ಶನಿವಾರ, ಮಾರ್ಚ್ 28, 2020
19 °C

ಕೋವಿಡ್‌–19 | ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಯೊಬ್ಬರಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 30ಕ್ಕೆ ಏರಿದೆ.

ಮಧ್ಯವಯಸ್ಕರಾಗಿರುವ ಈ ರೋಗಿಯು ಇತ್ತೀಚೆಗೆ ಇರಾನ್‌ಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮಗಳ ಜಾರಿಗೆ ಜಿಲ್ಲಾ ಹಂತದಲ್ಲಿ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ.

ದೇಶದಲ್ಲಿ ಸೋಂಕು ದೃಢಪಟ್ಟಿರುವ 30 ಪ್ರಕರಣಗಳಲ್ಲಿ 16 ಮಂದಿ ಇಟಲಿ ಪ್ರವಾಸಿಗರು ಸೇರಿದ್ದಾರೆ. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಕೇರಳದ ಮೂರು ಪ್ರಕರಣಗಳು ಇದರಲ್ಲಿ ಸೇರಿವೆ.

ಮಾರ್ಚ್‌ ಅಂತ್ಯದವರೆಗೆ ಶಾಲೆ ರಜೆ: ಸೋಂಕು ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಮಾರ್ಚ್‌ 31ರವರೆಗೆ ದೆಹಲಿಯ ಎಲ್ಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಪ ಮುಖಮಂತ್ರಿ ಮನೀಶ್‌ ಸಿಸೋಡಿಯ ಪ್ರಕಟಿಸಿದ್ದಾರೆ.

ಬಯೊಮೆಟ್ರಿಕ್‌ ಬೇಡ: ಈ ಮಧ್ಯೆ, ಸೋಂಕು ಹಬ್ಬುವುದನ್ನು ತಡೆಯುವ ಕ್ರಮವಾಗಿ ಬಯೊಮೆಟ್ರಿಕ್‌ ಹಾಜರಾತಿ ದಾಖಲು ಪದ್ಧತಿಯನ್ನು ಸದ್ಯಕ್ಕೆ ಕೈಬಿಡಬೇಕು ಎಂದು ದೆಹಲಿ ಸರ್ಕಾರ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಿದೆ.

ಬ್ರಿಟನ್‌ನಲ್ಲಿ ಸಾವು: ಕೋವಿಡ್‌–19 ಸೋಂಕಿನಿಂದ ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಸೋಂಕಿನಿಂದ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ.

ಶೃಂಗಸಭೆ ಮುಂದೂಡಿಕೆ
ಮಾಸಾಂತ್ಯಕ್ಕೆ ನಡೆಯಬೇಕಿದ್ದ ಭಾರತ ಮತ್ತು ಐರೋಪ್ಯ ಒಕ್ಕೂಟದ ಶೃಂಗಸಭೆಯನ್ನು ಕೋವಿಡ್‌–19 ಸೋಂಕು ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿದೆ. ಆರೋಗ್ಯ ಇಲಾಖೆಯ ಸಲಹೆ ಹಿನ್ನೆಲೆಯಲ್ಲಿ ಬ್ರಸೆಲ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕಾರ್ಯಕ್ರಮದಲ್ಲಿ ಬದಲಾವಣೆ ತರಲಾಗಿದೆ ಎಂದು ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದರು.

ಮಾಸ್ಕ್‌ಗೆ ದುಬಾರಿ ಬೆಲೆ: ದಂಡ
ಬೆಳಗಾವಿ: ಕೋವಿಡ್‌–19 ಸೋಂಕು ಕುರಿತು ಜನರಲ್ಲಿ ಇರುವ ಆತಂಕದ ಲಾಭ ಪಡೆದುಕೊಳ್ಳುತ್ತಿರುವ ಔಷಧಿ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಗುರುವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ, ಮಾಸ್ಕ್‌ಗಳನ್ನು ಮನಬಂದ ಬೆಲೆಗೆ ಮಾರುತ್ತಿದ್ದ 35 ಔಷಧ ಅಂಗಡಿಗಳಿಗೆ ತಲಾ ₹ 20 ಸಾವಿರದಂತೆ ₹ 6.50 ಲಕ್ಷ ದಂಡ ವಿಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು