ಸೋಮವಾರ, ಫೆಬ್ರವರಿ 17, 2020
17 °C

ಸಿಎಎ ವಿರೋಧಿ ಸಂಭಾಷಣೆ: ಪ್ರಯಾಣಿಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಊಬರ್ ಚಾಲಕ

ಪಿಟಿಐ Updated:

ಅಕ್ಷರ ಗಾತ್ರ : | |

Mumbai Bagh

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಫೋನ್‍ನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರೊಬ್ಬರನ್ನು ಊಬರ್ ಕ್ಯಾಬ್ ಚಾಲಕ  ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಬುಧವಾರ ರಾತ್ರಿ ನಡೆದಿದೆ.

ಕವಿ ಬಪ್ಪಡಿತ್ಯ ಸರ್ಕಾರ್ ಎಂಬವರನ್ನು ಊಬರ್ ಚಾಲಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಕಾರ್ಯದರ್ಶಿ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.

ಕವಿತಾ ಕೃಷ್ಣನ್ ಟ್ವೀಟ್ ಪ್ರಕಾರ ಸರ್ಕಾರ್ ಅವರು  ಬುಧವಾರ ರಾತ್ರಿ 10.30ಕ್ಕೆ ಜುಹುನಿಂದ ಕುರ್ಲಾ ಹೋಗಲು ಊಬರ್ ಕ್ಯಾಬ್  ಬುಕ್ ಮಾಡಿದ್ದರು. ಕ್ಯಾಬ್ ಪ್ರಯಾಣದ ವೇಳೆ ಅವರು ತಮ್ಮ ಸ್ನೇಹಿತನಲ್ಲಿ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಲಾಲ್ ಸಲಾಂ ಘೋಷಣೆ ಬಗ್ಗೆ ಜನರ ಅಸಹನೆ ಬಗ್ಗೆ ಮಾತನಾಡುತ್ತಿದ್ದರು.

ಇದನ್ನೆಲ್ಲ ಕ್ಯಾಬ್ ಚಾಲಕ ಕೇಳಿಸಿಕೊಳ್ಳುತ್ತಿದ್ದ. ಆಮೇಲೆ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲಿದೆ ಎಂದು ಹೇಳಿ ಕ್ಯಾಬ್ ನಿಲ್ಲಿಸಿದ್ದ. ಕ್ಯಾಬ್‌ನಿಂದ ಇಳಿದು ಹೋಗಿ ವಾಪಸ್ ಬರುವಾಗ ಆತನ ಜತೆ ಇಬ್ಬರು ಪೊಲೀಸರು ಇದ್ದರು. ನೀವು ದಫ್ಲಿ (ಸಂಗೀತ ವಾದ್ಯ)  ಯಾಕೆ ತೆಗೆದುಕೊಂಡು ಹೋಗುತ್ತಿದ್ದೀರಿ?  ನಿಮ್ಮ ವಿಳಾಸ ಏನು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಸರ್ಕಾರ್, ನಾನು ಜೈಪುರದವನು. ಮುಂಬೈ ಬಾಗ್‌ನಲ್ಲಿ ನಡೆಯುತ್ತಿರುವ ಸಿಎಎ  ವಿರೋಧಿ ಪ್ರತಿಭಟನೆಯನ್ನು ನೋಡಲು ಹೋಗಿದ್ದೆ ಎಂದಿದ್ದಾರೆ. 

ಇವರು ಕಮ್ಯೂನಿಸ್ಟ್,  ದೇಶವನ್ನು ಸುಟ್ಟು ಹಾಕುವ ಬಗ್ಗೆ ಅವರು ಮಾತನಾಡುತ್ತಿದ್ದರು. ಹಾಗಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಚಾಲಕ ಪೊಲೀಸರಿಗೆ ಒತ್ತಾಯಿಸಿದ್ದಾನೆ. ಮಾತ್ರವಲ್ಲದೆ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಇದೆ ಎಂದು ಹೇಳಿದ್ದಾನೆ.

ಸರ್ಕಾರ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆದರೆ ಯಾವ ಪೊಲೀಸ್ ಠಾಣೆ ಎಂಬುದು ಕವಿತಾ ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿಲ್ಲ

ಆದಾಗ್ಯೂ, ಚಾಲಕನ ಆರೋಪ ನಿರಾಧಾರ. ನನ್ನ ಸಂಭಾಷಣೆ ಕೇಳಿಸಿಕೊಳ್ಳಿ ಎಂದು  ಸರ್ಕಾರ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ನೀವು ಈ ದೇಶವನ್ನು ನಾಶ ಮಾಡುತ್ತಿದ್ದೀರಿ. ಇದನ್ನು ನಾವು ನೋಡುತ್ತಾ ಕುಳಿತಿರಬೇಕು ಎಂದು ನೀವು ಬಯಸುತ್ತೀರಾ? ಎಂದು ಚಾಲಕ ಕೇಳಿದ್ದಾನೆ. 

ನಿಮ್ಮ ವಿಚಾರಧಾರೆ ಏನು? ಯಾರ ಪುಸ್ತಕ ಓದುತ್ತೀರಿ ಎಂದು ಪೊಲೀಸರು ಸರ್ಕಾರ್ ಅವರಲ್ಲಿ ಕೇಳಿದ್ದಾರೆ. 
ಪೊಲೀಸರು ಶಾಂತರೀತಿಯಲ್ಲಿ ವರ್ತಿಸಿದ್ದು ಕ್ಯಾಬ್ ಚಾಲಕ ಮತ್ತು ಸರ್ಕಾರ್ ಅವರ ಮಾತನ್ನು  ಆಲಿಸಿ ದಾಖಲಿಸಿದ್ದಾರೆ.

ರಾತ್ರಿ ಸುಮಾರು 1 ಗಂಟೆ ವೇಳೆಗೆ ಕಮ್ಯೂನಿಸ್ಟ್ ಕಾರ್ಯಕರ್ತ ಎಸ್. ಗೋಹಿಲ್ ಅವರು  ಬಂದಾಗ ಸರ್ಕಾರ್ ಅವರನ್ನು ಪೊಲೀಸ್ ಠಾಣೆಯಿಂದ ಕಳುಹಿಸಿಕೊಡಲಾಗಿದೆ. 

ಪರಿಸ್ಥಿತಿ ಚೆನ್ನಾಗಿಲ್ಲ ಹಾಗಾಗಿ ದಫ್ಲಿಯನ್ನು ಕೊಂಡೊಯ್ಯುವುದಾಗಲೀ, ಕೆಂಪು ಸ್ಕಾರ್ಫ್ ತೊಡುವುದಾಗಲೀ ಮಾಡಬೇಡಿ ಎಂದು ಪೊಲೀಸರು ಸರ್ಕಾರ್‌ಗೆ ಸಲಹೆ ನೀಡಿದ್ದಾರೆ ಎಂದು ಕವಿತಾ ಟ್ವೀಟ್ ಮಾಡಿದ್ದಾರೆ. 

ಎನ್‌ಪಿಆರ್, ಎನ್‌ಆರ್‌ಸಿ ಮತ್ತು ಸಿಎಎ ಅಡಿಯಲ್ಲಿ ಭಾರತದಲ್ಲಿನ ಭಯದ ವಾತಾವರಣದ ಝಲಕ್ ಇದು. ಪ್ರತಿಯೊಬ್ಬರನ್ನು ಶಂಕಿಸಲಾಗುತ್ತದೆ ಮತ್ತು ಇದೇ ಶಂಕೆಯಿಂದ ಪೊಲೀಸರು ಎಲ್ಲರ ಮೇಲೂ ದೌರ್ಜನ್ಯವೆಸಗಬಹುದು ಎಂದು  ಟ್ವೀಟಿಸಿದ ಕವಿತಾ ಮುಂಬೈ ಪೊಲೀಸ್ ಮತ್ತು ಊಬರ್ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ. 

ಈ ಬಗ್ಗೆ ನಮಗೆ ನೇರ ಸಂದೇಶ ಕಳಿಸಿ ಎಂದು ಪೊಲೀಸರು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಊಬರ್ ಇಂಡಿಯಾ ಸಪೋರ್ಟ್ ಈ ಬಗ್ಗೆ ವಿಚಾರಿಸುವುದಾಗಿ ಹೇಳಿದ್ದು, ಆ ಪ್ರಯಾಣದ ಮಾಹಿತಿ ನೀಡಿ ಎಂದು ಪ್ರತಿಕ್ರಿಯಿಸಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು