ಅಂಬಾನಿ ರಕ್ಷಣೆ ಮೋದಿ ಕಾಯಕ: ರಾಹುಲ್‌ ಗಾಂಧಿ ಮತ್ತೆ ಆರೋಪ‍

7
ರಫೇಲ್‌ ವಿವಾದ: ಭ್ರಷ್ಟ ಕುಟುಂಬದ ಕುಡಿ ರಾಹುಲ್‌: ಬಿಜೆಪಿ ತಿರುಗೇಟು

ಅಂಬಾನಿ ರಕ್ಷಣೆ ಮೋದಿ ಕಾಯಕ: ರಾಹುಲ್‌ ಗಾಂಧಿ ಮತ್ತೆ ಆರೋಪ‍

Published:
Updated:

ನವದೆಹಲಿ: ಫ್ರಾನ್ಸ್‌ನಿಂದ ರಫೇಲ್‌ ಖರೀದಿ ಒಪ್ಪಂದ ವಿವಾದದ ಬಿಸಿ ಇನ್ನಷ್ಟು ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇರವಾಗಿ ಆರೋಪಿಸಿದ್ದಾರೆ. 

ದೇಶ ಕಾಯುವ ಬದಲಿಗೆ ಉದ್ಯಮಿ ಅನಿಲ್‌ ಅಂಬಾನಿ ಅವರ ಹಿತಾಸಕ್ತಿ ರಕ್ಷಿಸುವುದೇ ಮೋದಿ ಅವರ ಗುರಿಯಾಗಿದೆ. ರಫೇಲ್‌ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು  ಮುಚ್ಚಿ ಹಾಕುವುದಕ್ಕಾಗಿಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫ್ರಾನ್ಸ್‌ಗೆ ಹೋಗಿದ್ದಾರೆ ಎಂದು ರಾಹುಲ್‌ ಆಪಾದಿಸಿದ್ದಾರೆ. 

ರಫೇಲ್‌ ಒಪ್ಪಂದದ ಮೂಲಕ ಉದ್ಯಮಿ ಅನಿಲ್‌ ಅಂಬಾನಿ ಜೇಬಿಗೆ ₹30 ಸಾವಿರ ಕೋಟಿ ತುಂಬಿಸಲು ಮೋದಿ ನೆರವಾಗಿದ್ದು, ಅವರೊಬ್ಬ ಭ್ರಷ್ಟ ವ್ಯಕ್ತಿ. ಈ ಒಪ್ಪಂದದಲ್ಲಿ ಅವರ ಪಾತ್ರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಹುಲ್‌ ಒತ್ತಾಯಿಸಿದ್ದಾರೆ. 

‘ರಫೇಲ್ ಯುದ್ಧ ವಿಮಾನ ಖರೀದಿ ಮಾತುಕತೆ ವೇಳೆ ರಿಲಯನ್ಸ್‌ ಡಿಫೆನ್ಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೆ ನಮ್ಮನ್ನು ದೂಡಲಾಗಿತ್ತು’ ಎಂದು ‘ಡಸಾಲ್ಟ್ ಏವಿಯೇಷನ್‌’ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ರಾಹುಲ್‌ ತಿಳಿಸಿದರು.

‘ರಫೇಲ್ ಯುದ್ಧ ವಿಮಾನ ಖರೀದಿ ಮಾತುಕತೆ ವೇಳೆ ರಿಲಯನ್ಸ್‌ ಡಿಫೆನ್ಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಭಾರತದ ಜೊತೆಗೆ ‘ರಫ್ತು ಒಪ್ಪಂದ’ ಮಾಡಿಕೊಳ್ಳಲು ರಿಲಯನ್ಸ್‌ ಡಿಫೆನ್ಸ್‌ ಜೊತೆಗಿನ ಪಾಲುದಾರಿಕೆ ‘ಅನಿವಾರ್ಯ’ ಮತ್ತು ‘ಕಡ್ಡಾಯ’ವಾಗಿತ್ತು’ ಎಂದು ರಫೇಲ್‌ ಯುದ್ಧವಿಮಾನತಯಾರಿಸುವ ‘ಡಸಾಲ್ಟ್ ಏವಿಯೇಷನ್‌’ನ ಉನ್ನತ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಫ್ರಾನ್ಸ್‌ನ ನಿಯತಕಾಲಿಕ ‘ಮಿಡಿಯಾಪಾರ್ಟ್‌’ ಬುಧವಾರ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಹೇಳಿದೆ.

‘ರಿಲಯನ್ಸ್‌ ಡಿಫೆನ್ಸ್‌ ಜೊತೆಗೂಡಿ ಅಭಿವೃದ್ಧಿಪಡಿಸುತ್ತಿರುವ ಉದ್ಯಮದ ಬಗ್ಗೆ 2017ರ ಮೇ 11ರಂದು ಡಸಾಲ್ಟ್ ಏವಿಯೇಷನ್‌ನ ಉಪಮುಖ್ಯಸ್ಥ ಲೊಯಿಕ್ ಸೆಗಲೆನ್ ಅವರು, ಸಂಸ್ಥೆಯ ಕಾರ್ಮಿಕ ಪ್ರತಿನಿಧಿಗಳಿಗೆ ನೀಡಿದ ಮಾಹಿತಿಯ ಪ್ರತಿ ತನ್ನ ಬಳಿ ಇದೆ. ಸಂಸ್ಥೆಯ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಈ ವರದಿ ಸಿದ್ಧಪಡಿಸಲಾಗಿದೆ’ ಎಂದು ಮಿಡಿಯಾಪಾರ್ಟ್ ಹೇಳಿಕೊಂಡಿದೆ. 

‘ಭಾರತದೊಂದಿಗೆ ರಫ್ತು ಒಪ್ಪಂದ ಮಾಡಿಕೊಳ್ಳಲು ರಿಲಯನ್ಸ್‌ಗೆ ನಮ್ಮ ಪಾಲುದಾರ ಸಂಸ್ಥೆಯ ಮಾನ್ಯತೆ ಕೊಡು
ವುದು ಅನಿವಾರ್ಯವಾಗಿತ್ತು. ಇದು ಒಪ್ಪಂದಕ್ಕಾಗಿ ನಾವು ಕೊಟ್ಟ ‘ಪರಿಹಾರ’ ಎಂದು ಸೆಗಲೆನ್ ವಿವರಿಸಿದ್ದರು’ ಎಂದು ವರದಿಯಲ್ಲಿ ಹೇಳಲಾಗಿದೆ. 

ರಫೇಲ್‌ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್‌ ಕಂಪೆನಿಯನ್ನು ಭಾರತೀಯ ಪಾಲುದಾರನನ್ನಾಗಿ ಪರಿಗಣಿಸುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂದು ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಈಚೆಗೆ ಹೇಳಿದ್ದರು.

**

‘ರಾಹುಲ್‌ ಸುಳ್ಳ’

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಷ್ಟ್ರೀಯ ಭದ್ರತೆಯನ್ನು ನಿರ್ಲಕ್ಷಿಸಿ, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸುಳ್ಳನ್ನು ಹರಡುವ ಮೂಲಕ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟ ಎಂಬ ರಾಹುಲ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ, ಕಾಂಗ್ರೆಸ್‌ ಅಧ್ಯಕ್ಷರು, ಅನೇಕ ರಕ್ಷಣಾ ಒಪ್ಪಂದಗಳಲ್ಲಿ ಮಧ್ಯವರ್ತಿ ಸ್ಥಾನ ವಹಿಸಿ ಹಣಗಳಿಸಿರುವ ಕುಟುಂಬದಿಂದ ಬಂದವರು ಎಂದು ಲೇವಡಿ ಮಾಡಿದ್ದಾರೆ.

‘2014ಕ್ಕಿಂತ ಮುನ್ನ ನಡೆದ ಎಲ್ಲ ರಕ್ಷಣಾ ಒಪ್ಪಂದಗಳಲ್ಲಿ ರಾಹುಲ್‌ ಅವರ ಕುಟುಂಬ ಹಣ ಪಡೆದಿದೆ. ಗಾಂಧಿ ಹಾಗೂ ಅವರ ಪಕ್ಷವು ದೇಶದ ರಕ್ಷಣೆಯನ್ನು ಗಂಡಾಂತರಕ್ಕೆ ಒಳಪಡಿಸುತ್ತ ಬಂದಿದೆ’ ಎಂದು ಆಪಾದಿಸಿದ್ದಾರೆ.

 **

ಆಯ್ಕೆಗೆ ಒತ್ತಡವೇ ಇರಲಿಲ್ಲ: ಡಸಾಲ್ಟ್‌

ರಫೇಲ್‌ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್ ಕಂಪನಿಗೆ ಪಾಲುದಾರಿಕೆ ನೀಡಿರುವುದು ತನ್ನದೇ ನಿರ್ಧಾರ. ಇದಕ್ಕೆ ಯಾವುದೇ ಒತ್ತಡ ಇರಲಿಲ್ಲ ಎಂದು ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಸ್ಪಷ್ಟೀಕರಣ ನೀಡಿದೆ. 

ರಿಲಯನ್ಸ್‌ ಡಿಫೆನ್ಸ್‌ ಜತೆಗೆ ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ರಫೇಲ್‌ ಯುದ್ಧ ವಿಮಾನವನ್ನು ತಯಾರಿಸುವ ಡಸಾಲ್ಟ್‌ ಏವಿಯೇಷನ್‌ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಫ್ರಾನ್ಸ್‌ನ ಮಾಧ್ಯಮ ಸಂಸ್ಥೆ ಮಿಡಿಯಾಪಾರ್ಟ್‌ನಲ್ಲಿ ವರದಿಯಾದ ತಕ್ಷಣವೇ ಈ ಸ್ಪಷ್ಟೀಕರಣ ಪ್ರಕಟವಾಗಿದೆ. 

**

ಭಾರತದ ಪ್ರಧಾನಿ ಭ್ರಷ್ಟ ವ್ಯಕ್ತಿ ಎಂಬುದು ವಾಸ್ತವ. ಆದರೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭರವಸೆ ಕೊಟ್ಟು ಈ ವ್ಯಕ್ತಿ ಅಧಿಕಾರಕ್ಕೆ ಬಂದಿದ್ದಾರೆ

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ರಾಹುಲ್‌ ಗಾಂಧಿ ಮಧ್ಯವರ್ತಿಗಳ ಕುಟುಂಬದಿಂದ ಬಂದವರು. ಅವರ ತಂದೆ ರಾಜೀವ್‌ಗಾಂಧಿ ರಕ್ಷಣಾ ಖರೀದಿಯೊಂದರಲ್ಲಿ ಅಧಿಕೃತವಾಗಿಯೇ ಮಧ್ಯವರ್ತಿ ಆಗಿದ್ದರು 

ಸಂಬಿತ್‌ ಪಾತ್ರ, ಬಿಜೆಪಿ ವಕ್ತಾರ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !