ಶನಿವಾರ, ನವೆಂಬರ್ 23, 2019
17 °C

ದಂಡದ ಗೊಂದಲಕ್ಕೆ ಸ್ಪಷ್ಟೀಕರಣ

Published:
Updated:

ನವದೆಹಲಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಪ್ರಮಾಣ ಹೆಚ್ಚಿಸುವುದರ ಜತೆಗೆ ಇತರ ಕೆಲವು ನಿಯಮ ಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಲ್ಲಿ ಭಾರಿ ಗೊಂದಲ ಮನೆ ಮಾಡಿದೆ. ಹಾಗಾಗಿ, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೆಲ ವಿಚಾರಗಳಲ್ಲಿ ಸ್ಪಷ್ಟೀಕರಣ ನೀಡಿದೆ. 

ಸಂಚಾರ ನಿಯಮ ಉಲ್ಲಂಘನೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪೊಲೀಸರು ಅಥವಾ ಕಾನೂನು ಜಾರಿ ಅಧಿಕಾರಿಗಳ ಬಳಿಯಲ್ಲಿಯೇ ದಂಡ ಕಟ್ಟಬಹುದಾದ ಉಲ್ಲಂಘನೆಗಳು ಮತ್ತು ನ್ಯಾಯಾಲಯಕ್ಕೆ ಹಾಜರಾಗಿಯೇ ದಂಡ ಕಟ್ಟಬೇಕಾದ ಉಲ್ಲಂಘನೆಗಳು ಎಂಬುದೇ ಆ ಎರಡು ವಿಭಾಗಗಳು.

ಯಾವ ಉಲ್ಲಂಘನೆ ಯಾವ ವಿಭಾಗದ ಅಡಿಯಲ್ಲಿ ಸೇರಿದೆ ಎಂಬ ವಿಚಾರದಲ್ಲಿ ಸಂಚಾರ ಪೊಲೀಸರಲ್ಲಿಯೂ ಗೊಂದಲ ಇದೆ. 

ಅದಕ್ಕಾಗಿಯೇ ಸಚಿವಾಲಯ ಯಾವ ವಿಭಾಗದಲ್ಲಿ ಯಾವ ಉಲ್ಲಂಘನೆಗಳು ಬರುತ್ತಿವೆ ಎಂಬ ವಿವರವನ್ನು ಪ್ರಕಟಿಸಿದೆ.

ನ್ಯಾಯಾಲಯದಲ್ಲಿಯೇ ದಂಡ ಕಟ್ಟಬೇಕಾದ ಉಲ್ಲಂಘನೆ

l ಸಂಚಾರ ನಿಯಮ ಉಲ್ಲಂಘನೆ

l ದೋಷಪೂರಿತ ವಾಹನ

l ಮದ್ಯಪಾನ ಮಾಡಿ ವಾಹನ ಚಾಲನೆ

l ಅಪಘಾತಕ್ಕೆ ಕಾರಣವಾದ ಅಪರಾಧಗಳು

l ದೋಷಪೂರಿತ ವಾಹನದ ಅಸುರಕ್ಷಿತ ಚಾಲನೆ

l ಮನುಷ್ಯ ಜೀವಕ್ಕೆ ಅಪಾಯಕಾರಿಯಾಗಿ ಸರಕು ಸಾಗಾಟ

l ಕಾಯ್ದೆಗೆ ವ್ಯತಿರಿಕ್ತವಾಗಿ ವಾಹನ ಮಾರಾಟ ಅಥವಾ ವಾಹನಗಳ ಮಾರ್ಪಡಿಸುವಿಕೆ

l ಏಜೆಂಟರು ಮತ್ತು ದಲ್ಲಾಳಿಗಳಿಗೆ ವಿಧಿಸಲಾದ ದಂಡ

l ಕಾನೂನುಬದ್ಧ ಅಧಿಕಾರ ಇಲ್ಲದೆ ವಾಹನ ಒಯ್ಯುವುದು

l ಬಲವಂತವಾಗಿ ವಾಹನದ ಜಪ್ತಿ

l ರಸ್ತೆ ವಿನ್ಯಾಸ ಮಾನದಂಡ ಪಾಲಿಸದಿರುವುದು (ರಸ್ತೆ ನಿರ್ಮಾಣ ಗುತ್ತಿಗೆದಾರರಿಗೆ)

l 18 ವರ್ಷದೊಳಗಿನವರಿಂದಾದಅಪರಾಧ

l ಸುಗಮ ಸಂಚಾರಕ್ಕೆ ಅಡ್ಡಿ

l ಕಾನೂನು ಜಾರಿ ಮಾಡುವವರಿಂದಾದ ಅಪರಾಧಗಳು

ಸ್ಥಳದಲ್ಲಿಯೇ ದಂಡ ಪಾವತಿಸಬಹುದಾದ ಅಪರಾಧಗಳು

ಟಿಕೆಟ್‌ರಹಿತ ಪ್ರಯಾಣ, ಅಧಿಕಾರಿಗಳ ಆದೇಶ ಪಾಲಿಸದಿರುವುದು ಮತ್ತು ಮಾಹಿತಿ ನೀಡಲು ನಿರಾಕರಣೆ, ಪರವಾನಗಿ ಇಲ್ಲದೆ ವಾಹನದ ಅನಧಿಕೃತ ಬಳಕೆ, ಪರವಾನಗಿ ಇಲ್ಲದೆ ವಾಹನ ಚಾಲನೆ, ಚಾಲನೆಯ ಅರ್ಹತೆ ಇಲ್ಲದಿದ್ದರೂ ಚಾಲನೆ, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ದಂಡಗಳು, ವಾಹನ ಮತ್ತು ಬಿಡಿಭಾಗಗಳ ಮಾರಾಟ ಮತ್ತು ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡಗಳು, ಸುರಕ್ಷತಾ ಸಲಕರಣೆಗಳ ಮಾರಾಟದಲ್ಲಿ ನಿಯಮ ಉಲ್ಲಂಘನೆ, ನಿಯಮ ಉಲ್ಲಂಘಿಸಿ ವಾಹನದ ಪರಿವರ್ತನೆ, ಮಾನಸಿಕವಾಗಿ ಅಥವಾ ದೈಹಿಕವಾಗಿ ವಾಹನ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ವಾಹನ ಚಾಲನೆ, ಅತಿವೇಗ, ಅಪಾಯಕಾರಿ ಚಾಲನೆ, ಅತಿಗಾತ್ರದ ವಾಹನ, ರಸ್ತೆ ಸುರಕ್ಷತೆ ನಿಯಮ ಮೀರಿ ವಾಹನ ಚಾಲನೆ, ಸದ್ದು–ವಾಯು ಮಾಲಿನ್ಯ, ಪರವಾನಗಿರಹಿತ ವಾಹನ ಚಾಲನೆ, ಮಿತಿಗಿಂತ ಹೆಚ್ಚಿನ ಜನರು ಅಥವಾ ಸರಕು ಸಾಗಾಟ, ವಾಹನದ ಹಿಂದೆ ಅಥವಾ ಮುಂದೆ ವಿಸ್ತರಣೆ, ಸೀಟ್‌ ಬೆಲ್ಟ್‌ ಮತ್ತು ಮಕ್ಕಳನ್ನು ಕುಳ್ಳಿರಿಸುವ ನಿಯಮ ಉಲ್ಲಂಘನೆ, ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರ ಸುರಕ್ಷತೆ ನಿಯಮ ಉಲ್ಲಂಘನೆ, ಹೆಲ್ಮೆಟ್‌ರಹಿತ ಚಾಲನೆ, ತುರ್ತು ವಾಹನಗಳಿಗೆ ದಾರಿ ಬಿಟ್ಟುಕೊಡದಿರುವುದು, ವಿಮೆರಹಿತ
ವಾಹನ ಚಾಲನೆ.

ಪ್ರತಿಕ್ರಿಯಿಸಿ (+)