ಸುಲಲಿತ ವ್ಯಾಪಾರ: 50ರೊಳಗಿನ ರ‍್ಯಾಂಕ್‌ ಗುರಿ

7
ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯ

ಸುಲಲಿತ ವ್ಯಾಪಾರ: 50ರೊಳಗಿನ ರ‍್ಯಾಂಕ್‌ ಗುರಿ

Published:
Updated:
Prajavani

ಗಾಂಧಿನಗರ : ‘ಸುಗಮ ವ್ಯಾಪಾರ’ ಶ್ರೇಯಾಂಕದಲ್ಲಿ ಭಾರತವು ಮುಂದಿನ ವರ್ಷ 50ರೊಳಗಿನ ರ‍್ಯಾಂಕ್‌ ಪಡೆಯುವ ಗುರಿಯನ್ನು ತಮ್ಮ ಸರ್ಕಾರ ಹಾಕಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ವಿಶ್ವ ಬ್ಯಾಂಕ್‌ನ ‘ಸುಗಮ ವ್ಯಾಪಾರ’ ಶ್ರೇಯಾಂಕದಲ್ಲಿ 75 ಸ್ಥಾನಗಳಷ್ಟು ಮೇಲೇರಿರುವ ಭಾರತ ಈಗ 77ನೇ ರ‍್ಯಾಂಕ್‌  ಹೊಂದಿದೆ ಎಂದು ಮೋದಿ ಹೇಳಿದರು. 

‘ಸುಗಮ ವ್ಯಾಪಾರದಲ್ಲಿ ಅತ್ಯುತ್ತಮ 50 ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವುದಕ್ಕಾಗಿ ಕೆಲಸ ಮಾಡಿ ಎಂದು ನಮ್ಮ ತಂಡಕ್ಕೆ ಸೂಚನೆ ಕೊಟ್ಟಿದ್ದೇನೆ. ನಮ್ಮಲ್ಲಿನ ನಿಯಂತ್ರಣಗಳು ಮತ್ತು ಪ್ರಕ್ರಿಯೆಗಳು ಜಗತ್ತಿನ ಅತ್ಯುತ್ತಮ ವ್ಯವಸ್ಥೆಗಳ ಜತೆಗೆ ಹೋಲಿಕೆ ಮಾಡುವಂತಿರಬೇಕು. ನಾವು ಭಾರತದಲ್ಲಿ ವ್ಯಾಪಾರ ಮಾಡುವುದನ್ನು ಸುಲಭವಾಗಿಸಿದ್ದೇವೆ’ ಎಂದು ‘ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌’ ಹೆಸರಿನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶದಲ್ಲಿ ಮೋದಿ ಪ್ರತಿಪಾದಿಸಿದರು. 

ವಿವಿಧ ದೇಶಗಳ ರಾಜಕೀಯ ಮತ್ತು ಉದ್ಯಮ ಕ್ಷೇತ್ರದ ನಾಯಕರ ಉಪಸ್ಥಿತಿಯಲ್ಲಿ ಮೋದಿ ಅವರು ಮಾತನಾಡಿದರು. ಸರ್ಕಾರಕ್ಕೆ ಒತ್ತು ನೀಡುವುದನ್ನು ಕಡಿಮೆ ಮಾಡಿ ಉತ್ತಮ ಆಡಳಿತಕ್ಕೆ ಒತ್ತು ನೀಡಲು ಕೆಲಸ ಮಾಡಲಾಗುತ್ತಿದೆ. ‘ಸುಧಾರಣೆ, ಸಾಧನೆ, ಪರಿವರ್ತನೆ ಮತ್ತು ಇನ್ನಷ್ಟು ಸಾಧನೆ’ (ರಿಫಾರ್ಮ್‌, ಪರ್ಫಾರ್ಮ್‌, ಟ್ರಾನ್ಸ್‌ಫಾರ್ಮ್‌ ಎಂಡ್‌ ಫರ್ದರ್‌ ಪರ್ಫಾರ್ಮ್‌) ಎಂಬುದು ನಮ್ಮ ಮಂತ್ರ. ದಿಕ್ಕು ಮತ್ತು ಕೆಲಸದ ತೀವ್ರತೆಯಲ್ಲಿ ಆಗಿರುವ ಬದಲಾವಣೆ ನಾಲ್ಕು ವರ್ಷಗಳ ತಮ್ಮ ಆಡಳಿತದಲ್ಲಿ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮೋದಿ ಹೇಳಿದರು. 

ನವಭಾರತ ಸೃಷ್ಟಿಗೆ ನೆರವಾಗುವ ರಸ್ತೆ, ಬಂದರು, ರೈಲ್ವೆ, ವಿಮಾನ ನಿಲ್ದಾಣ, ದೂರಸಂಪರ್ಕ, ಡಿಜಿಟಲ್‌ ಜಾಲ, ವಿದ್ಯುತ್‌ನಂತಹ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ತಮ್ಮ ಸರ್ಕಾರ ಉತ್ಸುಕವಾಗಿದೆ ಎಂದೂ ಹೇಳಿದರು. 

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2003ರಲ್ಲಿ ‘ವೈಬ್ರಂಟ್‌ ಗುಜರಾತ್‌’ ಸಮಾವೇಶ ಆರಂಭವಾಗಿತ್ತು. ಭಾರತದ ಅತ್ಯುತ್ತಮ ಹೂಡಿಕೆ ತಾಣ ಎಂದು ಗುಜರಾತನ್ನು ಬಿಂಬಿಸುವುದು ಇದರ ಉದ್ದೇಶವಾಗಿತ್ತು. 

ಅಂಬಾನಿ, ಅದಾನಿ ಹೂಡಿಕೆ ಭರವಸೆ

ಮುಂದಿನ ಮೂರರಿಂದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ ಸುಮಾರು ₹4 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಭಾರತದ ಉದ್ಯಮ ದಿಗ್ಗಜರಾದ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ಕುಮಾರಮಂಗಲಂ ಬಿರ್ಲಾ ಮುಂತಾದವರು ಗುಜರಾತ್‌ ಹೂಡಿಕೆದಾರರ ಸಮಾವೇಶದಲ್ಲಿ ವಾಗ್ದಾನ
ಮಾಡಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಮೂಲಕ ಗುಜರಾತ್‌ನಲ್ಲಿನ ಹೂಡಿಕೆಯನ್ನು ದ್ವಿಗುಣಗೊಳಿಸಿ 2028ರ ಹೊತ್ತಿಗೆ ಇದು ₹6 ಲಕ್ಷ ಕೋಟಿಗೆ ಏರುವಂತೆ ಮಾಡಲಾಗುವುದು ಎಂದು ಮುಕೇಶ್‌ ಹೇಳಿದರು. ಇದರಿಂದ ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಮುಂದಿನ ಐದು ವರ್ಷಗಳಲ್ಲಿ ₹55 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಅದಾನಿ ಭರವಸೆ ಕೊಟ್ಟರು. ಸಾಮರ್ಥ್ಯ ವೃದ್ಧಿ ಮತ್ತು ಹೊಸ ಯೋಜನೆಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ ₹15 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಆದಿತ್ಯಾ ಬಿರ್ಹಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಹೇಳಿದರು.

‘ಉದ್ಯೋಗ ಸೃಷ್ಟಿ ಅಗತ್ಯ’

ಯುವ ಜನರಿಗಾಗಿ ಉದ್ಯೋಗ ಸೃಷ್ಟಿಯ ಅಗತ್ಯ ಇದೆ ಎಂಬುದನ್ನು ಅವರು ಒಪ್ಪಿಕೊಂಡರು. ತಮ್ಮ ಸರ್ಕಾರದ ಗುರಿ ‘ಸುಗಮ ವ್ಯಾಪಾರ’ ಮಾತ್ರವಲ್ಲ, ‘ಜನರ ಜೀವನವನ್ನು ಸುಗಮಗೊಳಿಸುವುದು’ ಕೂಡ ಆಗಿದೆ ಎಂದು ಹೇಳಿದರು.

‘ಯುವ ಜನರೇ ಹೆಚ್ಚು ಇರುವ ಈ ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಅವಕಾಶಗಳು ಮತ್ತು ಉತ್ತಮ ಮೂಲಸೌಕರ್ಯ ಸೃಷ್ಟಿಸಬೇಕು ಎಂಬುದರ ಅರಿವು ತಮಗೆ ಇದೆ. ಈ ಎರಡೂ ಹೂಡಿಕೆ ಜತೆಗೆ ನಂಟು ಹೊಂದಿವೆ. ಹಾಗಾಗಿಯೇ, ತಯಾರಿಕೆ ಮತತು ಮೂಲಸೌಕರ್ಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಸಾಧಾರಣವಾದ ಒತ್ತು ನೀಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !