ಶನಿವಾರ, ಫೆಬ್ರವರಿ 22, 2020
19 °C

ಪ್ರಧಾನಿ ಮೋದಿ, ಬೋಲ್ಸನಾರೊ ಮಾತುಕತೆ: 15 ಒಪ್ಪಂದಗಳಿಗೆ ಭಾರತ, ಬ್ರೆಜಿಲ್ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Narendra Modi with Jair Messias Bolsonaro

ನವದೆಹಲಿ: ಹೂಡಿಕೆ, ವ್ಯಾಪಾರ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ 15 ಒಪ್ಪಂದಗಳಿಗೆ ಭಾರತ ಮತ್ತು ಬ್ರೆಜಿಲ್ ಶನಿವಾರ ಸಹಿ ಹಾಕಿವೆ. ಭಾರತ ಪ್ರವಾಸದಲ್ಲಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಬಳಿಕ ಮಾತನಾಡಿದ ಮೋದಿ, ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.

‘ಭಾರತದ ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲಿ ಬ್ರೆಜಿಲ್ ಅಮೂಲ್ಯ ಪಾಲುದಾರ ರಾಷ್ಟ್ರವಾಗಿದೆ. ನಿಮ್ಮ (ಬೋಲ್ಸನಾರೊ) ಭೇಟಿಯಿಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯದ ದಿಸೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ’ ಎಂದು ಬ್ರೆಜಿಲ್ ಅಧ್ಯಕ್ಷರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸಕ್ಕೆ ಬ್ರೆಜಿಲ್ ಅಧ್ಯಕ್ಷ; ಭಾರತ–ಬ್ರೆಜಿಲ್ ಸಂಬಂಧ ವೃದ್ಧಿಯ ಹಾದಿ

‘ಉಭಯ ದೇಶಗಳ ನಡುವೆ ಇರುವ ಗಟ್ಟಿಯಾದ ಬಾಂಧವ್ಯ 15 ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಮತ್ತಷ್ಟು ಗಟ್ಟಿಯಾಗಿದೆ’ ಎಂದು ಜೈರ್ ಬೋಲ್ಸನಾರೊ ಹೇಳಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಜೈರ್ ಬೋಲ್ಸನಾರೊ ಅವರು ಶುಕ್ರವಾರವೇ ಭಾರತಕ್ಕೆ ಆಗಮಿಸಿದ್ದಾರೆ. ಬೋಲ್ಸನಾರೊ ಜತೆ ಅವರ ಸೊಸೆ ಲೆಟಿಸಿಯಾ ಫರ್ಮೋ, ಎಂಟು ಮಂದಿ ಸಚಿವರು, ಬ್ರೆಜಿಲ್ ಸಂಸತ್‌ನ ನಾಲ್ವರು ಸದಸ್ಯರನ್ನೊಳಗೊಂಡ ನಿಯೋಗವೂ ಭಾರತಕ್ಕೆ ಆಗಮಿಸಿದೆ.

ಭಾರತ ಮತ್ತು ಬ್ರೆಜಿಲ್ ನಡುವೆ ಅನೇಕ ದಶಕಗಳಿಂದಲೂ ಉತ್ತಮ ಸಂಬಂಧವಿದೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷರಾದ ಫರ್ನಾಂಡೊ ಹೆನ್ರಿಕ್ ಕಾರ್ಡೋಸೊ ಮತ್ತು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕ್ರಮವಾಗಿ 1996 ಮತ್ತು 2004ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಬಳಿಕ ಜೈರ್ ಬೋಲ್ಸನಾರೊ ಭಾರತಕ್ಕೆ ಭೇಟಿ ನೀಡುತ್ತಿರುವ ಬ್ರೆಜಿಲ್‌ನ ಮೂರನೇ ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು