ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಬಾಬು ನಾಯ್ಡುಗೆ ವಿಐಪಿ ಸೌಲಭ್ಯ ನಿರಾಕರಣೆ

ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರ ರೀತಿ ತಪಾಸಣೆ
Last Updated 15 ಜೂನ್ 2019, 18:30 IST
ಅಕ್ಷರ ಗಾತ್ರ

ಅಮರಾವತಿ: ‘ಝಡ್’ ಶ್ರೇಣಿಯ ಭದ್ರತೆ ಹೊಂದಿದ್ದರೂ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರಿಗೆ ವಿಐಪಿ ಸೌಲಭ್ಯ ನಿರಾಕರಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಇಲ್ಲಿನ ಗನ್ನವರಂ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌ಗೆ ಹೋಗಲು ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಪ್ರಯಾಣಿಸಿದ ನಾಯ್ಡು, ಭದ್ರತಾ ತಪಾಸಣೆಗೆ ಒಳಗಾದರು.ಈ ಘಟನೆ ವಿವಾದಕ್ಕೆ ಕಾರಣವಾಗಿದ್ದು, ‘ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವು ತಮ್ಮ ಪಕ್ಷದ ನಾಯಕನಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದೆ’ ಎಂದು ತೆಲುಗುದೇಶಂ (ಟಿಡಿಪಿ) ಪಕ್ಷ ಆರೋಪಿಸಿದೆ.

ನಾಯ್ಡು ಅವರು ಹೈದರಾಬಾದ್‌ಗೆ ತೆರಳುವ ವಿಮಾನ ಹತ್ತಲು ನಿಲ್ದಾಣಕ್ಕೆ ಬಂದಿದ್ದರು. ಅವರನ್ನು ವಿಮಾನದವರೆಗೆ ಕರೆದೊಯ್ಯಬೇಕಿದ್ದ ಬೆಂಗಾವಲು ವಾಹನಗಳನ್ನು ಪ್ರವೇಶದ್ವಾರದಲ್ಲಿ ತಡೆದು ನಿಲ್ಲಿಸಲಾಯಿತು. ತಪಾಸಣೆ ನಡೆಸಿ, ಬಸ್‌ನಲ್ಲಿ ಅವರನ್ನು ಕರೆದೊಯ್ಯಲಾಯಿತು.

2003ರಲ್ಲಿ ತಿರುಪತಿ ಸಮೀಪದ ಅಲಿಪಿರಿಯಲ್ಲಿ ಮಾವೋವಾದಿಗಳು ನಾಯ್ಡು ಅವರ ಹತ್ಯೆಗೆ ಯತ್ನಿಸಿದ್ದರು. ಅಂದಿನಿಂದ ಅವರಿಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದ್ದು, 23 ಮಂದಿ ಸಶಸ್ತ್ರ ಸಿಬ್ಬಂದಿ ಹಾಗೂ ಬೆಂಗಾವಲು ವಾಹನಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

‘ನಾಯ್ಡು ಅವರು ಪಕ್ಷದ ಹಿರಿಯ ನಾಯಕ. ವಿಐಪಿ ಸೌಲಭ್ಯ ಹೊಂದಿರುವ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅವರ ಸಂಚಾರದ ವೇಳೆ ವಾಹನ ದಟ್ಟಣೆಯನ್ನು ನಿಯಂತ್ರಿಸಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುನಾಯ್ಡು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮಾಜಿ ಗೃಹಸಚಿವ ಚಿನ್ನರಾಜಪ್ಪ ಒತ್ತಾಯಿಸಿದ್ದಾರೆ. ಈ ಸಂಬಂಧ ಟಿಡಿಪಿ ಮುಖಂಡರು ಮನವಿಪತ್ರವನ್ನೂ ಸಲ್ಲಿಸಿದರು.

ಭದ್ರತಾ ಲೋಪ ಅಲ್ಲಗಳೆದ ಸರ್ಕಾರ

ನಾಯ್ಡು ಅವರಿಗೆ ಒದಗಿಸಿರುವ ಭದ್ರತೆಯಲ್ಲಿ ಲೋಪವಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ. ‘ಸಾಮಾನ್ಯ ವಿಮಾನದಲ್ಲಿ ಅವರು ಹೊರಟಿದ್ದರಿಂದ ತಪಾಸಣೆ ಅನಿವಾರ್ಯವಾಗಿತ್ತು. ಅವರು ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದರೆ ತಪಾಸಣೆಯ ತೊಂದರೆ ಇರುತ್ತಿರಲಿಲ್ಲ’ ಎಂದು ಶಿಷ್ಟಾಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

‘ನಾಯ್ಡು ಅವರು ಸಂಚರಿಸುತ್ತಿದ್ದ ಮಾರ್ಗದಲ್ಲಿ ವಾಹನ ದಟ್ಟಣೆ ನಿವಾರಣೆಗೆ ಪೊಲೀಸರು ಮುಂದಾಗಿದ್ದರು. ಆದರೆ ದಟ್ಟಣೆ ನಿವಾರಿಸಲು ಏನೂ ಮಾಡಲಿಲ್ಲ ಎಂಬ ಆರೋಪ ಅಸಂಬದ್ಧವಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.‌

‘ಭದ್ರತೆ ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಅಷ್ಟೇ’ ಎಂದುವೈಎಸ್‌ಆರ್‌ಸಿಪಿ ಸಂಸದವಿಜಯ್ ಸಾಯಿರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

***

ಒಂದು ವೇಳೆ ಜಗನ್‌ಮೋಹನ್ ರೆಡ್ಡಿ ಅವರಿಗೆ ಭದ್ರತೆ ನೀಡಲು ನಾಯ್ಡು ನಿರಾಕರಿಸಿದ್ದರೆ, ಅವರು 360 ದಿನ ಪಾದಯಾತ್ರೆ ಮಾಡಲು ಸಾಧ್ಯವಿರುತ್ತಿತ್ತೇ?

- ವಸುಪಳ್ಳಿ ಗಣೇಶ್ ಕುಮಾರ್,ಟಿಡಿಪಿ ಶಾಸಕ

ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಜಗನ್‌ಗೆ ಚೂರಿಯಿಂದ ಇರಿಯಲಾಗಿತ್ತು. ಈ ಬಗ್ಗೆ ನಾಯ್ಡು ಮೊದಲು ಉತ್ತರ ನೀಡಲಿ.

- ವಿಜಯ್ ಸಾಯಿರೆಡ್ಡಿ,ವೈಎಸ್‌ಆರ್‌ಸಿಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT