ಶುಕ್ರವಾರ, ಏಪ್ರಿಲ್ 3, 2020
19 °C
ನಮಸ್ತೆ ಟ್ರಂಪ್‌: ಪ್ರಧಾನಿ ತವರಿನಲ್ಲಿ ಅಮೆರಿಕ ಅಧ್ಯಕ್ಷರ ಸಾರ್ವಜನಿಕ ಕಾರ್ಯಕ್ರಮ l ಪರಸ್ಪರ ಶ್ಲಾಘನೆಯ ಸುರಿಮಳೆ

ಜನಸಾಗರ: ಮೋದಿ –ಟ್ರಂಪ್‌ ಸಡಗರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೊಟೆರಾ ಸ್ಟೇಡಿಯಂ’ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ಪಂದ್ಯ ಪುರುಷ’ನಂತೆ ಸೋಮವಾರ ಕಂಗೊಳಿಸಿದರು. 

ಟ್ರಂಪ್‌ ಅವರು ಭಾರತಕ್ಕೆ ನೀಡಿರುವ ಮೊದಲ ಭೇಟಿಯು ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿತ್ತು. ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟ್ರಂಪ್‌ ಅವರ ಹೊಗಳಿಕೆಯ ಮಾತುಗಳಿಗೆ ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಕ್ಕೂ ಹೆಚ್ಚಿದ್ದ ಉತ್ಸಾಹಿ ಜನಸ್ತೋಮ ಸಂಭ್ರಮದಿಂದ ಚಪ್ಪಾಳೆ ತಟ್ಟಿತು. 

ಮೋದಿಯವರಿಗೆ ಶ್ಲಾಘನೆ, ಭಯೋತ್ಪಾದನೆ ಮಟ್ಟ ಹಾಕುವ ಬದ್ಧತೆ ಮತ್ತು ಹಿಂದಿಯಲ್ಲೂ ಮಾತನಾಡುವ ಟ್ರಂಪ್‌ ಉತ್ಸಾಹಕ್ಕೆ ಜನರು ಲವಲವಿಕೆಯಿಂದಲೇ ಸ್ಪಂದಿಸಿದರು. ಚಹಾ ಮಾರುತ್ತಿದ್ದ ಮೋದಿಯವರು ಪ್ರಧಾನಿ ಹುದ್ದೆಗೇರಿದ ಪಯಣವು ಸ್ಫೂರ್ತಿ
ದಾಯಕ ಎಂದು ಟ್ರಂಪ್‌ ಹೇಳಿದ್ದು ಮೋದಿಯವರ ತವರು ರಾಜ್ಯದ ಜನರ ಭಾರಿ ಖುಷಿಗೂ ಕಾರಣವಾಯಿತು. 

ಮೂಲಭೂತವಾದಿ ಇಸ್ಲಾಂ ಭಯೋತ್ಪಾದನೆಯಿಂದ ದೇಶದ ಜನರನ್ನು ರಕ್ಷಿಸಲು ಭಾರತ ಮತ್ತು ಅಮೆರಿಕ ಜತೆಯಾಗಿ ಕೆಲಸ ಮಾಡುತ್ತಿವೆ. ರಕ್ಷಣಾ ಸಹಕಾರ ವೃದ್ಧಿಯಾಗಲಿದೆ  ಮತ್ತು ‘ಅದ್ಭುತ’ವಾದ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬರಲಿದೆ ಎಂದು ಟ್ರಂಪ್‌ ಹೇಳಿದರು. ಅಮೆರಿಕವು ಭಾರತವನ್ನು ಪ್ರೀತಿಸುತ್ತದೆ ಮತ್ತು ‘ನಿಷ್ಠ’ ಗೆಳೆಯನಾಗಿ ಮುಂದುವರಿಯಲಿದೆ. ಜಗತ್ತಿನ ಅತ್ಯುತ್ತಮ ಮತ್ತು ಅತ್ಯಂತ ಭೀತಿ ಹುಟ್ಟಿಸುವ ಸೇನಾ ಸಾಧನಗಳನ್ನು ಭಾರತಕ್ಕೆ ನೀಡಲು ತಮ್ಮ ದೇಶವು ಉತ್ಸುಕವಾಗಿದೆ ಎಂದೂ ಹೇಳಿದರು. 

ಮೋದಿ ಮತ್ತು ಟ್ರಂಪ್‌ ನಡುವಣ ಸ್ನೇಹ ಕಾರ್ಯಕ್ರಮದ ಉದ್ದಕ್ಕೂ ಎದ್ದು ಕಾಣಿಸುತ್ತಿತ್ತು. ಹಲವು ಬಾರಿಯ ಆಲಿಂಗನದ ಜತೆಗೆ ಇಬ್ಬರೂ ನಾಯಕರು ಪರಸ್ಪರರ ಮೇಲೆ ಹೊಗಳಿಕೆಯ ಸುರಿಮಳೆಗೈದರು.

‘ಐದು ತಿಂಗಳ ಹಿಂದೆ, ಭಾರಿ ಫುಟ್‌ಬಾಲ್‌ ಮೈದಾನದಲ್ಲಿ ನಿಮ್ಮ ಪ್ರಧಾನಿಯನ್ನು ಅಮೆರಿಕ ಸ್ವಾಗತಿಸಿತ್ತು. ಈಗ, ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಮ್ಮನ್ನು ಸ್ವಾಗತಿಸಿದ್ದೀರಿ. ಈ ಭವ್ಯ ಸ್ವಾಗತಕ್ಕೆ ಕೃತಜ್ಞ. ಈ ಸ್ಮರಣೀಯ ಆತಿಥ್ಯ ಸದಾ ನೆನಪಿನಲ್ಲಿರುತ್ತದೆ’ ಎಂದು ಟ್ರಂಪ್‌ ಹೇಳಿದರು. 

 ಟ್ರಂಪ್‌ ಅವರನ್ನು ಹೊಗಳುವಲ್ಲಿ ಮೋದಿ ಅವರೂ ಹಿಂದೆ ಬೀಳಲಿಲ್ಲ. ‘ಜಗತ್ತಿನ ಅತ್ಯಂತ ದೊಡ್ಡ ಜನತಂತ್ರ’ಕ್ಕೆ ಸ್ವಾಗತ ಎಂದರು. ಟ್ರಂಪ್‌ ಭೇಟಿಯಿಂದ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ ಎಂದು ಬಣ್ಣಿಸಿದರು. 

ಭಾರತ ಮತ್ತು ಅಮೆರಿಕದ ನಡುವೆ ಇರುವ ಸಹಭಾಗಿತ್ವ, ಅದರ ಅತ್ಯುನ್ನತ ಮಟ್ಟ ತಲುಪಿದೆ. ಟ್ರಂಪ್‌ ಮತ್ತು ಅವರ ಕುಟುಂಬದ ಭೇಟಿ ಈ ನಂಟಿನ ಸಂಕೇತ ಎಂದರು. ಭಯೋತ್ಪಾದನೆ ತಡೆಗೆ ಟ್ರಂಪ್‌ ಮಾಡಿದ ಪ್ರಯತ್ನಗಳನ್ನು ಕೊಂಡಾಡಿದರು. 

***

ಪಾಕ್‌ ಜತೆಗೂ ನಂಟು

ತನ್ನ ಭದ್ರತೆ ಮತ್ತು ಗಡಿಯ ಮೇಲೆ ನಿಯಂತ್ರಣ ಹೊಂದಲು ಪ್ರತಿ ದೇಶಕ್ಕೂ ಹಕ್ಕು ಇದೆ. ಭಯೋತ್ಪಾದನೆ ಮತ್ತು ಉಗ್ರಗಾಮಿಗಳ ಸಿದ್ಧಾಂತದ ವಿರುದ್ಧ ಹೋರಾಟಕ್ಕೆ ಅಮೆರಿಕ ಮತ್ತು ಭಾರತ ಬದ್ಧವಾಗಿವೆ. ಹಾಗಾಗಿಯೇ ತಾವು ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನದ ಜತೆಗೂ ಸಕಾರಾತ್ಮವಾಗಿ ಕೆಲಸ ಮಾಡುತ್ತಿದ್ದೇವೆ. ಪಾಕಿಸ್ತಾನದ ಗಡಿಯಿಂದ ಕಾರ್ಯನಿರ್ವಹಿಸುವ ಭಯೋತ್ಪಾದಕ ಸಂಘಟನೆಗಳ ದಮನ ಇದರ ಉದ್ದೇಶ ಎಂದು ಟ್ರಂಪ್‌ ಬಣ್ಣಿಸಿದರು.

ಪಾಕಿಸ್ತಾನದ ಜತೆಗೆ ತಮ್ಮ ಸಂಬಂಧವು ಅತ್ಯುತ್ತಮ
ವಾಗಿದೆ. ತಮ್ಮ ಪ್ರಯತ್ನಗಳಿಂದಾಗಿ ಪಾಕಿಸ್ತಾನದಲ್ಲಿ ದೊಡ್ಡ ಪ್ರಗತಿಯ ಸೂಚನೆಗಳು ಕಾಣಲಾರಂಭಿಸಿವೆ.
ದಕ್ಷಿಣ ಏಷ್ಯಾದ ಎಲ್ಲ ದೇಶಗಳಲ್ಲಿ ಇನ್ನಷ್ಟು ಸ್ಥಿರತೆ, ಸಾಮರಸ್ಯದ ಭವಿಷ್ಯ ಸೃಷ್ಟಿಯಾಗುವ ಭರವಸೆ ಇದೆ ಎಂದು ಹೇಳಿದರು. 

***
ಮೋದಿಗೆ ಕೃತಜ್ಞತೆ

ಸೋಮವಾರ ಬೆಳಿಗ್ಗೆ 11.40ರ ಹೊತ್ತಿಗೆ ಅಹಮದಾಬಾದ್‌ಗೆ ಬಂದಿಳಿದ ಟ್ರಂಪ್‌ ಮತ್ತು ಬಳಗವು ಅಲ್ಲಿಂದ ರೋಡ್‌ಷೋ ಮೂಲಕ ಮಹಾತ್ಮ ಗಾಂಧಿಯ ಸಾಬರಮತಿ ಆಶ್ರಮಕ್ಕೆ ತೆರಳಿತು. ಅಲ್ಲಿಂದ ಮೊಟೆರಾ ಸ್ಟೇಡಿಯಂಗೆ ಹೋಗಿ, ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಸಂಜೆ ಟ್ರಂಪ್‌ ಮತ್ತು ಹೆಂಡತಿ ಮೆಲೇನಿಯಾ ಅವರು ಪ್ರೇಮ ಸ್ಮಾರಕ ತಾಜ್‌ ಮಹಲ್‌ಗೆ ಭೇಟಿ ಕೊಟ್ಟರು. 

‘ಈ ಅದ್ಭುತ ಭೇಟಿಗೆ, ಆತ್ಮೀಯ ಗೆಳೆಯ ಪ್ರಧಾನಿ ಮೋದಿಗೆ ಕೃತಜ್ಞತೆ’ ಎಂದು ಸಾಬರಮತಿಯ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್‌ ಬರೆದರು. ತಾಜ್‌ ಮಹಲ್‌ ನೋಡಿ ಅವರು ನೀಡಿದ ಸಂದೇಶ ಭಿನ್ನವಾಗಿತ್ತು. ‘ತಾಜ್‌ ಮಹಲ್‌ ಪುಳಕ ಮತ್ತು ಅಚ್ಚರಿ ಮೂಡಿಸುತ್ತದೆ. ಭಾರತದ ಸಂಸ್ಕೃತಿಯ ಸಮೃದ್ಧಿ ಮತ್ತು ಸೌಂದರ್ಯದ ವೈವಿಧ್ಯಕ್ಕೆ ಕಾಲಾತೀತವಾದ ನಿದರ್ಶನ ಇದು’ ಎಂದು ಟ್ರಂಪ್ ಬರೆದಿದ್ದಾರೆ.

***

ಟ್ರಂಪ್ ಹೊಗಳಿಕೆ ಸರಣಿ

- ಒಂದೇ ದಶಕದಲ್ಲಿ ಭಾರತವು 27 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ. ಇತಿಹಾಸದಲ್ಲಿ ಇದೇ ಮೊದಲಿಗೆ, ಮೋದಿ ಅವರ ನಾಯಕತ್ವದಲ್ಲಿ ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಸಂಪರ್ಕ ದೊರೆತಿದೆ

- ಏಳು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಒದಗಿಸಲಾಗಿದೆ

- 32 ಕೋಟಿ ಭಾರತೀಯರಿಗೆ ಇಂಟರ್‌ನೆಟ್‌ ಸಂಪರ್ಕ ಇದೆ. ಹೆದ್ದಾರಿ ನಿರ್ಮಾಣದ ವೇಗವು ದುಪ್ಪಟ್ಟಿ
ಗಿಂತಲೂ ಹೆಚ್ಚಾಗಿದೆ

- 60 ಕೋಟಿಗೂ ಹೆಚ್ಚು ಜನರಿಗೆ ಮೂಲಭೂತ ಶೌಚಾಲಯ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ

- ಜಗತ್ತಿನಲ್ಲಿಯೇ ಅತಿ ದೊಡ್ಡ ಮಧ್ಯಮವರ್ಗವನ್ನು ಹೊಂದಿರುವ ದೇಶವಾಗಿ ಭಾರತವು ಶೀಘ್ರವೇ ಹೊರಹೊಮ್ಮಲಿದೆ. ಮುಂದಿನ 10 ವರ್ಷದಲ್ಲಿ, ಭಾರತದಲ್ಲಿ ತೀವ್ರ ಬಡತನ ಇರುವುದೇ ಇಲ್ಲ

- ಭಾರತದ ಸಾಮರ್ಥ್ಯವು ಅಸಾಧಾರಣ. ಸ್ವತಂತ್ರ ಮತ್ತು ಸಮೃದ್ಧ ದೇಶವಾಗಿ ಭಾರತದ ಬೆಳವಣಿಗೆ ಜಗತ್ತಿನ ಪ್ರತಿ ದೇಶಕ್ಕೂ ಮಾದರಿ

- ಪ್ರಜಾಪ್ರಭುತ್ವ, ಶಾಂತಿಯುತ, ಸಹಿಷ್ಣು ದೇಶವಾಗಿ ಈ ಸಾಧನೆ ಮಾಡಿರುವುದು ಇನ್ನಷ್ಟು ಸ್ಫೂರ್ತಿದಾಯಕ

****
ಅಮೆರಿಕವು ಭಾರತವನ್ನು ಪ್ರೀತಿಸುತ್ತದೆ, ಗೌರವಿಸುತ್ತದೆ ಎಂಬ ಒಂದು ಸಂದೇಶ ನೀಡುವುದಕ್ಕಾಗಿ ನಾನು ಮತ್ತು ಅಮೆರಿಕದ ಮೊದಲ ಮಹಿಳೆ ಎಂಟು ಸಾವಿರ ಮೈಲು ಸಂಚರಿಸಿ ಇಲ್ಲಿಗೆ ಬಂದಿದ್ದೇವೆ

ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು