ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸು ತಾಯಿ: ನಿನ್ನ ಮಗನ ಸಾವಿನಿಂದಲೂ ಪಾಠ ಕಲಿಯುವ ಪುರುಸೊತ್ತು ಇವರಿಗಿಲ್ಲ

Last Updated 29 ಅಕ್ಟೋಬರ್ 2019, 10:26 IST
ಅಕ್ಷರ ಗಾತ್ರ

‘ನಾವು ಅಂತರಿಕ್ಷಕ್ಕೆ ಹಾರಿ ಗ್ರಹಗಳನ್ನು ಮುಟ್ಟಬಲ್ಲೆವು, ಆದರೆ ಭೂಮಿಯೊಳಗೆ ಬಿದ್ದ ಕಂದಮ್ಮಗಳನ್ನು ಕಾಪಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಏಕೆ ಸಾಧ್ಯವಾಗಿಲ್ಲ?ಸಾಕಷ್ಟು ಯುವಕರು ಸ್ವಂತ ಆಸಕ್ತಿಯಿಂದ ಕೊಳವೆಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲುಉಪಕರಣರೂಪಿಸಿದ್ದಾರೆ. ಆದರೆ ನಮ್ಮ ಸರ್ಕಾರಿ ವಿಜ್ಞಾನಿಗಳು–ತಂತ್ರಜ್ಞರಿಗೆಏಕೆ ಅವನ್ನು ಪರಿಶೀಲಿಸಿ, ಬಳಕೆಗೆಶಿಫಾರಸು ಮಾಡಲು ಸಾಧ್ಯವಾಗಿಲ್ಲ?’

– ತಿರುಚನಾಪಳ್ಳಿ ಸಮೀಪಕೊಳವೆಬಾವಿಗೆ ಬಿದ್ದು ಜೀವ ತೆತ್ತ ಕಂದಮ್ಮ ಸುಜಿತ್‌ ವಿಲ್ಸನ್‌ ಸಾವಿಗೆ ಕಣ್ಣೀರಿಡುತ್ತಿರುವ ಭಾರತೀಯರು ಕೇಳುತ್ತಿರುವ ಪ್ರಶ್ನೆಗಳಿವು. ಬೇಸರದ ಸಂಗತಿಯೆಂದರೆ ಇದೇ ಪ್ರಶ್ನೆಗಳನ್ನು ಎರಡು ವರ್ಷಗಳ ಹಿಂದಷ್ಟೇ ತೆರೆಕಂಡಿದ್ದ ಸದಭಿರುಚಿಯ ತಮಿಳು ಚಿತ್ರ ‘ಅರ‍್ರಂ’ ಕೂಡ ಕೇಳಿತ್ತು.

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಸುಜಿತ್‌ ವಿಲ್ಸನ್‌ ಉಳಿಯುವ ಸಾಧ್ಯತೆ ಹೆಚ್ಚುತ್ತಿತ್ತು. ಆದರೆ ಅಲ್ಲಿನ ಜಿಲ್ಲಾಡಳಿತ ಎಲ್ಲವೂ ಮುಗಿದ ಮೇಲೆ, ತನ್ನದಲ್ಲದ ತಪ್ಪಿಗೆ ಹಸುಗೂಸೊಂದು ಬಲಿಯಾದ ಮೇಲೆ ಹಾಳುಬಿದ್ದಿದ್ದ ಕೊಳವೆಬಾವಿಗೆ ಸಿಮೆಂಟ್ ಗಸಿ ಸುರಿದು ಸೀಲ್ ಮಾಡಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತಿದೆ.

ತಮಿಳುನಾಡು ರಾಜ್ಯವೊಂದರಲ್ಲಿಯೇಈಚಿನವರ್ಷಗಳಲ್ಲಿ ಕನಿಷ್ಠ 10 ಮಕ್ಕಳು ಹಾಳುಬಿದ್ದ ಕೊಳವೆಬಾವಿಗಳಿಗೆ ಬಿದ್ದು ಜೀವ ತೆತ್ತಿದ್ದಾರೆ. ಇಂಥ ಸಂದರ್ಭವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಕ್ರಮಬದ್ಧವಾಗಿರುವ ಒಂದು ಮಾರ್ಗದರ್ಶಿ ಕೈಪಿಡಿ(standard operating procedure) ಈವರೆಗೆ ರೂಪುಗೊಂಡಿಲ್ಲ. ಸ್ಥಳೀಯ ಆಡಳಿತಗಳು ತಮಗೆ ಸರಿಕಂಡಂತೆ ಅಡ್ಡಾದಿಡ್ಡಿಯಾಗಿ ಕಾರ್ಯಾಚರಣೆಯನ್ನು ಸಂಘಟಿಸುತ್ತಿವೆ.

ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳನ್ನು ಕಾಪಾಡುವ, ಅವರ ಸ್ಥಿತಿಯನ್ನು ಮೇಲಿರುವ ರಕ್ಷಣಾ ಕಾರ್ಯಕರ್ತರಿಗೆ ಕಾಣಿಸುವ ರೊಬೊಟಿಕ್ ರಕ್ಷಣಾ ಉಪಕರಣಗಳನ್ನುಕೆಲ ಉತ್ಸಾಹಿ ತಂತ್ರಜ್ಞರು ರೂಪಿಸಿದ್ದಾರೆ. ಕೆಲಸ್ವಯಂ ಸೇವಾ ಸಂಸ್ಥೆಗಳು ಸಲಹಾತ್ಮಕ ಕಾರ್ಯತಂತ್ರಗಳನ್ನುಶಿಫಾರಸು ಮಾಡಿವೆ. ಆದರೆ ಇಂಥ ಉಪಕರಣಗಳಾಗಲೀ, ಕಾರ್ಯತಂತ್ರಗಳಾಗಲೀ ಈವರೆಗೆ ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಟ್ಟಿಲ್ಲ. ಇನ್ನಾದರೂಅವುಗಳ ಕಾರ್ಯಕ್ಷಮತೆ ಪರಿಶೀಲಿಸಿ, ತಮ್ಮ ಅಗತ್ಯಕ್ಕೆ ತಕ್ಕಂಥ ಮಾರ್ಗದರ್ಶಿ ಕೈಪಿಡಿ ಸಿದ್ಧಪಡಿಸಲು ಎಲ್ಲ ರಾಜ್ಯ ಸರ್ಕಾರಗಳೂ ಮುಂದಾಗಬೇಕಿವೆ.

ಚಂದ್ರಯಾನದಂಥ ಸಂಕೀರ್ಣ ಯೋಜನೆರೂಪಿಸಿದ ನಮಗೆ ಭೂಮಿಯೊಳಗೆ ಸಿಲುಕುವ ಮಕ್ಕಳನ್ನು ಕಾಪಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಈವರೆಗೆ ಸಾಧ್ಯವಾಗಿಲ್ಲ. ಇದೆಂಥಾ ದುರಂತ? ಇನ್ನಾದರೂ ಒಂದು ಮಾರ್ಗದರ್ಶಿ ಕೈಪಿಡಿ ರೂಪಿಸುವ ಮೂಲಕ ಭವಿಷ್ಯದಲ್ಲಿ ಇಂಥ ಪ್ರಸಂಗಗಳನ್ನು ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ.

ಸುಜಿತ್ ವಿಲ್ಸನ್
ಸುಜಿತ್ ವಿಲ್ಸನ್

ಗಡ್ಡಕ್ಕೆ ಬೆಂಕಿ ಬಿದ್ದಾಗ...

ಸುಜಿತ್ ಹಾಳುಕೊಳವೆಬಾವಿಗೆ ಬಿದ್ದದ್ದು ಶುಕ್ರವಾರ ಸಂಜೆ 5.45ರ ಸುಮಾರಿಗೆ. ಕೊಳವೆಬಾವಿಯಲ್ಲಿ 26 ಅಡಿ ಆಳದಲ್ಲಿ ಮಗು ಪತ್ತೆಯಾಯಿತು.ತಮಿಳುನಾಡಿನ ಮಧುರೈ, ಕೊಯಮತ್ತೂರು ಮತ್ತು ತಿರುನಲ್ವೇಲಿಯಿಂದ ರೊಬೊಟಿಕ್ ರಕ್ಷಣಾ ಸಾಧನಗಳನ್ನು ತಂದಿದ್ದ ಹಲವು ಸ್ವಯಂ ಸೇವಕ ಪಡೆಗಳು ಮಗುವನ್ನು ರಕ್ಷಿಸಲು ಯತ್ನಿಸಿದವು. ಮಗುವಿನ ಕೈಗೆ ಹಗ್ಗ ಕಟ್ಟಿ ಮೇಲೆತ್ತಲು ಪ್ರಯತ್ನ ಮಾಡಿದ್ದವು. ಆದರೆ ಹಗ್ಗ ಕಳಚಿ ಮಗು ಕೊಳವೆಬಾವಿಯಲ್ಲಿ88 ಅಡಿಗಳಷ್ಟು ಕೆಳಗೆ ಜಾರಿತು.

ಈವರೆಗೆ ಎಂದೂ ಯಶಸ್ವಿ ಪ್ರಯೋಗ ನಡೆಯದ ಉಪಕರಣಗಳು ಮತ್ತುತಂತ್ರಗಳ ಪರಿಶೀಲನೆಗೆ ಸುಜಿತ್‌ ಬಳಕೆಯಾದ. ಇನ್ನೊಂದು ಅರ್ಥದಲ್ಲಿ ಅವರಿವರ ಪ್ರಯೋಗಗಳಿಗೆ ಬಲಿಪಶುವಾದ. ತಮಿಳುನಾಡು ಸರ್ಕಾರ, ಅದರಡಿಯಲ್ಲಿರುವ ಇಲಾಖೆಗಳು, ತಂತ್ರಜ್ಞರು ಇಂಥ ಉಪಕರಣಗಳು ಮತ್ತು ತಂತ್ರಗಳನ್ನು ಮೊದಲೇ ಪರಿಶೀಲಿಸಿದ್ದರೆ ಸುಜಿತ್‌ನನ್ನು ಕಾಪಾಡುವ ಸಾಧ್ಯತೆಗಳು ಖಂಡಿತ ಇತ್ತು.

ತುಸು ಯೋಚಿಸಬೇಕಿತ್ತು...

ಈ ವಿಫಲ ಯತ್ನಗಳ ನಂತರವಷ್ಟೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿಗೆ ಬುಲಾವ್ ಕಳಿಸಲಾಯಿತು. ದೊಡ್ಡದೊಂದು ಕೊಳವೆಬಾವಿಯನ್ನು ಅದರ ಪಕ್ಕ ಕೊರೆಯುವ ನಿರ್ಧಾರವನ್ನು ಜಿಲ್ಲಾಡಳಿತಭಾನುವಾರ ತೆಗೆದುಕೊಂಡಿತು. ಅಂದೇ ಕೊಳವೆಬಾವಿ ಕೊರೆಯುವ ಕೆಲಸವೂ ಆರಂಭವಾಯಿತು.

ಇಂಥ ಸಂದರ್ಭಗಳಲ್ಲಿ ವಾಸ್ತವವನ್ನು ಕ್ಷಿಪ್ರವಾಗಿ ಗ್ರಹಿಸುವ, ಅಂದಾಜಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಣಿತ ತಂಡಗಳು ಜಿಲ್ಲಾಮಟ್ಟದಲ್ಲಿ ಇರಬೇಕು.ಕೆಲ ಸ್ವಯಂಸೇವಾ ಸಂಸ್ಥೆಗಳು, ಅಗ್ನಿಶಾಮಕ ದಳ, ಸುರಕ್ಷತಾ ಅಧಿಕಾರಿಗಳು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಗಳ ಸಿಬ್ಬಂದಿ ಸುಜಿತ್ ಕಾಪಾಡಲು ಹಗಲಿರುಳು ಶ್ರಮಿಸಿದ್ದು ನಿಜ. ಆದರೆಮಗು ಕೊಳವೆಬಾವಿಗೆ ಜಾರಿದ ಅರಂಭದ ಅಮೂಲ್ಯ ಅವಧಿಯಲ್ಲಿಸರ್ಕಾರ ಪ್ರಯೋಗಗಳನ್ನು ನಡೆಸಲು ಅವಕಾಶ ಮಾಡಿಕೊಡದೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯಾಚರಣೆ ಆರಂಭಿಸಬೇಕಿತ್ತು.

ಸುಜಿತ್‌ ರಕ್ಷಣಾ ಕಾರ್ಯಾಚರಣೆ
ಸುಜಿತ್‌ ರಕ್ಷಣಾ ಕಾರ್ಯಾಚರಣೆ

‘ಸರ್ಕಾರಿ ಅಧಿಕಾರಿಗಳಲ್ಲಿವೈಜ್ಞಾನಿಕ ದೃಷ್ಟಿಕೋನಕ್ಕಿಂತ ಭಾವುಕತೆಯೇ ಹೆಚ್ಚಿತ್ತು. ಸರ್ಕಾರ ಪರಿಶ್ರಮ ಹಾಕುವುದರಲ್ಲಿ ಮೋಸ ಮಾಡಲಿಲ್ಲ. ಆದರೆ ಸರಿಯಾಗಿ ಪ್ಲಾನ್ ಮಾಡಿಕೊಂಡಿದ್ದರೆ ಆ ಹುಡುಗ ಇನ್ನಷ್ಟು ಆಳಕ್ಕೆ ಬೀಳದಂತೆ ತಡೆಯಬಹುದಿತ್ತು’ ಎಂದು ದಿವಂಗತ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಸಲಹೆಗಾರರಾಗಿದ್ದ ಪೊನ್ನುರಾಜ್ ಹೇಳಿದರು. ಅವರ ಹೇಳಿಕೆಯನ್ನು ಎನ್‌ಡಿಟಿವಿ ಜಾಲತಾಣ ವರದಿ ಮಾಡಿದೆ.

ಬದ್ಧತೆಬಗ್ಗೆ ತಕರಾರಿಲ್ಲ

ತಮಿಳುನಾಡಿನ ಆರೋಗ್ಯ ಸಚಿವ ಡಾ.ವಿಜಯಭಾಸ್ಕರ್ ಸೇರಿದಂತೆ ಒಟ್ಟು ಮೂವರು ಸಚಿವರು ಘಟನಾ ಸ್ಥಳದಲ್ಲಿ ಮೊದಲ ದಿನದಿಂದ ಉಪಸ್ಥಿತರಿದ್ದರು. ರಕ್ಷಣಾ ಕಾರ್ಯಾಚರಣೆಗಳ ನಿಗಾ ವಹಿಸುತ್ತಿದ್ದ ಅವರು ದೀಪಾವಳಿ ಹಬ್ಬವನ್ನೇ ಮರೆತಿದ್ದರು. ಸಚಿವರ ಬದ್ಧತೆಯ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದರು.

ಆದರೆ ರಕ್ಷಣಾ ಕಾರ್ಯಚರಣೆಯ ಪ್ರತಿ ಹಂತವನ್ನೂ, ಪ್ರತಿ ಕ್ಷಣವನ್ನೂ ಟಿವಿಗಳಲ್ಲಿ ಪ್ರಸಾರವಾಗುವಂತೆ ಇವರೇ ನೋಡಿಕೊಂಡರು ಎನ್ನುವ ಟೀಕೆಗಳೂ ಈಗ ಕೇಳಿಬರುತ್ತಿವೆ. ‘ನಾವು ನಮ್ಮ ಕೈಲಾದ ಎಲ್ಲವನ್ನೂ ಮಾಡಿದ್ದೇವೆ’ ಎಂದು ರಾಜ್ಯ ಸರ್ಕಾರ ಹೇಳಿದೆ. ‘ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಬಳಸಿದೆವು’ ಎಂದು ಉಪ ಮುಖ್ಯಮಂತ್ರಿ ಓ.ಪನ್ನೀರಸೆಲ್ವಂ ಹೇಳಿದರು.

‘ಎಲ್ಲರಿಂದಲೂ ನಾವು ಸಲಹೆಗಳನ್ನು ಸ್ವೀಕರಿದೆವು. ಆದರೆ ಸಂಯೋಜಿತ ರೀತಿಯಲ್ಲಿ ಕಾರ್ಯಾಚರಣೆ ನಡೆಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಒನ್‌ಜಿಸಿ, ಎನ್‌ಎಲ್‌ಸಿ ಸೇರಿದಂತೆ ಹಲವು ಸರ್ಕಾರಿ, ಸರ್ಕಾರೇತರ ಮತ್ತು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.

‘ಮಗುವನ್ನು ಕಾಪಾಡಲು ನಮ್ಮ ಸರ್ಕಾರ ಎಲ್ಲವನ್ನೂ ಮಾಡಿದೆ’ ಎಂದೇ ತಮಿಳುನಾಡಿನ ಜನರೂ ಹೇಳುತ್ತಿದ್ದಾರೆ. ಅಲ್ಲಿನ ಆಡಳಿತ ಯಂತ್ರದ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನುವುದು ಇದೇ ಸರ್ಕಾರದ ಲೋಪವಲ್ಲವೇ?

ಜವಾಬ್ದಾರಿ ಮರೆತ ಮಾಧ್ಯಮಗಳು

ಶುಕ್ರವಾರ ಸಂಜೆಯಿಂದಲೂ ರಕ್ಷಣಾ ಕಾರ್ಯಾಚರಣೆಯ ಲೈವ್ ವರದಿ ನೀಡಿದ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ. ಕೆಲ ಚಾನೆಲ್‌ಗಳು ಕೊಳವೆಬಾವಿಯಲ್ಲಿ ಸಿಲುಕಿದ ಮಗುವಿನ ಕೈಗಳಿರುವದೃಶ್ಯಾವಳಿಗಳನ್ನು ಪ್ರಸಾರ ಮಾಡಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

‘ಮಗು ಕೊಳವೆಬಾವಿಗೆ ಬಿದ್ದಸ್ಥಳದ ಸನಿಹಕ್ಕೆಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಬೇಕಿತ್ತು. ಅಧಿಕಾರಿಗಳು ಪ್ರತಿದಿನ ಒಂದು ನಿರ್ದಿಷ್ಟ ಸ್ಥಳದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಬೇಕಿತ್ತು’ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದರು.

ತಾಯಿಯೊಂದಿಗೆ ಸುಜಿತ್ ವಿಲ್ಸನ್
ತಾಯಿಯೊಂದಿಗೆ ಸುಜಿತ್ ವಿಲ್ಸನ್

ಮಗನಿಗಾಗಿ ಬುಟ್ಟಿ ಹೆಣೆಯುತ್ತಿದ್ದ ತಾಯಿ

ಮಗು ಬದುಕಿ ಬರುತ್ತೆ ಎಂದು ಕೊನೆಯ ಕ್ಷಣದವರೆಗೂ ಕಾತರದಿಂದ ನಿರೀಕ್ಷಿಸಿದ್ದವರು ತಾಯಿ. ಶುಕ್ರವಾರ ಸಂಜೆ ಮಗುವಿನ ಜೊತೆಗೆ ಮಾತನಾಡಿ ಧೈರ್ಯ ತುಂಬಿದ್ದ ಅವರು, ಅಂದು ರಾತ್ರಿಯೇ ಒಂದು ವೈರ್‌ ಬುಟ್ಟಿ ಹೆಣೆಯಲು ಶುರು ಮಾಡಿದ್ದರು. ‘ಕೊಳವೆಬಾವಿಯಿಂದ ನನ್ನ ಮಗನನ್ನು ಮೇಲೆತ್ತಿ ತರಲು ಇದು ನೆರವಾಗುತ್ತೆ’ ಎನ್ನುವುದು ಅವರ ಆಸೆಯಾಗಿತ್ತು. ಆದರೆ ಅದು ಈಡೇರಲಿಲ್ಲ ಎನ್ನುವುದೇ ದುರಂತ.

ಇನ್ನಾದರೂ ಪಾಠ ಕಲಿಯೋಣ

ನೀರು ಬಾರದ ಕೊಳವೆಬಾವಿಗಳನ್ನು ತಕ್ಷಣ ಮುಚ್ಚಬೇಕು ಅಥವಾ ಅದರ ಮೇಲೆ ಬಿರಡೆ ಬಿಗಿಸಬೇಕು. ಹೀಗೆ ಮಾಡದವರ ವಿರುದ್ಧ ಶಿಸ್ತುಕ್ರಮ ಕರುಗಿಸಬೇಕು.ಕೊಳವೆಬಾವಿಗಳಲ್ಲಿ ಬಿದ್ದ ಮಕ್ಕಳನ್ನು ಮೇಲಕ್ಕೆ ಎತ್ತುವ ತಂತ್ರಜ್ಞಾನ ಮತ್ತು ಮಾರ್ಗದರ್ಶಿ ಕೈಪಿಡಿ ತಕ್ಷಣ ರೂಪುಗೊಳ್ಳಬೇಕು ಎಂದು ಒತ್ತಾಯಿಸಿದ್ದಚಿತ್ರ‘ಆರ‍್ರಂ’.

ಕನಿಷ್ಠ ಪಕ್ಷ ಈ ಚಿತ್ರ ತೆರೆ ಕಂಡ ಮೇಲಾದರೂ ತಮಿಳುನಾಡಿನಲ್ಲಿ ಅಂಥದ್ದೊಂದು ಸಂಚಲನ ಮೂಡಿದ್ದರೆ ಇಂದು ಸುಜಿತ್ ಬಲಿಯಾಗುತ್ತಿರಲಿಲ್ಲ. ಇನ್ನಾದರೂ ನಮ್ಮ ಸರ್ಕಾರಗಳು ಇತ್ತ ಗಮನ ಹರಿಸಿದರೆ ಭವಿಷ್ಯದಲ್ಲಿ ಮುದ್ದು ಕಂದಮ್ಮಗಳನ್ನು ಹಾಳು ಕೊಳವೆಬಾವಿಗಳು ಬಲಿ ತೆಗೆದುಕೊಳ್ಳದಂತೆ ಕಾಪಾಡಬಹುದು.

ಕರ್ನಾಟಕದಲ್ಲಿಯೂ ದುರಂತಗಳಾಗಿವೆ

ಕರ್ನಾಟಕದಲ್ಲಿಯೂ ಅಥಣಿ ತಾಲ್ಲೂಕು ಝುಂಜರವಾಡದ ಬಳಿ ಏಪ್ರಿಲ್ 2017ರಲ್ಲಿ ಮುಚ್ಚದೆ ಬಿಟ್ಟಿದ್ದ ಕೊಳವೆಬಾವಿಯೊಳಗೆ ಮುಗ್ಧ ಬಾಲಕಿ ಬಿದ್ದಿದ್ದಳು.6 ವರ್ಷದ ಕಾವೇರಿಯನ್ನು ಮೇಲೆತ್ತಲು ನುರಿತ ನೂರಾರು ಪರಿಣತರು ಆಧುನಿಕ ಯಂತ್ರೋಪಕರಣ, ಕೌಶಲ ಬಳಸಿ 42 ತಾಸಿಗೂ ಹೆಚ್ಚು ಕಾಲದ ಕಾರ್ಯಾಚರಣೆ ನಡೆಸಿದರು.ಇಂತಹ ಹೃದಯವಿದ್ರಾವಕ ದುರಂತ ಇಲ್ಲಿಗೇ ಕೊನೆಗೊಳ್ಳಬೇಕು. ಮುಂದೆ ಯಾವ ಮಗುವೂ ಕೊಳವೆಬಾವಿಗೆ ಬೀಳುವಂತಾಗಬಾರದು ಎಂಬುದುಎಲ್ಲರ ಪ್ರಾರ್ಥನೆಯಾಗಿತ್ತು. ಆದರೆ ಕಾವೇರಿ ಉಳಿಯಲಿಲ್ಲ.

ನಮ್ಮ ರಾಜ್ಯದಲ್ಲಿ ಇಂತಹ ಮೊದಲ ದುರಂತ ನಡೆದದ್ದು ಸುಮಾರು 19 ವರ್ಷಗಳ ಹಿಂದೆ, ದಾವಣಗೆರೆಯಲ್ಲಿ. ಅಲ್ಲಿಯೂ, ಕರಿಯ ಎಂಬ ಬಾಲಕ ಆಟವಾಡುತ್ತ ಹೋಗಿ ಕೊಳವೆಬಾವಿಗೆ ಬಿದ್ದಿದ್ದ. ಎರಡು ದಿನಗಳ ರಕ್ಷಣಾ ಕಾರ್ಯ ವಿಫಲಗೊಂಡು ಶವವಾಗಿ ಸಿಕ್ಕಿದ್ದ.2014ರಲ್ಲಿ ನಮ್ಮ ರಾಜ್ಯದಲ್ಲಿಯೇ ಬರೀ ಎರಡು ತಿಂಗಳ ಅವಧಿಯಲ್ಲಿ ಎರಡು ಮಕ್ಕಳು ಕೊಳವೆಬಾವಿಯಲ್ಲಿ ಬಿದ್ದು ಅಸು ನೀಗಿದ್ದರು.

ಆದರೆ ಅದರಿಂದ ಅಧಿಕಾರಶಾಹಿಯಾಗಲಿ, ಸಾರ್ವಜನಿಕರಾಗಲಿ ಎಳ್ಳಷ್ಟೂ ಪಾಠ ಕಲಿತಿಲ್ಲ.ಪ್ರತೀ ಸಲ ಇಂತಹ ದುರಂತ ನಡೆದಾಗಲೂ ಸರ್ಕಾರ ಏಕಾಏಕಿ ಕ್ರಿಯಾಶೀಲವಾಗುತ್ತದೆ. ಅನುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಿಸುವ ಫರ್ಮಾನ್‌ ಹೊರಡಿಸುತ್ತದೆ. ಅದಕ್ಕೊಂದು ಗಡುವನ್ನೂ ನಿಗದಿಪಡಿಸುತ್ತದೆ. ಅಧಿಕಾರಿಗಳ ಸಮಿತಿ ರಚಿಸುತ್ತದೆ. ‘ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ ಅಧಿಕಾರಿಗಳೇ ಹೊಣೆ’ ಎಂದು ಗುಡುಗುತ್ತದೆ. ಕೆಲವೇ ದಿನ ಕಳೆಯುವಷ್ಟರಲ್ಲಿ ಜನರಿಗೂ ಅದು ಮರೆತು ಹೋಗುತ್ತದೆ, ತೂಕಡಿಸುವ ಅಧಿಕಾರಶಾಹಿಗೂ ಮರೆತು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT