ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಮಾತು ಬಾನುಲಿ ಭಾಷಣ: ಬಡವರ ಕಷ್ಟಕ್ಕೆ ಮೋದಿ ಮರುಕ

ಲಾಕ್‌ಡೌನ್ ತೆರವಾದರೂ ಎಚ್ಚರ ಇರಲಿ
Last Updated 1 ಜೂನ್ 2020, 1:48 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ಸಡಿಲಿಕೆಯಾಗಿರುವ ಈ ಹೊತ್ತಿನಲ್ಲಿ ಜನರು ಇನ್ನೂ ಹೆಚ್ಚು ಜಾಗರೂಕರಾಗಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ.

‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಭಾನುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸಾರಿಗೆ ಸಂಚಾರ ಭಾಗಶಃ ಶುರುವಾಗಿದೆ. ಈ ಹೊತ್ತಿನಲ್ಲಿ ಜನರು ಕೋವಿಡ್ ವಿರುದ್ಧದ ಹೋರಾಟವನ್ನು ಕೈಬಿಡಬಾರದು ಎಂದು ಸಲಹೆ ನೀಡಿದ್ದಾರೆ.

ಈ ಬಿಕ್ಕಟ್ಟಿನಲ್ಲಿ ಬಡವರು ಹಾಗೂ ಕಾರ್ಮಿಕರು ಎದುರಿಸಿದ ಕಷ್ಟಗಳಿಗೆ ಅವರು ಕನಿಕರ ವ್ಯಕ್ತಪಡಿಸಿದ್ದಾರೆ.‘ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ಎದುರಾದ ಸಂಕಷ್ಟವನ್ನು ಪದಗಳಲ್ಲಿ ವಿವರಿಸಲಾಗದು. ಪ್ರಸ್ತುತ ಸನ್ನಿವೇಶವು ಹಿಂದಿನ ದಿನಗಳ ಕೈಗನ್ನಡಿಯಾಗಿದೆ. ಪರಾಮರ್ಶೆ ನಡೆಸಲು ಹಾಗೂ ಭವಿಷ್ಯವನ್ನು ರೂಪಿಸಲು ಈ ಸಮಯ ಅವಕಾಶ ಒದಗಿಸಿದೆ’ ಎಂದು ವಿವರಿಸಿದ್ದಾರೆ.

‘ಕೊರೊನಾ ವೈರಸನ್ನು ಸೋಲಿಸುವ ಹಾದಿ ದುರ್ಗಮ. ಇದೊಂದು ವಿಪತ್ತು. ಇಡೀ ಜಗತ್ತಿನಲ್ಲಿ ಪರಿಹಾರ ಇಲ್ಲದ ಸಂಕಷ್ಟವಿದು. ಇಂತಹ ಕಾಯಿಲೆ ಎರಗಿದ ಅನುಭವ ಇರಲಿಲ್ಲ. ಹೀಗಾಗಿ ಹೊಸ ಹೊಸ ಸವಾಲುಗಳು ಹಾಗೂ ಕಠಿಣ ಪರಿಸ್ಥಿತಿಗಳಿಗೆ ನಾವು ಇಂದು ಮುಖಾಮುಖಿಯಾಗಬೇಕಾಗಿ ಬಂದಿದೆ. ಎಲ್ಲ ದೇಶಗಳು ಇದರ ಪರಿಣಾಮಕ್ಕೆ ತುತ್ತಾಗಿರುವಾಗ ಭಾರತ ಇದರಿಂದ ಹೊರತಾಗಿಲ್ಲ’ ಎಂದು ಪ್ರಧಾನಿ ಹೇಳಿದ್ದಾರೆ.

ಕಾರ್ಮಿಕರ ಸಮಸ್ಯೆಗೆ ದನಿ
ಪೂರ್ವ ಭಾಗವು ದೇಶದ ಬೆಳವಣಿಗೆಯ ಎಂಜಿನ್ ಆಗುವ ಸಾಮರ್ಥ್ಯ ಹೊಂದಿದೆ. ಅದರ ಅಭಿವೃದ್ಧಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಮಾಡಿದ ಕೆಲಸ ತೃಪ್ತಿ ನೀಡಿದೆ. ಈಗ ವಲಸೆ ಕಾರ್ಮಿಕರನ್ನು ಮುಖ್ಯವಾಗಿ ಪರಿಗಣಿಸುವ ತುರ್ತು ಇದೆ. ಈ ದಿಕ್ಕಿನಲ್ಲಿ ಕ್ರಮಗಳು ಆರಂಭವಾಗಿವೆ’ ಎಂದು ಪ್ರಧಾನಿ ಹೇಳಿದರು.

ಮನದ ಮಾತಿನ ಮುಖ್ಯ ಅಂಶಗಳು

*ವಲಸೆ ಕಾರ್ಮಿಕ ಆಯೋಗ ಸ್ಥಾಪನೆಗೆ ಕುರಿತಂತೆ ಚರ್ಚೆ ನಡೆಯುತ್ತಿದೆ

*ಗ್ರಾಮೋದ್ಯೋಗ, ಸ್ವಉದ್ಯೋಗ ಹಾಗೂ ಸಣ್ಣ ಉದ್ಯಮಗಳ ವ್ಯಾಪಕ ಸಾಧ್ಯತೆಗಳನ್ನು ಕೇಂದ್ರ ಘೋಷಿಸಿದ ಪ್ಯಾಕೇಜ್‌ ತೆರೆದಿಟ್ಟಿದೆ

* ಸ್ವಾವಲಂಬಿ ಭಾರತ ಕಾರ್ಯಕ್ರಮವನ್ನು ಜನರು ತಮ್ಮ ಸ್ವಂತ ಆಂದೋಲನ ಎಂಬಂತೆ ಸ್ವೀಕರಿಸಿದ್ದಾರೆ; ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುತ್ತಿದ್ದಾರೆ

*ಕೊರೊನಾ ವೈರಸ್‌ನ ಹಾವಳಿ ಇನ್ನೂ ಮುಗಿದಿಲ್ಲ.ನೀವು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ನೋಡಿಕೊಳ್ಳಿ

*ದೇಶದ ಪೂರ್ವ ಭಾಗದಿಂದ ವಲಸೆ ಬಂದ ಜನರು ಹೆಚ್ಚು ಸಮಸ್ಯೆ ಎದುರಿಸಿದ್ದಾರೆ

*ನಮ್ಮ ಹಳ್ಳಿ, ಪಟ್ಟಣ, ಜಿಲ್ಲೆ ಹಾಗೂ ರಾಜ್ಯಗಳು ಸ್ವಾವಲಂಬಿಗಳಾಗಿದ್ದರೆ, ಇಷ್ಟೊಂದು ಕಠಿಣ ಪರಿಸ್ಥಿತಿ ಎದುರಾಗುತ್ತಿರಲಿಲ್ಲ

*ಯಾವ ವರ್ಗದವರನ್ನೂ ಕೊರೊನಾ ಬಿಟ್ಟಿಲ್ಲ. ಅದರಲ್ಲಿ ಹೆಚ್ಚು ಬಾಧಿತರಾದ ಬಡವರು, ಕಾರ್ಮಿಕರಿಗೆ ಎಲ್ಲರೂ ಸಹಾಯ ಮಾಡಿದ್ದಾರೆ

*ಕೇಂದ್ರ, ರಾಜ್ಯ, ಸ್ಥಳೀಯ ಸರ್ಕಾರಗಳು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿವೆ. ರೈಲ್ವೆಯು ಬೃಹತ್ ಸಂಖ್ಯೆ ಕಾರ್ಮಿಕರಿಗೆ ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT