ಬುಧವಾರ, ಸೆಪ್ಟೆಂಬರ್ 18, 2019
24 °C
165ನೇ ಜಯಂತಿ

Video | ಸುಧಾರಣೆಯ ದೀಪಗಳ ಸಾಲು: ಬ್ರಹ್ಮರ್ಷಿ ನಾರಾಯಣ ಗುರು

Published:
Updated:

‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು' ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ನಾರಾಯಣ ಗುರು. ಜನರು ಶೋಷಣೆಗಳಿಂದ ಮುಕ್ತರಾಗಲು, ಜೀವನ ಸುಧಾರಿಸಲು ಸಂಘರ್ಷಕ್ಕಿಂತ ಭಿನ್ನವಾದ ಚಳವಳಿಯನ್ನು ಮುನ್ನಡೆಸಿದರು. ಇಂದು ಅವರ 165ನೇ ಜಯಂತಿ. 

ಇದನ್ನೂ ಓದಿ: ನಾರಾಯಣ ಗುರು ಮಲ್ತಿ ಮೌನ ಕ್ರಾಂತಿ | ಗಣೇಶ್‌ ಅಮೀನ್‌ ಸಂಕಮಾರ್‌ ತುಳು ಬರಹ

ಓಣಂ ಸಂದರ್ಭದಲ್ಲಿ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಗುತ್ತದೆ. ದೇವಾಲಯಗಳಿಗೆ ಪ್ರವೇಶ ಸಿಗದೆ ದೂರ ಉಳಿದಿದ್ದ, ಧಾರ್ಮಿಕ ಶೋಷಣೆಗೆ ಒಳಗಾದ ವರ್ಗಗಳ ಜನರಿಗಾಗಿಯೇ ದೇವಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲು ಕ್ರಾಂತಿಕಾರಕ ಮಾರ್ಗವನ್ನು ಸೃಷ್ಟಿಸಿದ ನಾರಾಯಣ ಗುರುಗಳು ಹಲವು ಪ್ರತಿರೋಧವನ್ನೂ ಎದುರಿಸಿದರು.

ಅಂದಹಾಗೆ, 1912ರಲ್ಲಿ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಸ್ಥಾಪಿಸಿದವರು ನಾರಾಯಣ ಗುರು. ಕನ್ನಡ ನಾಡಿನೊಂದಿಗೆ ನಾರಾಯಣ ಗುರುಗಳ ನಂಟು ಹಿರಿದು. ನಾರಾಯಣ ಗುರುಗಳ ಅಧ್ಯಾತ್ಮ ಮತ್ತು ವೈಚಾರಿಕ ಮಾರ್ಗವನ್ನು ಒಪ್ಪುವ ಸಾಕಷ್ಟು ಮಂದಿ ಕರ್ನಾಟಕದಲ್ಲಿಯೂ ಇದ್ದಾರೆ.

ಇದನ್ನೂ ಓದಿ: ಸಮಾನತೆಯ ಬೆಳಕು, ನಾರಾಯಣ ಗುರು | ಸಂಸ್ಕೃತಿ ಸಂಭ್ರಮ ವಿಶೇಷ ಲೇಖನ

ಹೀಗಿತ್ತು ಗುರುಗಳ ಬಾಲ್ಯ

ಕೇರಳದ ತಿರುವನಂತಪುರ ಸಮೀಪದ ಚೆಂಬಳಂತಿ ಗ್ರಾಮದಲ್ಲಿ 1854ರ ಆಗಸ್ಟ್‌ 26ರಂದು ನಾರಾಯಣ ಗುರು (ನಾಣಿ) ಜನನ. ತಂದೆ ಮಾಡಾನ್‌ ಆಶಾನ್‌ (ಶಿಕ್ಷಕ), ತಾಯಿ ಕುಟ್ಟಿಯಮ್ಮ. ಚಿಕ್ಕಂದಿನಿಂದಲೇ ಕಲಿಕೆಯಲ್ಲಿ ಚುರುಕುತನ ಹೊಂದಿದ್ದ ನಾಣಿ, ಸಂಸ್ಕೃತ ಮತ್ತು ಕಾವ್ಯ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಕಲಿಕೆಯ ಜತೆಗೆ ದೀರ್ಘ ಆಲೋಚನೆಯಲ್ಲಿ ಮಗ್ನನಾಗುವುದು ಅವರಲ್ಲಿ ದಿನೇ ದಿನೇ ಬೆಳವಣಿಗೆ ಕಾಣುತ್ತಿದ್ದ ಸ್ವಭಾವವಾಗಿತ್ತು. ಮಾವನ ನೆರವು ಸಿಕ್ಕ ಕಾರಣ ಮತ್ತೊಂದು ಊರಿಗೆ ಹೋಗಿ ಹೆಚ್ಚಿನ ಅಭ್ಯಾಸ ಪಡೆಯುವುದು ಸಾಧ್ಯವಾಯಿತು.

ನಾರಾಯಣ ಗುರುಗಳು ಸಂಸ್ಕೃತ, ತಮಿಳು ಮತ್ತು ಮಲಯಾಳಂಗಳಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ್ದವರು. ಸಮಾಜ ಸುಧಾರಣೆಯ ಜೊತೆಗೆ ಹತ್ತಾರು ಕೃತಿಗಳನ್ನು ರಚಿಸಿದರು. ಶಂಕರಾಚಾರ್ಯರ ದರ್ಶನದಿಂದ ಪ್ರಭಾವಿತರಾದವರು.

ಅಭ್ಯಾಸದೊಂದಿಗೆ ತಿರುಗಾಟದಲ್ಲಿ ಅತೀವ ಆಸಕ್ತಿ ಹೊಂದಿದ್ದರು ನಾಣಿ. ಬೇರೆ ಊರುಗಳು ಮತ್ತು ಕಾಡುಗಳಲ್ಲಿ ದಿನ ರಾತ್ರಿ ಕಳೆಯುತ್ತಿದ್ದ ಅವರಿಗೆ ತನ್ನ ಸಮಾಜದ ಸ್ಥಿತಿ ಬಹುಬೇಗ ಗ್ರಹಿಕೆಗೆ ಬಂದಿತು. ತಾರತಮ್ಯ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕುರುಡು ಆಚರಣೆಗಳು, ಅನಕ್ಷರತೆ... ಎಲ್ಲದಕ್ಕೂ ಸತತ ನಾಲ್ಕು ದಶಕಗಳ ಸುಧಾರಣೆ ಚಳಚಳಿ ಮೂಲಕ ಚಿಕಿತ್ಸೆ ನೀಡಿದರು.

ಇದನ್ನೂ ಓದಿ: ದಿನೇಶ್ ಅಮೀನ್ ಮಟ್ಟು ಬರಹ | ನಾರಾಯಣ ಗುರು ತೋರಿದ ಸುಧಾರಣೆಯ ದಾರಿ


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇಗುಲ (ಚಿತ್ರ: ಗೋವಿಂದರಾಜ ಜವಳಿ)

'ನಮ್ಮ ಶಿವನೂ ಈಳವನೇ, ಬ್ರಾಹ್ಮಣನಲ್ಲ...'

ಶೋಷಿತರಿಗಾಗಿಯೇ ಪ್ರತ್ಯೇಕ ಶಿವ ದೇವಾಲಯ ಸ್ಥಾಪಿಸುತ್ತಿದ್ದ ನಾರಾಯಣ ಗುರುಗಳಿಗೆ ನಂಬೂದರಿ ಬ್ರಾಹ್ಮಣರು ಆಕ್ಷೇಪ ವ್ಯಕ್ತಪಡಿಸಿ; 'ಕೆಳಜಾತಿಯ ಈಳವ ಗುರುವೊಬ್ಬನಿಗೆ ಶಿವ ದೇವಾಲಯ ಸ್ಥಾಪನೆಯ ಅಧಿಕಾರವಿದೆಯೇ?' ಎಂದು ಪ್ರಶ್ನಿಸಿದ್ದರು. 'ನಮ್ಮ ಶಿವನೂ ಈಳವನೇ, ಬ್ರಾಹ್ಮಣನಲ್ಲ...' ಎಂದು ನಾರಾಯಣ ಗುರು ಸ್ವಾರಸ್ಯಕರ ಉತ್ತರ ನೀಡಿದ್ದರು. ಶಿವನು ಯಾವ ಜಾತಿಗೂ ಸೇರಿದವನಲ್ಲ. ಶಿವತತ್ವ ತಿಳಿಯುವ ಹಕ್ಕು ಯಾವುದೇ ಜಾತಿಯ ಗುತ್ತಿಗೆಯಲ್ಲ ಎಂಬ ಉತ್ತರವನ್ನು ತೀಕ್ಷ್ಣವಾಗಿಯೇ ಕೊಟ್ಟರು. 

ಅದ್ವೈತ ತತ್ವವನ್ನು ಒಪ್ಪಿ, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವರು ಪ್ರಗತಿಪರ ಧೋರಣೆಯೊಂದಿಗೆ ದೇವಾಲಯಗಳನ್ನು ಸ್ಥಾಪಿಸಿದರು. ದೇವಸ್ಥಾನಗಳು ಮನುಷ್ಯನ ವ್ಯಕ್ತಿತ್ವದ ವಿಕಾಸ ಹಾಗೂ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಬೇಕು ಎಂದು ಶ್ರಮಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದ ಜನರಿಗೂ ಶಾಸ್ತ್ರ, ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ಕಲ್ಪಿಸಿದರು. 

ಇದನ್ನೂ ಓದಿ: ದಿನೇಶ್ ಅಮೀನ್ ಮಟ್ಟು ಸುದೀರ್ಘ ಬರಹ | ಸಾಮಾಜಿಕ ಸುಧಾರಣೆಯ ಹರಿಕಾರ ನಾರಾಯಣ ಗುರು

ದೇವಸ್ಥಾನಗಳ ಜತೆಗೆ ಜನರಲ್ಲಿ ಶುಚಿತ್ವದ ಅರಿವು ಮೂಡಿಸಲೂ ಪ್ರಯತ್ನಿಸಿದರು. ದೇವಸ್ಥಾನಗಳು ಚೊಕ್ಕಟವಾಗಿರಬೇಕು, ಆವರಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕು, ಜನರು ಸ್ನಾನ ಮಾಡಿ ಶುಚಿಯಾಗಿ ದೇವಾಲಯಕ್ಕೆ ಬರಬೇಕು, ಒಳ್ಳೆಯ ಯೋಚನೆಗಳು ಅವರ ಮನಸ್ಸಿಗೆ ಸುಳಿಯಬೇಕು ಎಂದು ದೇವಾಲಯಗಳ ಬಗೆಗೆ ನಿಲುವು ವ್ಯಕ್ತಪಡಿಸಿದ್ದರು.

ದೇವಾಲಯಗಳಲ್ಲಿ ಪುಸ್ತಕಗಳ ಸಂಗ್ರಹವಿರಬೇಕು. ಅಂತಹ ದೇವಾಲಯಗಳು ಮೈ ಮನಗಳ ಆರೋಗ್ಯ ವೃದ್ಧಿಸುತ್ತವೆ ಎನ್ನುತ್ತಿದ್ದರು. ಆಧ್ಯಾತ್ಮ ಸಾಧನೆಯಲ್ಲಿ ಆತ್ಮದರ್ಶನವೇ ಮುಖ್ಯವೆಂದು ಕಂಡುಕೊಂಡಿದ್ದ ಅವರು, ದೇವಾಲಯವೊಂದರ ಗರ್ಭ ಗುಡಿಯಲ್ಲಿ ಮೂರ್ತಿಯ ಬದಲು ಕನ್ನಡಿಯೊಂದನ್ನು ಸ್ಥಾಪಿಸಿದರು. ಭಕ್ತರು ಗರ್ಭಗುಡಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡು ಆತ್ಮಚಿಂತನೆಯಲ್ಲಿ ತೊಡಗಲಿ ಎಂಬುದು ಅವರ ಆಶಯವಾಗಿತ್ತು. 

ಇದನ್ನೂ ಓದಿ: ನಾವು ಪ್ರಪಾತಕ್ಕೆ ಬೀಳದಂತೆ ತಡೆದು ನಿಲ್ಲಿಸುವ ನಂಬಿಕೆಯ ಗಿಡ ನಾರಾಯಣಗುರು | ಅರವಿಂದ ಚೊಕ್ಕಾಡಿ

ಹೆಬ್ಬಂಡೆಯನ್ನೂ ತಡೆಯುವ ವಿಶ್ವಾಸದ ಗಿಡ 

1925ರ ಮಾರ್ಚ್ 12. ಮಹಾತ್ಮ ಗಾಂಧಿ, ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾದರು. ಗಾಂಧೀಜಿಗೆ ಗುರುಗಳ ಜೊತೆ ತಮಾಷೆ ಮಾಡೋಣ ಅನಿಸುತ್ತದೆ. ‘ಗುರುಗಳಿಗೆ ಇಂಗ್ಲಿಷ್ ಗೊತ್ತಿಲ್ಲವಂತೆ, ಹೌದಾ?’ ಎಂದು ಕೇಳುತ್ತಾರೆ. ನಾರಾಯಣ ಗುರುಗಳು, ‘ಮಹಾತ್ಮರಿಗೆ ಸಂಸ್ಕೃತ ಬರುವುದಿಲ್ಲ, ಅಲ್ವಾ?’ ಎಂದು ಉತ್ತರಿಸುತ್ತಾರೆ. ಅದೇ ಭೇಟಿಯಲ್ಲಿ ನಾರಾಯಣ ಗುರುಗಳ ಬಳಿ ಗಾಂಧೀಜಿ ತಮ್ಮ ಧ್ಯೇಯವನ್ನೆಲ್ಲ ಹೇಳಿ, ‘ಇದೆಲ್ಲ ಸಾಧ್ಯವಾದೀತೇ?’ ಎಂದು ಕೇಳುತ್ತಾರೆ. ಅದಕ್ಕೆ ಗುರುಗಳು, ‘ಸಾಧ್ಯ ಆದೀತು. ಆದರೆ ಅದಕ್ಕಾಗಿ ಮಹಾತ್ಮರು ಇನ್ನೊಂದು ಜನ್ಮ ಎತ್ತಿ ಬರಬೇಕು’ ಎಂದರು. ‘ಸಾಧ್ಯವಿಲ್ಲ’ ಎನ್ನುವುದನ್ನು ಅವರು ಅಷ್ಟು ಚೆನ್ನಾಗಿ ಹೇಳಿದ್ದರು! (ಪೂರ್ಣ ಲೇಖನ: https://bit.ly/2lLBUO6 )

ಇದನ್ನೂ ಓದಿ: ವೈದಿಕತೆ ನಿರಾಕರಿಸಿದ ಗುರು

ನಾರಾಯಣ ಗುರು ಜೀವನ ಯಾನ 

1854: ತಿರುವನಂತಪುರ ಸಮೀಪ ಚಂಬಳಂತಿ ಗ್ರಾಮದ ವಯಲ್ವಾರಂ ಮನೆತನದಲ್ಲಿ ಆಗಸ್ಟ್‌ 26ರಂದು ಜನನ

1877: ವಾರನಪಲ್ಲಿಯಲ್ಲಿ ರಾಮನ್‌ಪಿಳ್ಳೆ ಆಸಾನ್‌ ಬಳಿ ಸಂಸ್ಕೃತ ಉನ್ನತ ಶಿಕ್ಷಣ

1884: ಅಲೆದಾಟ, ನದೀತಟದಲ್ಲಿ ಆಶ್ರಮ ವಾಸ, ಶೈವಪುರಾಣ, ಅದ್ವೈತ ತತ್ವಗಳನ್ನು ಒಳಗೊಂಡ ಪದ್ಯಗಳ ರಚನೆ

1888: ಅರುವೀಪುರಂನಿಂದ ಜಾತಿಭೇದ, ಕುರುಡು ಆಚರಣೆಗಳ ವಿರುದ್ಧ ಕ್ರಾಂತಿಯ ಆರಂಭ

1903: ಅನುಯಾಯಿಗಳಿಂದ ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್‌’ ಸ್ಥಾಪನೆ

1905: ಶಿವಗಿರಿಯಲ್ಲಿ ನೆಲೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದೇವಸ್ಥಾನಗಳ ಸ್ಥಾಪನೆ

1907: ಎರಡನೇ ಬಾರಿ ಬೆಂಗಳೂರಿಗೆ ಭೇಟಿ (ಮೊದಲ ಭೇಟಿ 1895ರಲ್ಲಿ - ಕುಮಾರನ್‌ ಆಶಾನ್‌ರನ್ನು ವಿದ್ಯಾಭಾಸಕ್ಕೆ ಕರೆತಂದಾಗ. ಕುಮಾರನ್‌ ಮಲೆಯಾಳಿ ನವೋದಯ ಸಾಹಿತ್ಯದ ಪ್ರಮುಖ ಕವಿಯಾಗಿ ಗುರುತಿಸಿಕೊಂಡರು.) 

1908: ಮಂಗಳೂರು ಮತ್ತು ಕಲ್ಲಿಕೋಟೆಯಲ್ಲಿ ದೇವಸ್ಥಾನಗಳ ಸ್ಥಾಪನೆ

1915: ಪುಲಯರು ಮತ್ತಿತರ ದಲಿತರೊಂದಿಗೆ ಸಹಭೋಜನ

1918: ಶ್ರೀಲಂಕಾ ಭೇಟಿ. ದೇವಾಲಯದಲ್ಲಿ ವಿಗ್ರಹದ ಬದಲು ದೀಪದ ಪ್ರತಿಷ್ಠಾಪನೆ

1925: ಶಿವಗಿರಿಗೆ ಮಹಾತ್ಮ ಗಾಂಧಿ ಭೇಟಿ

1928: ಸೆಪ್ಟೆಂಬರ್‌ 20ರಂದು ಶರೀರತ್ಯಾಗ (74 ವರ್ಷ)

(ಮಾಹಿತಿ ಆಧಾರ: ಮಲಾರ್‌ ಜಯರಾಮ ರೈ ಅವರ 'ಸಂತ, ಸುಧಾರಕ ಶ್ರೀ ನಾರಾಯಣ ಗುರು')

Post Comments (+)