಲೀಸರು, ಅಪ್ಪನ ನಗುಮುಖ, ಅಮ್ಮನ ಆತಿಥ್ಯ, ನನ್ನ ಅಸಹಾಯಕತೆ

Last Updated 31 ಆಗಸ್ಟ್ 2018, 10:47 IST
ಅಕ್ಷರ ಗಾತ್ರ

ಇದು ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಬಂಧಿಸಿದ್ದ ವರ್ನನ್ ಗೋನ್ಸಾಲ್ವೆಸ್ ಅವರ ಮಗ ಸಾಗರ್ ಅಬ್ರಾಹಂ ಗೋನ್ಸಾಲ್ವೆಸ್ ಅವರ ಫೇಸ್‌ಬುಕ್‌ ಪೋಸ್ಟ್‌ನ (facebook.com/sagar.abrahamgonsalves) ಕನ್ನಡ ಅನುವಾದ. 2007ರಲ್ಲಿ ವರ್ನನ್ ಗೋನ್ಸಾಲ್ವೆಸ್ ಅವರನ್ನು ಬಂಧಿಸಿದ್ದ ಪೊಲೀಸರು 20 ಆರೋಪಗಳನ್ನು ಹೊರಿಸಿದ್ದರು. ಈ ಪೈಕಿ 19ರಲ್ಲಿ ಅವರು ನಿರಪರಾಧಿ ಎಂದ ಸಾಬೀತಾಗಿದೆ. ಐದೂವರೆ ವರ್ಷ ಜೈಲುವಾಸ ಅನುಭವಿಸಿ ಹೊರಬಂದಿದ್ದ ಅವರನ್ನು ಪೊಲೀಸರು ಮಂಗಳವಾರ (ಆಗಸ್ಟ್ 28) ಮತ್ತೊಮ್ಮ ಬಂಧಿಸಿದ್ದರು. ಸುಪ್ರಿಂಕೋರ್ಟ್ ಆದೇಶದಂತೆ ಅವರೀಗ ಗೃಹಬಂಧನದಲ್ಲಿದ್ದಾರೆ.

–––

ನಮ್ಮ ಮನೆಯ ಕಾಲಿಂಗ್ ಬೆಲ್ ಬೆಳಿಗ್ಗೆ 6 ಗಂಟೆಗೆ ಸದ್ದು ಮಾಡಿತು. ಬಾಗಿಲು ತೆರೆದಾಗ 10 ಮಂದಿಯಿದ್ದ ಪುಣೆ ಪೊಲೀಸರ ತಂಡದ ಜೊತೆಗೆ ಮುಂಬೈನ ಕೆಲ ಸ್ಥಳೀಯ ಪೊಲೀಸ್‌ ಕಾನ್‌ಸ್ಟೆಬಲ್‌ಗಳೂ ಒಳಗೆ ಬಂದರು. ನಮ್ಮ ಮನೆಯನ್ನು ಶೋಧಿಸುವುದು ಮತ್ತು ನಮ್ಮ ತಂದೆಯನ್ನು ಬಂಧಿಸುವುದು ಅವರ ಉದ್ದೇಶವಾಗಿತ್ತು.

ಮನೆಗೆ ಬಂದ ಪೊಲೀಸರು ನಮ್ಮ ಮೊಬೈಲ್‌ಗಳನ್ನು ಕಿತ್ತುಕೊಂಡರು. ಲ್ಯಾಂಡ್‌ಲೈನ್‌ ಸಂಪರ್ಕ ತಪ್ಪಿಸಲಾಗಿತ್ತು. ನಮ್ಮ ಪರ್ಸನಲ್ ಕಂಪ್ಯೂಟರ್‌ಗಳನ್ನು ಆನ್‌ ಮಾಡಿದರು. ಅನುಮಾನಾಸ್ಪದವಾದ್ದದ್ದು ಏನಾದರೂ ಸಿಗಬಹುದು ಎಂದು ಪ್ರತಿಯೊಂದು ಪುಸ್ತಕ, ಸಿಡಿ ಮತ್ತು ಪೆನ್‌ಡ್ರೈವ್‌ಗಳನ್ನು ಪರಿಶೀಲಿಸಿದರು.

ಮಾವೊ, ನಕ್ಸಲ್ ಅಥವಾ ಮಾರ್ಕ್ಸ್‌ ಹೆಸರು ಇರುವ ಪುಸ್ತಕಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಗ್ರಂಥಾಲಯಗಳು ಅಥವಾ ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿ ಸಿಗಬಹುದಾದ ಪುಸ್ತಕಗಳನ್ನೆಲ್ಲಾ ಅವರು, ಸಾಕ್ಷಿ ಎಂದು ತಮ್ಮ ಜೊತೆಗೆ ತೆಗೆದುಕೊಂಡು ಹೋದರು. ಅವರು ತೆಗೆದುಕೊಂಡು ಹೋದ ಪುಸ್ತಕಗಳಲ್ಲಿಇ.ಎಚ್‌.ಕಾರ್ ವಿರಚಿತ ‘ಬೋಲ್‌ಶೆವಿಕ್ ರೆವಲ್ಯೂಷನ್– ಸಂಪುಟ 1’ ಸಹ ಇತ್ತು.

ಬೆಳಿಗ್ಗೆ 6 ಗಂಟೆಗೆ ಮನೆಗೆ ಬಂದ ಪೊಲೀಸರು ನಮ್ಮ ಮನೆಯಲ್ಲಿ ಮಧ್ಯಾಹ್ನ 1.45ರವರೆಗೆ ಅಂದರೆ ಸುಮಾರು ಏಳು ತಾಸು ಇದ್ದರು. ಕೆಲ ಕಾನ್‌ಸ್ಟೆಬಲ್‌ಗಳು ಮನೆ ಹೊರಗೆ ಅಂದರೆ ಗೇಟ್‌ ಬಳಿ ನಿಂತಿದ್ದರು. ಪೊಲೀಸರು ಇರುವವರೆಗೂ ನಮಗ್ಯಾರಿಗೂ ಮನೆಯಿಂದ ಹೊರಗೆ ಹೋಗಲು ಅವಕಾಶ ಕೊಡಲಿಲ್ಲ.

ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಜೊತೆಗೆ ನನ್ನ ಅಪ್ಪ–ಅಮ್ಮ ತೀರ ಸಹಜವಾಗಿ ಮಾತನಾಡುತ್ತಿದ್ದರು. ಅದನ್ನು ನೋಡಿದ ನಾನು ಒಂಥರಾ ಅಸಹಾಯಕತೆ ಅನುಭವಿಸಿದೆ. ‘ನಿಮ್ಮ ಮನೆ ಎಲ್ಲಿದೆ? ಏನು ಓದಿಕೊಂಡಿದ್ದೀರಿ? ಮಕ್ಕಳು ಏನು ಓದ್ತಿದ್ದಾರೆ?’ ಎಂದೆಲ್ಲಾ ಇವರು ಅವರ ಕಷ್ಟಸುಖ ವಿಚಾರಿಸುತ್ತಿದ್ದರು. ಮನೆಗೆ ಬಂದಿದ್ದ ಎಲ್ಲ ಪೊಲೀಸರಿಗೂ ನನ್ನ ಅಮ್ಮ ಟೀ ಮಾಡಿಕೊಟ್ಟರು.

‘ಕೆಲಸ ಯಾವುದೇ ಇರಲಿ, ಅವರು ಬಂದಿರುವುದು ನನ್ನ ಮನೆಗೆ. ಅವರೆಲ್ಲರನ್ನು ನಾವು ನಮ್ಮ ಅತಿಥಿಗಳು’ ಎಂದೇ ಪರಿಗಣಿಸಬೇಕು ಅಮ್ಮ ನನಗೆ ಹೇಳಿದ್ದಳು.ಟೀ ಕುಡಿಯುವಾಗ ನಾನೂ ಪೊಲೀಸರೊಂದಿಗೆ ಮಾತನಾಡಿದೆ. ಆದರೂ ಒಂದು ರೀತಿಯ ಅಸಹಾಯಕತೆ ನನ್ನನ್ನು ಬಾಧಿಸುತ್ತಿತ್ತು.

ಈ ಸರ್ವಶಕ್ತ ಪ್ರಭುತ್ವ ಮತ್ತು ಅದರ ಪೊಲೀಸ್‌ ಸೇರಿದಂತೆ ಅದರ ಅಂಗಗಳೆಸಿದ ಯಂತ್ರಗಳ ಜೊತೆಗೆ ನಾನಾಗಲಿ, ನನ್ನ ಪೋಷಕರಾಗಲಿ ಏನೂ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮುಗುಳ್ನಗುವಿನೊಂದಿಗೆ ಅದರ ಪ್ರತಿನಿಧಿಗಳಾದ ಪೊಲೀಸರ ಜೊತೆಗೆ ಮಾತನಾಡುತ್ತಾ ಸಹಕರಿಸಿದೆವು.

ಸರಿಯಾಗಿ 10 ವರ್ಷಗಳ ಹಿಂದೆ, ಅಂದರೆ ಆಗಸ್ಟ್ 2007ರಲ್ಲಿಯೂ ನಾನು ಇಂಥದ್ದೇ ಭಾವನೆ ಅನುಭವಿಸಿದ್ದೆ. ಆಗ ಹಲವು ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ಅಪ್ಪನನ್ನು ಬಂಧಿಸಲಾಯಿತು. ಅಂದು ಪೊಲೀಸರು ನಮ್ಮ ಮನೆಗೆ ಬಂದಾಗ ರಾತ್ರಿ 12 ಗಂಟೆ. ಆಗ ಅವರು ಬೆಳಿಗ್ಗೆ 6 ಗಂಟೆಯವರೆಗೂ ಮನೆಯಲ್ಲಿಯೇ ಇದ್ದರು. ಮೊನ್ನೆ, ಅಂದರೆ 2018ರ ಆಗಸ್ಟ್‌ ತಿಂಗಳಲ್ಲಿ ಅದೇ ಪೊಲೀಸರು ನಮ್ಮ ಮನೆಗೆ ಬಂದುದು ಬೆಳಿಗ್ಗೆ 6ಕ್ಕೆ. ಅಷ್ಟೇ ವ್ಯತ್ಯಾಸ ನೋಡಿ.

2007ರಲ್ಲಿ ನನಗೆ 12 ವರ್ಷ ವಯಸ್ಸು. ನನ್ನ ಕಣ್ಣೆದುರು ನಡೆದ ಎಲ್ಲವನ್ನೂ ಅಮ್ಮನ ಕಣ್ಣಿನಿಂದ ಅರ್ಥೈಸಿಕೊಂಡಿದ್ದೆ. ಸ್ವತಃ ವಕೀಲರಾಗಿದ್ದರೂ ಏನೂ ಮಾಡಲು ಸಾಧ್ಯವಾಗದೆ ಅಸಹಾಯಕತೆಯಲ್ಲಿ ಅಮ್ಮ ಇದ್ದರು. ‘ನೀವು ನಮ್ಮೊಂದಿಗೆ ಸಹಕರಿಸಬೇಕು, ಇಲ್ಲದಿದ್ದರೆ ಬಂಧಿಸಲಾಗುವುದು’ ಎಂದು ಪೊಲೀಸರು ಅಮ್ಮನನ್ನೂ ಎಚ್ಚರಿಸಿದ್ದರು.

ಮೊನ್ನೆಯಂತೆಯೇ ಅಂದೂ ಸಹ, ನನಗೆ ನನ್ನ ಅಸಹಾಯಕತೆಯ ಬಗ್ಗೆ ಬೇಸರವಾಗಿತ್ತು. ಮನೆಗೆ ಬಂದಿದ್ದ ಪೊಲೀಸ್ ಅಧಿಕಾರಿಗಳು ನನ್ನ ಅಧ್ಯಯನಶೀಲತೆಯನ್ನು ಮೆಚ್ಚಿಕೊಂಡಿದ್ದರು. ‘ನಮ್ಮ ಮಕ್ಕಳಿಗೆ ನಿನ್ನಂತೆ ಓದುವ ಆಸಕ್ತಿ ಇಲ್ಲ’ ಎಂದು ದೂರು ಹೇಳಿಕೊಂಡಿದ್ದರು.

ನಾವು ಹತ್ತು ವರ್ಷಗಳ ಹಿಂದೆಯೂ ಇದೇ ರೀತಿ ಪ್ರಭುತ್ವದೊಂದಿಗೆ ಸಹಕರಿಸಿದ್ದೆವು. ನನ್ನ ತಂದೆ ಜೈಲಿನಲ್ಲಿ ಐದೂವರೆ ವರ್ಷ ಕಳೆದು, ನಿರಪರಾಧಿ ಎನಿಸಿಕೊಂಡು ಹೊರಗೆ ಬಂದರು. ಅವರ ಮೇಲೆ ಪೊಲೀಸರು ಹೊರಿಸಿದ್ದ ಯಾವುದೇ ಆರೋಪ ಸಾಬೀತಾಗಲಿಲ್ಲ. ಆದರೆ ಒಬ್ಬ ಮನುಷ್ಯನ ಐದೂವರೆ ವರ್ಷಗಳು, ಅವರು ಯಾವುದೇ ತಪ್ಪು ಮಾಡದಿದ್ದರೂ ಹಾಳಾಯಿತು.

ಆ ಹಳೇ ಕಥೆ ಬಿಡಿ. ಈಗ ಆಗಸ್ಟ್ 2018ಕ್ಕೆ ಓಡಿಬನ್ನಿ. ಈ ಆಗಸ್ಟ್‌ ನನ್ನ ಕುಟುಂಬಕ್ಕೆ ಖಂಡಿತವಾಗಿಯೂ ಒಳ್ಳೇ ತಿಂಗಳು ಅಲ್ಲವೇ ಅಲ್ಲ. ಮೊನ್ನೆಯೂ ನನಗೆ ಹತ್ತು ವರ್ಷಗಳ ಹಿಂದಿನ ನೆನಪುಗಳು ಮರುಕಳಿಸಿದವು. ಅಂದು ಮಧ್ಯರಾತ್ರಿ ನಮ್ಮ ಮನೆಯ ಬಾಗಿಲು ಬಡಿದಿದ್ದ ಪೊಲೀಸರು, ಈ ಸಲ ಬೆಳಿಗ್ಗೆ 6ಕ್ಕೆ ಕರೆಗಂಟೆ ಒತ್ತಿದ್ದರು.

ನಿಮ್ಮ ಹಕ್ಕುಗಳನ್ನು ರಕ್ಷಿಸಬೇಕಾದ ಪ್ರಭುತ್ವವೇ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ನೀವು ತುಂಬಾ ಇಷ್ಟಪಡುವ, ಅಭಿಮಾನಿಸುವ ಮತ್ತು ಯಾವುದೇ ತಪ್ಪು ಮಾಡಿಲ್ಲ ಗೊತ್ತಿರುವ ವ್ಯಕ್ತಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಮಾತ್ರವಲ್ಲ, ಜೈಲಿಗೂ ಕಳಿಸುತ್ತದೆ. ಇದನ್ನೆಲ್ಲಾ ಅಸಹಾಯಕನಾಗಿ ನೋಡುವುದು ಒಳ್ಳೆಯ ಅನುಭವ ಹೇಗಾಗಿರಲು ಸಾಧ್ಯ? ಅಪ್ಪನಿಗೊಂದು ಬಿಗಿ ಅಪ್ಪುಗೆ ಕೊಟ್ಟು ‘ಗಟ್ಟಿಯಾಗಿರಿ’ ಎಂದು ಹೇಳುವುದು ಬಿಟ್ಟು ಇನ್ನೇನೂ ಮಾಡಲು ನಮಗೆ ಸಾಧ್ಯವಾಗಲಿಲ್ಲ. ನನ್ನ ಮಾತು ನಂಬಿ, ಇದು ಖಂಡಿತ ಒಳ್ಳೇ ಅನುಭವ ಆಗಿರಲಿಲ್ಲ.

ಜೈಲಿಗೆ ಹೊರಟು ನಿಂಥ ಅಪ್ಪ, ‘ಯೋಚನೆ ಮಾಡಬೇಡ, ನನಗೆ ಜೈಲಿನೊಳಗೆ ಒಂದಿಷ್ಟು ಒಡನಾಡಿಗಳು ಇರುತ್ತಾರೆ’ ಎಂದು ಹೇಳಿದ್ದರು. ಪೊಲೀಸರು ಮನೆಯಲ್ಲಿದ್ದಾಗ ನನ್ನ ಅಪ್ಪ ಮತ್ತು ಅಮ್ಮ ನಡೆದುಕೊಂಡು ರೀತಿ ಗಮನಿಸಿದ ನಾನು, ಅಸಹಾಯಕತೆಯ ನಡುವೆಯೂ ಆತಿಥ್ಯ ಮತ್ತು ಆಶಾವಾದದ ಬಗ್ಗೆ ಸಾಕಷ್ಟು ಕಲಿತುಕೊಂಡೆ.

ತಮ್ಮ ನಂಬಿಕೆಗಳು ಮತ್ತು ಆದರ್ಶಗಳ ಬಗ್ಗೆ ನನ್ನ ತಂದೆಗೆ ಇರುವ ಬದ್ಧತೆ ಬಗ್ಗೆ ನನಗೆ ತುಂಬು ಅಭಿಮಾನವಿದೆ. ತಮ್ಮ ಹಕ್ಕುಗಳ ಬಗ್ಗೆ ಅವರು ಗಟ್ಟಿಯಾಗಿ ಮಾತನಾಡುತ್ತಾರೆ. ದಮನಿತರ ಪರವಾಗಿ ನಿರ್ಭೀತಿಯಿಂದ ದನಿ ಎತ್ತುತ್ತಾರೆ. ಈವರೆಗೂ ಅವರು ಹಾಗೆಯೇ ಇದ್ದರು, ಇನ್ನು ಮುಂದೆಯೂ ಅವರು ಅದೇ ರೀತಿ ಇರುತ್ತಾರೆ. ಕಳೆದ ಬಾರಿಯ ಕೆಟ್ಟ ಅನುಭವ ಅವರನ್ನು ಬದಲಿಸಲಿಲ್ಲ, ಈ ಬಾರಿಯೂ ಅವರು ಬದಲಾಗುವುದಿಲ್ಲ. ಅವರ ಸ್ಫೂರ್ತಿ ಎಂದಿಗೂ ವಿಚಲಿತವಾಗದು. ತಮ್ಮ ನಂಬಿದ ತತ್ವಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.

ತನ್ನ ಅಧಿಕಾರ ಬಲದಿಂದ ಪ್ರಭುತ್ವ ಭಿನ್ನಮತವನ್ನು ತುಳಿಯಲು ಯತ್ನಿಸುತ್ತಿದೆ. ಪ್ರಶ್ನೆ ಕೇಳುವವರು ಮತ್ತು ಚಾಲ್ತಿಯಲ್ಲಿರುವ ಕಥನಗಳನ್ನು ವಿರೋಧಿಸುವ ಅಭಿಪ್ರಾಯ ಹೊಂದಿರುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಪ್ರಶ್ನೆ ಕೇಳಿದ್ದನ್ನೇ ನೆಪವಾಗಿಸಿಕೊಂಡು ಅವರಿಗೆ ಬೇಕುಬೇಕಾದಂತೆ ಹಣೆಪಟ್ಟಿಗಳನ್ನು ಕಟ್ಟಲಾಗುತ್ತಿದೆ.

ಈ ಸಂದರ್ಭದಲ್ಲಿ ನಾನು ಹೇಳುವುದು ಇಷ್ಟೇ. ಭಿನ್ನರಾಗಿ ಉಳಿಯುವ ಹಕ್ಕನ್ನು ರಕ್ಷಿಸಿ. ಅದು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರಿಗೆ ಇರುವ ಮೂಲಭೂತ ಹಕ್ಕು.

ಅನುವಾದ: ಡಿ.ಎಂ.ಘನಶ್ಯಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT