ಮಲಗಿದ್ದ ಆನೆ ಎದ್ದು ನಿಂತಿದೆ: ಮೋದಿ

7
ಭಾರತದ ಆರ್ಥಿಕತೆಯನ್ನು ಬಣ್ಣಿಸಿದ ಪ್ರಧಾನಿ

ಮಲಗಿದ್ದ ಆನೆ ಎದ್ದು ನಿಂತಿದೆ: ಮೋದಿ

Published:
Updated:

ನವದೆಹಲಿ: ಮಲಗಿದ್ದ ಆನೆ ಎದ್ದು ಓಡುವಂತೆ ಭಾರತ ಅರ್ಥ ವ್ಯವಸ್ಥೆ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಯುಪಿಎ ಸರ್ಕಾರದ ದುರ್ಬಲ ಆರ್ಥಿಕ ನೀತಿಗಳಿಂದಾಗಿ ಮಲಗಿದ ಆನೆಯಂತೆ ಜಡವಾಗಿದ್ದ ದೇಶದ ಆರ್ಥಿಕತೆ ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲೆ ಮೈಕೊಡವಿ ಎದ್ದು ನಿಂತಿದೆ. ವಿಶ್ವದ ಆರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದೆಹಲಿಯ ಕೆಂಪುಕೋಟೆಯ ಮೇಲೆ ಬುಧವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ, ತಮ್ಮ ಆಡಳಿತ ಅವಧಿಯಲ್ಲಿ ಭಾರತ ತಲೆ ಎತ್ತಿನಿಂತ ಬಗೆಯನ್ನು ಎಳೆ, ಎಳೆಯಾಗಿ ಬಿಡಿಸಿಟ್ಟರು.

ಭಾರತ ಈಗ ಸುಧಾರಣೆ, ಸಾಧನೆ ಮತ್ತು ಬದಲಾವಣೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಮಲಗಿದ ಆನೆ ಎಂದು ಭಾರತವನ್ನು ಮೂದಲಿಸುತ್ತಿದ್ದ ಇಡೀ ಜಗತ್ತು ಈ ಸಾಧನೆಯನ್ನು ಮುಕ್ತವಾಗಿ ಶ್ಲಾಘಿಸುತ್ತಿವೆ ಎಂದರು.

ಕೆಂಪುಕೋಟೆಯ ಮೇಲಿಂದ ಐದು ವರ್ಷಗಳ ಎನ್‌ಡಿಎ ಸಾಧನೆಯನ್ನು ಬಣ್ಣಿಸಿದ ಪ್ರಧಾನಿ, ಇದೇ ವೇಳೆ ಅನೇಕ ಹೊಸ ಯೋಜನೆಗಳನ್ನು ಘೋಷಿಸಿದರು.

ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ ₹10 ಸಾವಿರ ಕೋಟಿ ವೆಚ್ಚದ ಮಾನವ ಸಹಿತ ಗಗನನೌಕೆಯನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ. ಬಾಹ್ಯಾಕಾಶದಲ್ಲೂ ಭಾರತದ ತ್ರಿವರ್ಣ ಧ್ವಜ ರಾಜಾಜಿಸಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

50 ಕೋಟಿ ಭಾರತೀಯರಿಗೆ ಆರೋಗ್ಯ ಸೇವೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸೆಪ್ಟೆಂಬರ್‌ನಲ್ಲಿ ವಿಧ್ಯುಕ್ತ ಚಾಲನೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಐದು ವರ್ಷಗಳ ಎನ್‌ಡಿಎ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಪಡೆದ ಭಾರತದ ಸಾವಿರಾರು ಗ್ರಾಮಗಳು ಬೆಳಕು ಕಂಡಿವೆ ಎಂದು ಪ್ರಧಾನಿ ಹೇಳಿದರು.

ರೈತರಿಗೆ ಕನಿಷ್ಠ ಬೆಂಬಲ ಬೆಲೆ, ತ್ರಿವಳಿ ತಲಾಖ್‌ ನಿಷೇಧ ಕಾನೂನು, ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳಿಗೆ ಕಡಿವಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಂತಹ ದಿಟ್ಟ ನಿರ್ಧಾರಗಳನ್ನು ಎನ್‌ಡಿಎ ಸರ್ಕಾರ ತೆಗೆದುಕೊಂಡಿದೆ ಎಂದು ಮೋದಿ ಹೇಳಿದರು.

‘2013ರವರೆಗೆ ಅಧಿಕಾರದಲ್ಲಿದ್ದ ಸರ್ಕಾರದ ವೇಗದಲ್ಲಿ ನಾವು ಕೆಲಸ ಮಾಡಿದ್ದರೆ ಎಲ್ಲರಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು, ಭಾರತವನ್ನು ಬಹಿರ್ದೆಸೆ ಮುಕ್ತ ಮಾಡಲು ಮತ್ತು ಪ್ರತಿ ಕುಟುಂಬಕ್ಕೆ ಅಡುಗೆ ಅನಿಲ ಪೂರೈಸಲು ಕನಿಷ್ಠ ಇನ್ನೂ ಒಂದು ಶತಮಾನ ಬೇಕಾಗುತ್ತಿತ್ತು’ ಎಂದು ಅವರು ಲೇವಡಿ ಮಾಡಿದರು.

**

ಪ್ರಧಾನಿ ಭಾಷಣದ ಪ್ರಮುಖ ಅಂಶಗಳು

* ತ್ರಿವಳಿ ತಲಾಖ್‌ ನಿಷೇಧ ಕಾನೂನು ಜಾರಿಯಾಗುವುದು ಅನೇಕರಿಗೆ ಬೇಕಿಲ್ಲ. ಹೀಗಾಗಿ ವಿರೋಧ ಪಕ್ಷಗಳು ಸಂಸತ್‌ನಲ್ಲಿ ಮಸೂದೆ ಅಂಗೀಕಾರಕ್ಕೆ ಅಡ್ಡಗಾಲು ಹಾಕುತ್ತಿವೆ

* ಭಾರತೀಯ ಸೇನೆಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಲು ಅವಕಾಶ. ಎಸ್‌ಎಸ್‌ಸಿ ಮೂಲಕ ಸೇನೆಗೆ ಭರ್ತಿಯಾಗಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಶಾಶ್ವತ ಆಯೋಗ ಸ್ಥಾಪನೆ

* ‘ಬಿತ್ತನೆಯ ಬೀಜದಿಂದ ಬಜಾರದವರೆಗೆ ಯೋಜನೆ’ಯಿಂದಾಗಿ ಕೃಷಿ ವಲಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.

* ಶೀಘ್ರದಲ್ಲಿ ಹೊಸ ಕೃಷಿ ನೀತಿ ಜಾರಿಯಾಗಲಿದ್ದು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು

* ಕೇವಲ ಘೋಷಣೆಯಾಗಿ ಉಳಿದಿದ್ದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಯಿಂದ ರೈತರ ಬೆಳಕಿನಲ್ಲಿ ಬೆಳಕು ಮೂಡಿಸುವ ಯತ್ನ

* ದೆಹಲಿಯಿಂದ ದೂರವಾಗಿದ್ದ ಈಶಾನ್ಯ ರಾಜ್ಯಗಳು ಭಾವನಾತ್ಮಕವಾಗಿ ಭಾರತದ ಮುಖ್ಯವಾಹಿನಿಯೊಂದಿಗೆ ಬೆರತಿವೆ. ದೆಹಲಿಯನ್ನೇ ಈಶಾನ್ಯ ರಾಜ್ಯಗಳ ಬಾಗಿಲು ಬಳಿ ತೆಗೆದುಕೊಂಡು ಹೋಗಿದ್ದೇವೆ

* ಮುದ್ರಾ ಯೋಜನೆ ಅಡಿ 1.3 ಕೋಟಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮಂಜೂರು

* ಅನೇಕ ದಶಕಗಳಿಂದ ನೆನಗುದಿಗೆ ಬಿದ್ದಿದ್ದ ನಿವೃತ್ತ ಯೋಧರ ಪಿಂಚಣಿ ಯೋಜನೆ ‘ಒಂದು ಶ್ರೇಣಿ, ಒಂದು ರ‍್ಯಾಂಕ್‌’ ಜಾರಿ

* ಸ್ವಚ್ಛ ಭಾರತ ಯೋಜನೆಯಿಂದ ಲಕ್ಷಾಂತರ ಮಕ್ಕಳು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯೇ ಈ ಯೋಜನೆಯನ್ನು ಶ್ಲಾಘಿಸಿದೆ.

**

ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ

ನ್ಯೂಯಾರ್ಕ್‌: ಭಾರತದ ಪ್ರಜಾಪ್ರಭುತ್ವ, ವೈವಿಧ್ಯತೆ ವಿಶ್ವಕ್ಕೆ ಮಾದರಿ ಎಂದು ಅಮೆರಿಕ ಬಣ್ಣಿಸಿದೆ.

ಸ್ವಾತಂತ್ರೋತ್ಸವ ಶುಭಾಶಯ ಕೋರಿರುವ  ಶ್ವೇತಭವನ, ಭಾರತದ ಸಹಬಾಳ್ವೆ, ಸಾಮರಸ್ಯ ದಕ್ಷಿಣ ಏಷ್ಯಾಕ್ಕೆ ಮಾತ್ರವಲ್ಲ ಜಗತ್ತಿಗೆ ಅನುಕರಣೀಯ ಎಂದು ಹೇಳಿದೆ.

**

ಮುಖ್ಯಾಂಶಗಳು

* ಐದು ವರ್ಷ ಅವಧಿ ಪೂರೈಸಲಿರುವ ನರೇಂದ್ರ ಮೋದಿ ಪ್ರಧಾನಿಯಾಗಿ ಕೊನೆಯ ಭಾಷಣ

* ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಕವನದ ಸಾಲು ಉಲ್ಲೇಖಿಸಿ ಭಾಷಣ ಆರಂಭ

* 80 ನಿಮಿಷ ಭಾಷಣದಲ್ಲಿ ಎನ್‌ಡಿಎ ಸರ್ಕಾರದ ರಿಪೋರ್ಟ್‌ ಕಾರ್ಡ್‌ ಒಪ್ಪಿಸಿದ ಪ್ರಧಾನಿ

* ಮುಂದಿನ ಮೂರು ದಶಕಗಳ ಕಾಲ ಭಾರತ ಜಾಗತಿಕ ಅರ್ಥ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ

ಬರಹ ಇಷ್ಟವಾಯಿತೆ?

 • 70

  Happy
 • 4

  Amused
 • 1

  Sad
 • 0

  Frustrated
 • 12

  Angry

Comments:

0 comments

Write the first review for this !