ಬುಧವಾರ, ನವೆಂಬರ್ 13, 2019
28 °C

‘ಒಗ್ಗೂಡುವಿಕೆಗೆ ಅಡ್ಡಿಯಾಗಿದ್ದ ಗೋಡೆ ಈಗ ಕುಸಿದಿದೆ’

Published:
Updated:
Prajavani

ನವದೆಹಲಿ: ‘ಜರ್ಮನಿಯ ಬರ್ಲಿನ್‌ ಗೋಡೆಯನ್ನು 30 ವರ್ಷಗಳ ಹಿಂದೆ ಇದೇ ದಿನ ಕೆಡವಿ ಒಗ್ಗಟ್ಟು ಮೂಡಿಸಲಾಗಿತ್ತು. ಅದೇ ರೀತಿ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆ ಮತ್ತು ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಶಾಂತಿ ಮತ್ತು ಏಕತೆ ಸ್ಥಾಪಿಸುವ ವಾತಾವರಣ ಕಲ್ಪಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.‌

ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪೂರ್ವ ಮತ್ತು ಪಶ್ಚಿಮ ಜರ್ಮನಿಯನ್ನು ವಿಭಜಿಸಿದ್ದ ಗೋಡೆಯನ್ನು ಧ್ವಂಸಗೊಳಿಸಿದ್ದ‌ನ್ನು ಪ್ರಸ್ತಾಪಿಸಿ ಮಾತನಾಡಿದರು.‌

‘ನಾವು ಒಗ್ಗಟ್ಟಿನಿಂದ ಬದುಕಬೇಕು ಎನ್ನುವ ಸಂದೇಶವನ್ನು ತೀರ್ಪು ನೀಡಿದೆ. ಯಾವುದೇ ರೀತಿಯ ದ್ವೇಷ, ಮನಸ್ತಾಪಗಳನ್ನು ತ್ಯಜಿಸಬೇಕಾಗಿದೆ’ ಎಂದು ಹೇಳಿದ್ದಾರೆ. ‘ಇತಿಹಾಸದಲ್ಲಿ ಇದು ಸುವರ್ಣ ಅಧ್ಯಾಯವಾಗಿದೆ. ಎಲ್ಲ ಸಮುದಾಯಗಳು ಮುಕ್ತ ಮನಸ್ಸಿನಿಂದ ತೀರ್ಪು ಸ್ವಾಗತಿಸಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸಿದೆ’ ಎಂದು ಹೇಳಿದ್ದಾರೆ.

‘ಐವರು ನ್ಯಾಯಮೂರ್ತಿಗಳು ಸರ್ವಾನುಮತದಿಂದ ತೀರ್ಪು ನೀಡಿರುವುದು ಸಂತಸ ತಂದಿದೆ’ ಎಂದು ಮೋದಿ ಹೇಳಿದರು.

‘ಇದು ಯಾರ ಗೆಲವು ಅಥವಾ ಸೋಲು ಅಲ್ಲ. ಭಾರತದ ನ್ಯಾಯಾಂಗಕ್ಕೂ ಇದು ಸುವರ್ಣ ದಿನ. ತಾಳ್ಮೆಯಿಂದ ಪ್ರತಿಯೊಬ್ಬರ ವಿಚಾರಗಳನ್ನು ಸುಪ್ರೀಂ ಕೋರ್ಟ್‌ ಆಲಿಸಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಬೇಕು. ತೀರ್ಪಿನಿಂದ ಹೊಸ ಆಶಾಕಿರಣ ಮೂಡಿದಂತಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)