ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್‌ ಜಾಗತಿಕ ಶ್ರೇಷ್ಠ ಕಲಾವಿದ

ವರನಟನ ಜನ್ಮದಿನಾಚರಣೆಯಲ್ಲಿ ಸಾಹಿತಿ ಬಸವರಾಜ ಜಗಜಂಪಿ ಅಭಿಮತ
Last Updated 25 ಏಪ್ರಿಲ್ 2018, 7:02 IST
ಅಕ್ಷರ ಗಾತ್ರ

ಬೆಳಗಾವಿ: ‘ವರನಟ ರಾಜ್‌ಕುಮಾರ್‌ ಅವರು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದ ಜಾಗತಿಕ ಮಟ್ಟದ ಶ್ರೇಷ್ಠ ಕಲಾವಿದರಾಗಿದ್ದಾರೆ’ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್‌ಕುಮಾರ್‌ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರು ಎಲ್ಲ ಪಾತ್ರಗಳಿಗೂ ಹೇಳಿ ಮಾಡಿಸಿದ ನಟರಾಗಿದ್ದರು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಹಂ ಇರಲಿಲ್ಲ. ಸರಳತೆ ಹಾಗೂ ವಿನಯ ಮೈಗೂಡಿಸಿಕೊಂಡಿದ್ದರು’ ಎಂದು ಸ್ಮರಿಸಿದರು.

‘ಕನ್ನಡ ಚಲನಚಿತ್ರ ರಂಗದ ದಂತಕತೆಯಾಗಿ ಅನೇಕ ದಶಕಗಳ ಕಾಲ ನೂರಾರು ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದರು. ವರಕವಿ ಎಂದರೆ ದ.ರಾ. ಬೇಂದ್ರೆ ನೆನಪಾಗುತ್ತಾರೆ. ಅದೇ ರೀತಿ ವರನಟ ಎಂದರೆ ರಾಜ್‌ಕುಮಾರ್‌ ನೆನಪಾಗುತ್ತಾರೆ. ಅವರು ಕನ್ನಡ ಚಲಚಿತ್ರಗಳಲ್ಲಿ ಮಾತ್ರವೇ ನಟಿಸಿರುವುದು ಇತಿಹಾಸ. ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರ ಹೆಸರಿನಲ್ಲಿ 4500ಕ್ಕೂ ಹೆಚ್ಚು ಅಭಿಮಾನಿ ಸಂಘಗಳು ಹುಟ್ಟಿಕೊಂಡಿರುವುದು ವಿಶೇಷವಾದುದು’ ಎಂದು ತಿಳಿಸಿದರು.

ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಅವಿನಾಶ ಪೋತದಾರ, ‘ಕನ್ನಡ ಚಲಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ರಾಜ್‌ಕುಮಾರ್‌ ಅವರಿಗೆ ಸಲ್ಲುತ್ತದೆ. ಶ್ರೇಷ್ಠ ನಟರಷ್ಟೇ ಅಲ್ಲದೇ ಮಹಾಮಾನವತಾವಾದಿಯೂ ಆಗಿದ್ದರು. ಅವರ ಚಲನಚಿತ್ರ ಹಾಗೂ ಗೀತೆಗಳು ಇಂದಿಗೂ ಜನರ ಮನದಲ್ಲಿವೆ. ನೂರು ವರ್ಷಕ್ಕೊಮ್ಮೆ ಮಾತ್ರ ಅವರಂತಹ ಮಹಾನ್‌ ವ್ಯಕ್ತಿ ಜನಿಸಲು ಸಾಧ್ಯ’ ಎಂದರು.

‘ನಮ್ಮ ಕುಟುಂಬದ ಮಾಲೀಕತ್ವದ ನರ್ತಕಿ ಚಿತ್ರಮಂದಿರ ಪ್ರಾರಂಭಿಸಿದಾಗ 5 ವರ್ಷಗಳವರೆಗೆ ರಾಜ್‌ಕುಮಾರ್‌ ಅವರ ಚಲನಚಿತ್ರಗಳನ್ನೇ ಪ್ರದರ್ಶಿಸಲಾಗಿತ್ತು. ಅವರ ಚಲನಚಿತ್ರಗಳು ನಗರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಶೀಘ್ರವೇ ಒಂದು ವಾರದವರೆಗೆ ಅವರ ಚಲನಚಿತ್ರೋತ್ಸವ ಏರ್ಪಡಿಸಲಾಗುವುದು’ ಎಂದು ಪ್ರಕಟಿಸಿದರು.

ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ‘ನಾಯಕ ನಟನಾಗಿಯೇ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವ ಚಿತ್ರದಲ್ಲಿಯೂ ಅವರು ಧೂಮಪಾನ ಹಾಗೂ ಮದ್ಯಪಾನ ಸೇವಿಸುವ ಪಾತ್ರದಲ್ಲಿ ನಟಿಸಲಿಲ್ಲ ಎನ್ನುವುದು ವಿಶೇಷ. ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಅವರ ಉದ್ದೇಶವಾಗಿತ್ತು’ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಿರೀಷ ಜೋಶಿ ಸ್ವಾಗತಿಸಿದರು. ಅನಂತ ಪಪ್ಪು ನಿರೂಪಿಸಿದರು.

ಮಲ್ಹಾರಿ ಜೋಶಿ ಪ್ರದರ್ಶಿಸಿದ ಛಾಯಾಚಿತ್ರಗಳು ಗಮನಸೆಳೆದವು. ರಾಜ್‌ಕುಮಾರ್‌ ಅವರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಛಾಯಾಚಿತ್ರಗಳು ಆಕರ್ಷಿಸಿದವು.

ಸುರಭಿ ಕರೋಕೆ ಮೆಲೋಡಿಸ್ ತಂಡದವರು ರಾಜ್‌ಕುಮಾರ್‌ ಅವರ ಚಲನಚಿತ್ರಗಳ ಗೀತೆಗಳನ್ನು ಪಸ್ತುತಪಡಿಸಿದರು. ಹೊಸ ಬೆಳಕು ಮೂಡುತಿದೆ, ನಾವಾಡುವ ನುಡಿಯೇ ಕನ್ನಡ ನುಡಿ, ಎಲ್ಲೆಲ್ಲಿ ನೋಡಲಿ, ಬೆಳದಿಂಗಳಾಗಿ ಬಾ... ಹಾಡುಗಳನ್ನು ಹಾಡಿ ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT