ಮೋದಿ ಮಾತುಗಳು ಕಡತದಿಂದ ಹೊರಕ್ಕೆ

7

ಮೋದಿ ಮಾತುಗಳು ಕಡತದಿಂದ ಹೊರಕ್ಕೆ

Published:
Updated:
Deccan Herald

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ ಬಳಸಿದ ಕೆಲವು ಪದಗಳು ಮತ್ತು ಮಾತನ್ನು ಸದನದ ಕಡತದಿಂದ ತೆಗೆದು ಹಾಕಲಾಗಿದೆ.

ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಹರಿವಂಶ್ ನಾರಾಯಣ ಸಿಂಗ್‌ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದರು. ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಬಿ.ಕೆ.ಹರಿಪ್ರಸಾದ್ ಅವರ ಬಗ್ಗೆಯೂ ಮೋದಿ ಮಾತನಾಡಿದ್ದರು. ಹರಿಪ್ರಸಾದ್ ಅವರ ಬಗ್ಗೆ ಹೇಳುವಾಗ ಬಳಸಿದ ಕೆಲವು ಪದಗಳ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಕಾಂಗ್ರೆಸ್ ಸದಸ್ಯರ ಆಕ್ಷೇಪವನ್ನು ಪರಿಗಣಿಸಿದ ಸಭಾಪತಿ ವೆಂಕಯ್ಯ ನಾಯ್ಡು, ಮೋದಿಯವರ ಭಾಷಣದ ಕಡತವನ್ನು ಪರಿಶೀಲಿಸಿದರು. ‘ಪ್ರಧಾನಿ ಬಳಸಿರುವ ಕೆಲವು ಪದಗಳು ಆಕ್ಷೇಪಾರ್ಹವಾಗಿವೆ. ಹೀಗಾಗಿ ಅವನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ಸಭಾಪತಿ ಸೂಚಿಸಿದರು’ ಎಂದು ರಾಜ್ಯಸಭಾ ಕಾರ್ಯದರ್ಶಿಯ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಹರಿವಂಶ್ ನಾರಾಯಣ ಸಿಂಗ್ ಅವರ ಅಭಿನಂದನಾ ಕಾರ್ಯಕ್ರಮದ ವೇಳೆ ಸಚಿವ ರಾಮದಾಸ್ ಅಠವಳೆ ಬಳಸಿದ ಪದಗಳು ಮತ್ತು ಮಾತನ್ನೂ ಕಡತದಿಂದ ತೆಗೆದುಹಾಕಲಾಗಿದೆ. 

ಪ್ರಧಾನಿ ತಮ್ಮ ಬಗ್ಗೆ ಬಳಸಿದ ಪದಗಳ ಬಗ್ಗೆ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಪ್ರಧಾನಿಯೇ ಸದನದ ಘನತೆಗೆ ಧಕ್ಕೆ ತಂದಿರುವುದು ದುರದೃಷ್ಟಕರ’ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಪ್ರಧಾನಿಯ ಮಾತನ್ನು ಸದನದ ಕಡತದಿಂದ ತೆಗೆದುಹಾಕುವುದಿಲ್ಲ. ಆದರೆ ಇಂತಹ ಕ್ರಮ ಇದೇ ಮೊದಲಲ್ಲ. 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿ ಸಂಸದ ಅರುಣ್ ಜೇಟ್ಲಿ ಮಧ್ಯೆ ಸದನದಲ್ಲಿ ಭಾರಿ ಜಟಾಪಟಿ ನಡೆದಿತ್ತು. ಜಟಾಪಟಿ ವೇಳೆ ಇಬ್ಬರೂ ಬಳಸಿದ್ದ ಕೆಲವು ಪದಗಳನ್ನು ಕಡತದಿಂದ ತೆಗೆದುಹಾಕಲಾಗಿತ್ತು.

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !