ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ಅಧಿಕಾರದಾಹಕ್ಕೆ ದೇಶ ಬಲಿ: ಮೋದಿ

ಪ್ರಧಾನಿ ಮೋದಿ ಬ್ಲಾಗ್‌ ಬರಹ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
Last Updated 20 ಮಾರ್ಚ್ 2019, 20:24 IST
ಅಕ್ಷರ ಗಾತ್ರ

ನವದೆಹಲಿ: ‘ಒಂದು ಕುಟುಂಬದ ಅಧಿಕಾರ ದಾಹಕ್ಕೆ ದೇಶ ಯಾವ ಬೆಲೆ ತೆತ್ತಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮದಿಂದ ಸಂಸತ್ತಿನವರೆಗೆ, ಸೈನಿಕರಿಂದ ವಾಕ್‌ ಸ್ವಾತಂತ್ರ್ಯದವರೆಗೆ, ಸಂವಿಧಾನದಿಂದ ವಿವಿಧ ಸಂಸ್ಥೆಗಳವರೆಗೆ ಎಲ್ಲವನ್ನೂ ಕಾಂಗ್ರೆಸ್‌ ಅಪಮಾನಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ತಮ್ಮ ಬ್ಲಾಗ್‌ ಮೂಲಕ ಕಾಂಗ್ರೆಸ್‌ ಪಕ್ಷದ ವಿರುದ್ಧ ಅವರುಬುಧವಾರ ವಾಗ್ದಾಳಿ ನಡೆಸಿದ್ದಾರೆ. ‘ವಂಶಾಡಳಿತ’ ವಿಚಾರವನ್ನು ಪುನಃ ಪ್ರಸ್ತಾಪ ಮಾಡಿರುವ ಮೋದಿ, ‘ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ನ್ಯಾಯಾಂಗ, ಸಂಸತ್ತು, ಮಾಧ್ಯಮ, ಸೇನೆ ಮುಂತಾಗಿ ಎಲ್ಲ ಸಂಸ್ಥೆಗಳನ್ನೂ ಅವಮಾನಿಸಿದೆ’ ಎಂದಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರವನ್ನು ಉಲ್ಲೇಖಿಸುತ್ತಾ, ‘ವಂಶಾಡಳಿತದ ಪಕ್ಷಗಳು ಯಾವತ್ತೂ ಮುಕ್ತ ಮತ್ತು ಸ್ವತಂತ್ರ ಮಾಧ್ಯಮವನ್ನು ಇಷ್ಟಪಡುವುದಿಲ್ಲ. ಸಂವಿಧಾನಕ್ಕೆ ಮಾಡಿರುವ ಮೊದಲ ತಿದ್ದುಪಡಿಯಲ್ಲೇ ಕಾಂಗ್ರೆಸ್‌ ಪಕ್ಷವು ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಪ್ರಯತ್ನ ಮಾಡಿದ್ದರಲ್ಲಿ ಅಚ್ಚರಿ ಇಲ್ಲ. ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೆ ಅಂಥವರನ್ನು ಜೈಲಿಗಟ್ಟುವ ವ್ಯವಸ್ಥೆ ಯುಪಿಎ ಅವಧಿಯಲ್ಲಿತ್ತು. ಕರ್ನಾಟಕದಲ್ಲೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿರುವ ಕೆಲವು ಯುವಕರನ್ನು ಬಂಧಿಸಿರುವುದನ್ನು ದೇಶವೇ ಕಂಡಿದೆ. ಒಂದು ಕುಟುಂಬದ ಅಧಿಕಾರ ದಾಹವನ್ನು ತಣಿಸಲು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಸಹ ಹೇರಲಾಗಿತ್ತು’ ಎಂದು ಮೋದಿ ಬರೆದಿದ್ದಾರೆ.

ನ್ಯಾಯಾಂಗದ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಇಂದಿರಾ ಗಾಂಧಿ ಅವರು ‘ಬದ್ಧತೆಯ ನ್ಯಾಯಾಂಗ’ವನ್ನು ಬಯಸಿದ್ದರು. ನ್ಯಾಯಾಂಗವು ಸಂವಿಧಾನಕ್ಕೆ ಬದ್ಧತೆ ತೋರುವ ಬದಲು ಕುಟುಂಬಕ್ಕೆ ಬದ್ಧತೆ ತೋರಬೇಕೆಂದು ಅವರು ಬಯಸಿದ್ದರು. ಕುಟುಂಬಕ್ಕೆ ಬದ್ಧರಾಗದಿರುವ ಕಾರಣಕ್ಕೆ ಅನೇಕ ಗೌರವಾನ್ವಿತ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಯಾಗುವುದರಿಂದ ವಂಚಿತರಾಗಿದ್ದಾರೆ. ತಮ್ಮ ವಿರುದ್ಧ ತೀರ್ಪು ಬಂದರೆ ಅದನ್ನು ತಿರಸ್ಕರಿಸುವುದು ಬಳಿಕ ನ್ಯಾಯಮೂರ್ತಿಗಳನ್ನು ಅವಮಾನಿಸುವುದು ಅದಕ್ಕೂ ಜಗ್ಗದಿದ್ದರೆ ದೋಷಾರೋಪದ ಬೆದರಿಕೆ ಒಡ್ಡುವುದು ಕಾಂಗ್ರೆಸ್‌ನವರು ಅನುಸರಿಸಿಕೊಂಡು ಬಂದ ವಿಧಾನ’ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ ಪಕ್ಷವು ಸೇನೆಯನ್ನು ಆದಾಯದ ಮೂಲವಾಗಿಸಿತ್ತು. ಆ ಕಾರಣದಿಂದಾಗಿಯೇ ಸೇನೆಗೆ ಸರಿಯಾದ ಗೌರವ ಸಿಕ್ಕಿರಲಿಲ್ಲ. 1947ರ ಬಳಿಕ ರಚನೆಯಾದ ಕಾಂಗ್ರೆಸ್‌ ನೇತೃತ್ವದ ಪ್ರತಿಯೊಂದು ಸರ್ಕಾರವೂ ಸೇನಾ ‘ಖರೀದಿ ಹಗರಣ’ ನಡೆಸಿರುವುದು ಕಾಣಿಸುತ್ತದೆ. ಸೇನಾ ಮುಖ್ಯಸ್ಥನನ್ನು ‘ಗೂಂಡಾ’ ಎಂದು ಕರೆದ ವ್ಯಕ್ತಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಿರುವುದನ್ನು ನೋಡಿದರೆ ಸೇನೆಯ ಬಗ್ಗೆ ಆ ಪಕ್ಷಕ್ಕಿರುವ ಗೌರವ ಅರ್ಥವಾಗುತ್ತದೆ ಎಂದಿದ್ದಾರೆ.

2014ರ ಚುನಾವಣೆಯಲ್ಲಿ ದೇಶದ ಜನರು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ ‘ವಿಕಾಸ’ ರಾಜಕಾರಣಕ್ಕೆ ಮತ ನೀಡಿದ್ದರು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT