ಶನಿವಾರ, ಡಿಸೆಂಬರ್ 14, 2019
24 °C

ಅಯೋಧ್ಯೆ: ಮರುವಿಮರ್ಶೆ ಅರ್ಜಿ ಸಲ್ಲಿಕೆಗೆ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮತ್ತು ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆ ಭಾನುವಾರ ನಿರ್ಧರಿಸಿವೆ.

ಮಸೀದಿಗಾಗಿ ಐದು ಎಕರೆ ಪರ್ಯಾಯ ಜಮೀನು ಪಡೆದುಕೊಳ್ಳುವುದಕ್ಕೆ ವಿರೋಧ ಇದೆ. ಮಸೀದಿಗೆ ಪರ್ಯಾಯ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ ಎಂಬುದು ಎಐಎಂಪಿಎಲ್‌ಬಿ ನಿಲುವು ಎಂದು ಮಂಡಳಿಯ ಕಾರ್ಯದರ್ಶಿ ಝಫರ್‌ಯಾಬ್‌ ಜಿಲಾನಿ ಹೇಳಿದ್ದಾರೆ. 

ವಕೀಲರು ಮತ್ತು ಪರಿಣತರ ಜತೆ ವ್ಯಾಪಕ ಸಮಾಲೋಚನೆ ನಡೆಸಿದ ಬಳಿಕ ಮರುಪರಿಶೀಲನೆ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಮೀಯತ್‌ ಉಲೇಮಾ ಎ ಹಿಂದ್‌ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ತಿಳಿಸಿದ್ದಾರೆ. 

ತೀರ್ಪು ಮುಸ್ಲಿಂ ಕಕ್ಷಿದಾರರ ವಿರುದ್ಧ ಬಂದಿದೆ. ಮರುಪರಿಶೀಲನೆಯ ಅವಕಾಶವನ್ನು ಸಂವಿಧಾನವು ನೀಡಿದೆ. ಹಾಗಾಗಿ, ಈಗಿನ ತೀರ್ಪು ಅಂತಿಮ ಅಲ್ಲ ಎಂದು ಮದನಿ ಹೇಳಿದ್ದಾರೆ. 

ವಿವಾದಾತ್ಮಕವಾಗಿದ್ದ 2.77 ಎಕರೆ ನಿವೇಶನವನ್ನು ರಾಮಲಲ್ಲಾ ಮೂರ್ತಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಇದೇ 9ರಂದು ತೀರ್ಪು ನೀಡಿತ್ತು. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಐದು ಎಕರೆ ಪರ್ಯಾಯ ಜಮೀನು ನೀಡುವಂತೆಯೂ ತೀರ್ಪಿನಲ್ಲಿ ಹೇಳಲಾಗಿದೆ. 

‘1949ರ ಡಿಸೆಂಬರ್‌ 23ರ ರಾತ್ರಿ ಬಾಬರಿ ಮಸೀದಿಯೊಳಗೆ ಶ್ರೀರಾಮನ ಮೂರ್ತಿ ಇರಿಸಿದ್ದು ಅಸಾಂವಿಧಾನಿಕ ಕೃತ್ಯ. ಹಾಗಿರುವಾಗ, ಆ ಮೂರ್ತಿ ‘ಆರಾಧನೆಗೆ ಅರ್ಹವಾದುದು’ ಎಂದು ಸುಪ್ರೀಂ ಕೋರ್ಟ್‌ ಹೇಗೆ ತೀರ್ಮಾನಿಸಿತು? ಮೂರ್ತಿಗಳು ಆರಾಧನೆಗೆ ಅರ್ಹ ಎಂದು ಹಿಂದೂ ಧರ್ಮವೂ ಹೇಳುವುದಿಲ್ಲ’ ಎಂದು ಜಿಲಾನಿ ಅಭಿಪ್ರಾಯಪಟ್ಟಿದ್ದಾರೆ. 

ಮರುಪರಿಶೀಲನೆ ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಫಲಿತಾಂಶ ಹೀಗೆಯೇ ಇರಲಿದೆ. ಅಲ್ಲದೆ, ಅರ್ಜಿ ಸಲ್ಲಿಸುವುದರಿಂದ ಸಾಮರಸ್ಯದ ವಾತಾವರಣ ಹದಗೆಡಬಹುದು ಎಂದು  ಅಯೋಧ್ಯೆ ಪ್ರಕರಣದ ಮುಖ್ಯ ಕಕ್ಷಿದಾರ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ.

ಮುಸ್ಲಿಮರ ಮಸೀದಿಯನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಹಾಗಾಗಿ, ಮಸೀದಿಗೆ ಪರ್ಯಾಯ ಜಮೀನನ್ನು ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜಮೀಯತ್‌ ಉಲೇಮಾ ಎ ಹಿಂದ್‌ ಮುಖ್ಯಸ್ಥ ಅರ್ಷದ್‌ ಮದನಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪು: ಗುಣಮಟ್ಟಕ್ಕೆ ನಿದರ್ಶನ

ಅಹಮದಾಬಾದ್‌: ಭಾರತದ ನ್ಯಾಯಾಂಗವು ನೀಡುವ ತೀರ್ಪುಗಳ ಗುಣಮಟ್ಟಕ್ಕೆ ಅಯೋಧ್ಯೆ ತೀರ್ಪು ನಿದರ್ಶನವಾಗಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಂ.ಆರ್‌. ಶಾ ಹೇಳಿದ್ದಾರೆ. 

‘ಅಯೋಧ್ಯೆ ತೀರ್ಪು ನೀಡಿದ ನ್ಯಾಯಮೂರ್ತಿಗಳು ಅದಕ್ಕಾಗಿ ಪಟ್ಟ ಕಠಿಣ ಶ್ರಮವನ್ನು ಊಹಿಸಲೂ ಸಾಧ್ಯವಿಲ್ಲ. ಸಾರ್ವಜನಿಕ ಮಹತ್ವದ ಪ್ರಕರಣವನ್ನು ಸತತ 40 ದಿನ ವಿಚಾರಣೆ ನಡೆಸಿ, ಸಮತೋಲನದ ತೀರ್ಪು ನೀಡುವುದು ಸುಲಭದ ಕೆಲಸವಲ್ಲ. ಅಷ್ಟು ಕಷ್ಟದಲ್ಲಿಯೂ ನ್ಯಾಯದಾನ ಆಗುವಂತೆ ನೋಡಿಕೊಳ್ಳಲು ಅತ್ಯುತ್ತಮ ಪ್ರಯತ್ನ ನಡೆಸಲಾಗಿದೆ’ ಎಂದು ನಿರ್ಮಾ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)