ಸೋಮವಾರ, ಅಕ್ಟೋಬರ್ 14, 2019
22 °C
ಪ್ರಧಾನಿಯನ್ನು ‘ರಾಷ್ಟ್ರಪಿತ’ ಎಂದ ಅಮೃತಾ ಫಡಣವೀಸ್: ವ್ಯಾಪಕ ಆಕ್ಷೇಪ

ಮೋದಿ ನಿಮಗೆ ‘ಪಿತ’ ಇರಬಹುದು, ನಮಗಲ್ಲ: ಮಹಾ ಸಿಎಂ ಪತ್ನಿಗೆ ಟ್ವೀಟಿಗರ ತರಾಟೆ

Published:
Updated:

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಫಡಣವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಮಾಡಿದ್ದ ಟ್ವೀಟ್‌ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಮಂಗಳವಾರ ಮೋದಿ ಅವರ 69ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಿ ಅಮೃತಾ ಫಡಣವೀಸ್ ಟ್ವೀಟ್ ಮಾಡಿದ್ದರು. ಅದರಲ್ಲಿ, ‘ಸಮಾಜ ಸುಧಾರಣೆಗೆ ಪಟ್ಟುಹಿಡಿದು ಕೆಲಸ ಮಾಡುವಂತೆ ನಮ್ಮನ್ನು ಪ್ರೇರೇಪಿಸುವ – ರಾಷ್ಟ್ರಪಿತ ನರೇಂದ್ರ ಮೋದಿ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಯಾಗಿ, ‘ನಿಮಗೆ ಪಿತ, ನಮಗಲ್ಲ’ ಎಂದು ಸೂರ್ಯಕಾಂತ್ ಜಾಧವ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಇಂತಹ ಹೇಳಿಕೆಗಳನ್ನು ವೈಯಕ್ತಿಕವಾಗಿ ನೀಡಿ. ದೇಶದ ಪರವಾಗಿ ಹೇಳಬೇಡಿ’ ಎಂದು ಸಿ.ಎ. ಭಾರತೀ ಈಶ್ವರ್ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಭಕ್ತರಿಗೆ ಪಿತ ಹೊರತು ದೇಶಕ್ಕಲ್ಲ. ಭಕ್ತರೇ ದೇಶವೂ ಅಲ್ಲ’ ಎಂದು ಪ್ರದೀಪ್ ಗುಪ್ತಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ನದೀಮ್ ಖಾನ್ ಎಂಬುವವರು ಮಹಾತ್ಮ ಗಾಂಧಿ ಅವರ ಚಿತ್ರವನ್ನು ಪ್ರಕಟಿಸಿ ಅದರ ಜತೆ, ನಿಮ್ಮ ಮಾಹಿತಿಗಾಗಿ, ‘ಇವರು ರಾಷ್ಟ್ರಪಿತ’ ಎಂದು ಉಲ್ಲೇಖಿಸಿದ್ದಾರೆ.

‘ಒಬ್ಬರೇ ರಾಷ್ಟ್ರಪಿತ ಇರುವುದು, ಅದು ಮೋಹನದಾಸ್ ಕರಮಚಂದ್ ಗಾಂಧಿ. ಇದು ವಿಶ್ವಕ್ಕೇ ತಿಳಿದಿದೆ. ನೀವೆಷ್ಟೇ ಕಠಿಣ ಪ್ರಯತ್ನ ಪಟ್ಟರೂ ಇದನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಸೂರ್ಯ ವೆದುಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಮೃತಾ ಫಡಣವೀಸ್ ಹೇಳಿಕೆಯನ್ನು ವಿಭಿನ್ನವಾಗಿ ಪ್ರಕಟಿಸುವ ಮೂಲಕ ‘ದಿ ಟೆಲಿಗ್ರಾಫ್‌’ ಆಂಗ್ಲ ಪತ್ರಿಕೆ ಬುಧವಾರ ಓದುಗರ ಗಮನ ಸೆಳೆದಿದೆ. ಮುಖಪುಟದಲ್ಲಿ ಲೀಡ್ ಸುದ್ದಿಯ ಬಳಿ ‘ರಾಷ್ಟ್ರಪಿತ ಯಾರು?’ ಎಂಬ ಪ್ರಶ್ನೆಯನ್ನು ನೀಡಿದ್ದು ಅದರ ಕೆಳಭಾಗದಲ್ಲಿ ಸ್ವಲ್ಪ ಜಾಗ ಖಾಲಿ ಬಿಟ್ಟಿದೆ. ಅದರ ಕೆಳಗೆ ಉತ್ತರದ ರೂಪದಲ್ಲಿ ಅಮೃತಾ ಫಡಣವೀಸ್ ಅವರ ಟ್ವೀಟ್‌ ಅನ್ನು ತಲೆಕೆಳಗಾಗಿ ಪ್ರಕಟಿಸಿದೆ. ಜತೆಗೆ, ಉತ್ತರಕ್ಕಾಗಿ ಪತ್ರಿಕೆಯನ್ನು ತಲೆಕೆಳಗಾಗಿ ತಿರುಗಿಸಿ ಓದಿ ಎಂದು ಸಲಹೆ ನೀಡಿದೆ.

ಪತ್ರಿಕೆಯ ವಿಭಿನ್ನ ಪ್ರಸ್ತುತಿಯೂ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Post Comments (+)