ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ತೀರ್ಪು ಬರೆದಿದ್ದು ಯಾರು?

Last Updated 9 ನವೆಂಬರ್ 2019, 18:53 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ಹಾಗೂ ಅದಕ್ಕೆ ಸಂಬಂಧಿಸಿದ ಅನುಬಂಧವನ್ನು ಬರೆದಿದ್ದು ಯಾರು ಎಂಬುದು ಸಾಮಾಜಿಕ ಜಾಲತಣದಲ್ಲಿ ಚರ್ಚೆಯ ವಿಷಯವಾಗಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ಪ್ರಕಟಿಸಿದೆ. ಆದರೆ1,045 ಪುಟಗಳ ತೀರ್ಪಿನಲ್ಲಿ ಅದನ್ನು ಬರೆದ ನ್ಯಾಯಮೂರ್ತಿ ಯಾರು ಎಂದು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ‘ಇದು ಹೊಸ ಬೆಳವಣಿಗೆ. ತೀರ್ಪು ಬರೆದ ನ್ಯಾಯಮೂರ್ತಿಯ ಹೆಸರನ್ನು ಉಲ್ಲೇಖಿಸುವುದು ವಾಡಿಕೆ’ ಎಂದಿದ್ದಾರೆ. ಹೆಸರು ಉಲ್ಲೇಖಿಸದ ಕೆಲವು ತೀರ್ಪುಗಳೂ ಬಂದಿವೆ ಎಂದು ಕೆಲವು ವಕೀಲರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಎಚ್ಚರಿಕೆಯ ನಡೆ
ಸುಳ್ಳುಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರಿಂದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಯೋಧ್ಯೆ ತೀರ್ಪನ್ನು ಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ. ವಾಟ್ಸ್‌ಆ್ಯಪ್ ಗುಂಪುಗಳ ಅಡ್ಮಿನ್‌ಗಳು ಸೆಟ್ಟಿಂಗ್‌ನಲ್ಲಿ ದಿನದ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ.

‘ಅಡ್ಮಿನ್ ಮಾತ್ರ ಸಂದೇಶಗಳನ್ನು ಕಳುಹಿಸಬಹುದು’ ಎಂಬ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಅನುಚಿತ ಸಂದೇಶಗಳು ಹರಡದಂತೆ ತಡೆಯಲಾಯಿತು. ಗುಂಪಿನ ಬೇರೆ ಯಾವ ಸದಸ್ಯರೂ ಸಂದೇಶ ಪ್ರಕಟಿಸದಂತೆ ನಿಗ್ರಹಿಸಲಾಯಿತು.ಬಳಕೆದಾರರ ಎಲ್ಲ ಸಂದೇಶ, ಧ್ವನಿ, ವಿಡಿಯೊ ಕರೆಗಳ ಮೇಲೆ ಸರ್ಕಾರ ನಿಗಾ ವಹಿಸಿದೆ ಎಂಬ ವದಂತಿ ಹಬ್ಬಿದ್ದ ಕಾರಣ ಬಳಕೆದಾರರೂ ಎಚ್ಚರಿಕೆ ವಹಿಸಿದ್ದರು.

ದೆಹಲಿ, ಉತ್ತರ ಪ್ರದೇಶ ಪೊಲೀಸರು ಸಾಮಾಜಿಕ ತಾಣಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ವಿಭಾಗ ತೆರೆದಿದ್ದರು.

ಎಂಟು ಜನರ ಬಂಧನ
ತೀರ್ಪಿನ ಬಳಿಕ ಪಟಾಕಿ ಸಿಡಿಸಿದ ಹಾಗೂ ಆಕ್ಷೇಪಾರ್ಹ ಬರಹ ಪ್ರಕಟಿಸಿದ ಎಂಟು ಜನರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಪಟಾಕಿ ಸಿಡಿಸುವುದು, ಸಂಭ್ರಮ ಆಚರಿಸುವುದನ್ನು ನಿರ್ಬಂಧಿಸಿದ್ದರೂ ಮೀರಠ್‌ನಲ್ಲಿ ಪಟಾಕಿ ಹೊಡೆದ ಆರು ಜನರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.

ಮೊಳಗಿದ ‘ಜೈಶ್ರೀರಾಮ್‘ ಘೋಷಣೆ
ತೀರ್ಪು ಪ್ರಕಟವಾಗುತ್ತಿದ್ದಂತೆ ಸುಪ್ರೀಂಕೋರ್ಟ್ ಆವರಣದಲ್ಲಿ ಸಾಧುಗಳು ಹಾಗೂ ಹಿಂದುತ್ವ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗಿದರು. ಕೆಲವರು ಶಂಖ ಊದಿದರು.

ಕಲಾಪ ಆರಂಭವಾಗುವ ಎರಡು ಗಂಟೆಯ ಮೊದಲೇ ಕೋರ್ಟ್‌ ಸಂಕೀರ್ಣವು ವಕೀಲರು, ಪತ್ರಕರ್ತರು ಹಾಗೂ ಸಾರ್ವಜನಿಕರಿಂದ ತುಂಬಿತ್ತು. ಕೆಲವರಿಗೆ ಮಾತ್ರ ಕೋರ್ಟ್ ಹಾಲ್‌ಗೆ ಪ್ರವೇಶ ಸಿಕ್ಕಿತು. ವಿವಿಧ ಮಾಧ್ಯಮಗಳ 500ಕ್ಕೂ ಹೆಚ್ಚು ಪತ್ರಕರ್ತರು ಸೇರಿದ್ದರು.

ಅಖಿಲ ಭಾರತ ಹಿಂದೂ ಮಹಾಸಭಾ ಮುಖ್ಯಸ್ಥ ಸ್ವಾಮಿಚಕ್ರಪಾಣಿ ಮಹಾರಾಜ್ ಅವರು ಬೆಂಬಲಿಗರ ಜತೆ ನೃತ್ಯ ಮಾಡಿದರು.

ತೀರ್ಪು ಸ್ವಾಗತಿಸಿದ ‘ಶ್ರೀರಾಮ’!
ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಹಿರಿಯ ನಟ ಅರುಣ್‌ ಗೋವಿಲ್‌ ಸ್ವಾಗತಿಸಿದ್ದಾರೆ. 1987 ರಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರವನ್ನು ಅರುಣ್‌ ಗೋವಿಲ್‌ ನಿರ್ವಹಿಸಿದ್ದರು.

‘ಕೋರ್ಟ್‌ನ ತೀರ್ಪು ತೃಪ್ತಿ ತಂದಿದೆ. ಭಾರತೀಯರಾದ ನಾವು, ಈ ನೆಲದ ಅತ್ಯುನ್ನತ ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸಲೇಬೇಕು’ ಎಂದಿದ್ದಾರೆ.

ಅಯೋಧ್ಯೆ ಶಾಂತ...
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ತೀರ್ಪು ಪ್ರಕಟವಾದ ಬಳಿಕ ಅಯೋಧ್ಯೆ ಪಟ್ಟಣ ಶನಿವಾರ ಶಾಂತವಾಗಿತ್ತು. ತೀರ್ಪನ್ನು ಸ್ವಾಗತಿಸಿರುವ ಸ್ಥಳೀಯರು, ‘ಎರಡೂ ಕಡೆಯವರ ಬಗ್ಗೆ ಕೋರ್ಟ್ ಕಾಳಜಿ ವ್ಯಕ್ತಪಡಿಸಿದೆ. ಹಿಂದೂ–ಮುಸ್ಲಿಮರ ಮಧ್ಯೆ ಯಾವುದೇ ಭಿನ್ನಮತಕ್ಕೆ ಆಸ್ಪದ ನೀಡಿಲ್ಲ’ ಎಂದು ಹೇಳಿದ್ದಾರೆ.

ನಗರದಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯರಸ್ತೆಯಲ್ಲಿ ಮಾತ್ರ ಓಡಾಟಕ್ಕೆ ಅವಕಾಶವಿತ್ತು. ತೀರ್ಪಿನ ಬಳಿಕ ಹನುಮಾನ್ ಗಢಿಯಲ್ಲಿ ಪ್ರಾರ್ಥನೆಗೆ ಬಂದ ಭಕ್ತರಿಗೆ ಜಿಲ್ಲಾಡಳಿತ ಅನುಮತಿ ನೀಡಿತು.

**
ಜನರು ಅಯೋಧ್ಯೆ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಜನರು ಶಾಂತಿ–ಸೌಹಾರ್ದತೆಯ ಪರವಾಗಿರುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

**

ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳನ್ನೂ ಸಾಕ್ಷಿಯಾಗಿ ಪರಿಗಣಿಸಿ ನೀಡಿರುವ ತೀರ್ಪು ಇದಾಗಿದೆ. ಸದ್ಯಕ್ಕೆ ಸಂತೋಷದ ಸಂಗತಿ ಎಂದರೆ 150 ವರ್ಷದ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ.
-ಸಿ.ಎಚ್‌.ಹನುಮಂತರಾಯ, ವಕೀಲರು

**

ಪ್ರಾರ್ಥನಾ ಮಂದಿರಗಳನ್ನು ಹಾಳುಗೆಡವುವಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಸರ್ಕಾರವು ಎಚ್ಚರವಾಗಿರಬೇಕು ಎಂಬುದು ತೀರ್ಪಿನ ಮುಖ್ಯಾಂಶ.
-ಕೆ.ಬಿ.ಕೆ ಸ್ವಾಮಿ, ವಕೀಲರು

**

ಇಂದಿನ ತೀರ್ಪು ದೇಶದ ಏಕತೆಯನ್ನು ಒಗ್ಗೂಡಿಸುವ ಮತ್ತು ಅತ್ಯಂತ ಸಮತೋಲನದ ತೀರ್ಪು. ಯಾವುದೇ ಭಿನ್ನದನಿಯಿಲ್ಲದೆ ಏಕದನಿಯಲ್ಲಿ ತೀರ್ಪಿಗೆ ಅಂಕಿತ ಹಾಕಿದ್ದಾರೆ.
-ಅಶೋಕ ಬಿ.ಹಿಂಚಿಗೇರಿ, ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT